ಭದ್ರಾವತಿ: ಜನರ ಬಹುಬೇಡಿಕೆಯಾಗಿದ್ದ ಹೊಸಮನೆ ಮುಖ್ಯರಸ್ತೆಯು 60 ಅಡಿಗಳ ಮಾಸ್ಟರ್ ಪ್ಲಾನಿಗೆ ಒಳಪಟ್ಟಿದ್ದರು ನಗರಸಭೆ ಆಡಳಿತವು 50 ಅಡಿಗಳಿಗೆ ಸೀಮಿತಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿಗೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಬಹಳ ವರ್ಷಗಳಿಂದ ರಂಗಪ್ಪವೃತ್ತದಿಂದ ಹೊಸಮನೆಯ ಶಿವಾಜಿ ವೃತ್ತದವರಗಿನ ಮುಖ್ಯರಸ್ತೆಯು ಜನರಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ರಸ್ತೆ ಮಾರ್ಗದಲ್ಲಿ ಪ್ರತಿ ಭಾನುವಾರ ನಡೆಯುವ ಬಹುದೊಡ್ಡ ಸಂತೆ ದಿನದಂದು ಜನರು ನಡೆದಾಡುವುದು ಸಹ ದುಸ್ತರವಾಗಿತ್ತು. ಇಕ್ಕೆಲೆಗಳ ರಸ್ತೆ ಬದಿಯಲ್ಲಿ ಗೂಡಂಗಡಿಗಳು, ತಳ್ಳುವ ಗಾಡಿಗಳು, ಫುಟ್‌ಪಾತ್ ವ್ಯಾಪಾರಿಗಳಿಂದ ಕಿರಿ ಕಿರಿ ಹೆಚ್ಚಾಗಿತ್ತು. ಕಟ್ಟಡ ಮಾಲೀಕರು ಮನಬಂದಂತೆ ರಸ್ತೆಯನ್ನು ಆವರಿಸಿಕೊಂಡು ಬೃಹತ್ ಕಟ್ಟಡಗಳನ್ನು ಕಟ್ಟಿಕೊಂಡಿದ್ದರಿಂದ ತೊಂದರೆ ಉಂಟಾಗಿತ್ತು.
ಇವೆಲ್ಲವನ್ನು ಮನಗಂಡ ಶಾಸಕ ಬಿ.ಕೆ.ಸಂಗಮೇಶ್ವರ್ ಕಾಂಕ್ರೀಟ್ ರಸ್ತೆ ಅಗಲೀಕರಣಕ್ಕೆ ರಾಜ್ಯ ಸರಕಾರದಿಂದ 2.50 ಕೋಟಿ ರೂ ಅನುದಾನ ಮಂಜೂರು ಮಾಡಿಸಿದರು. ನಗರಸಭೆ ಆಡಳಿತವು ಸಹ ಮಾಸಿಕ ಅಧಿವೇಶನದಲ್ಲಿ ರಸ್ತೆ ಅಗಲೀಕರಣಕ್ಕೆ ಅಸ್ತು ನೀಡಿತ್ತು. ರಸ್ತೆ ಅಗಲೀಕರಣ ಮಾಡಲು ಪಿಡಬ್ಲ್ಯೂಡಿ ಇಲಾಖೆಯ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸರಕಾರ ಆದೇಶಿಸಿ ಮೇಲ್ವಿಚಾರಣೆಯನ್ನು ನಗರಸಭಾ ಆಡಳಿತಕ್ಕೆ ವಹಿಸಿದೆ.
ರಸ್ತೆ ಅಗಲೀಕರಣದ ವಿಷಯವು ಕಾಡ್ಗಿಚ್ಚಿನಂತೆ ಹರಡಿ ಹಲವು ಉಹಾಪೋಹಗಳಿಗೆ ತುತ್ತಾಗಿತ್ತು. 40 ಅಡಿಗಳಿಗೆ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಆರಂಭದಲ್ಲಿ ಗಾಳಿ ಸುದ್ದಿ ಹಬ್ಬಿತ್ತು. ಕೇವಲ 40 ಅಡಿಗಳಿಗೆ ಕಾಂಕ್ರೀಟ್ ರಸ್ತೆ ಸೀಮಿತಗೊಳಿಸಿ ರಸ್ತೆ ಅಗಲೀಕರಣ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ರಸ್ತೆ ಅಗಲೀಕರಣವು ಆಗುವುದಿಲ್ಲ. ಕೇವಲ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಬೃಹತ್ ಮರಗಳ ಮಾರಣ ಹೋಮ ಮಾತ್ರ ನಡೆದು ಸರಕಾರ ನೀಡಿದ ಅನುದಾನ ಪೋಲಾಗುವುದೆಂದು ಸಾರ್ವಜನಿಕರು ಶಾಸಕರ ಮೇಲೆ ಒತ್ತಡ ಹೇರಿದ್ದರು.
ಇವೆಲ್ಲವನ್ನು ಮನಗಂಡ ಶಾಸಕರು ಹಾಗು ಲ್ಯಾಂಡ್ ಆರ್ಮಿ ನಿಗಮದ ಅಧ್ಯಕ್ಷ ಬಿ.ಕೆ. ಸಂಗಮೇಶ್ವರ್ ನೇತೃತ್ವದಲ್ಲಿ ಕಟ್ಟಡ ಮಾಲೀಕರ ಮತ್ತು ವ್ಯಾಪಾರಸ್ಥರ ಹಾಗು ಸಾರ್ವಜನಿಕರ ಸಭೆ ನಡೆಸಿ ಚರ್ಚಿಸಿ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆದು ವ್ಯಾಪಾರಸ್ಥರಿಗೆ ಮತ್ತು ಕಟ್ಟಡ ಮಾಲೀಕರಿಗೆ ತೊಂದರೆಯಾಗದಂತೆ 50 ಅಡಿಗಳಿಗೆ ರಸ್ತೆ ಅಗಲೀಕರಣ ಮಾಡಲು ತೀರ್ಮಾನಿಸಿದರು.
ಅದರಂತೆ ಪಿಡಬ್ಲ್ಯೂಡಿ ಇಲಾಖೆಯು 2.50 ಕೋಟಿ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ. 50 ಅಡಿಗಳ ರಸ್ತೆ ಬದಲಿಗೆ ಕೇವಲ 40 ಅಡಿಗಳಿಗೆ ಸೀಮಿತಗೊಳಿಸಿ ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ಬದಿಯ ಬೃಹತ್ ಮರಗಳನ್ನು ಕಡಿತಲೆ ಮಾಡಿ ಮಾರಣ ಹೋಮ ಮಾಡಲಾಗಿದೆ. ಬಸ್ ತಂಗುದಾಣಗಳನ್ನು ತೆರವುಗೊಳಿಸಲಾಗಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ. ಆದರೆ ರಸ್ತೆಯನ್ನು 40 ಅಡಿಗೆ ಮಾಡಲಾಗುವುದೆಂದು ಅಧಿಕಾರಿಗಳು ಹೇಳುತ್ತಿರುವಾಗಲೆ ಕಟ್ಟಡ ಮಾಲೀಕರು ಮತ್ತು ವ್ಯಾಪಾರಸ್ಥರು ಅಧಿಕಾರಿಗಳ ವಿರುದ್ದ ಬೀದಿಗಿಳಿದಿದ್ದಾರೆ. ಸಂತೆ ಮುಂಭಾಗದಲ್ಲಿರುವ ಬೃಹತ್ ಕಟ್ಟಡ ಫೇಸ್ ಕಂಪ್ಯೂಟರ್ ಮಾಲೀಕರಿಗೆ ಮತ್ತು ಶಾಸಕರ ಅನುಯಾಯಿಗಳಿಗೆ ಅನುಕೂಲ ಕಲ್ಪಿಸಲು ಈ ಅನ್ಯಾಯವೆಸಗಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.
ರಸ್ತೆ ಅಗಲೀಕರಣವು ತಾರತಮ್ಯದಿಂದ ಕೂಡದೆ ರಾಜಕೀಯ ಮುಕ್ತ ಕಾಮಗಾರಿ ಮಾಡಬೇಕೆಂದು ವ್ಯಾಪಾರಸ್ಥರು ಹೇಳಿದರೆ, ಕಟ್ಟಡ ಮಾಲೀಕರು ರಸ್ತೆ ಮಧ್ಯೆ ಭಾಗದಿಂದ ನಿಗದಿ ಪಡಿಸಿದ ಅಳತೆಗೆ ತಾರತಮ್ಯ ತೋರದೆ ಇಕ್ಕೆಲಗಳಲ್ಲು ಒಂದೇ ಮಾದರಿ ಅಗಲೀಕರಣ ಮಾಡಬೇಕೆಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಮನಬಂದಂತೆ ಅಗಲೀಕರಣ ಮಾಡದೆ ರಸ್ತೆ ಎರಡು ಬದಿಯ ಚರಂಡಿಗಳ ಮಧ್ಯಭಾಗದಲ್ಲಿ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಒಟ್ಟಾರೆ ರಂಗಪ್ಪವೃತ್ತದಿಂದ ಶಿವಾಜಿವೃತ್ತದ ವರಗಿನ ನಿವಾಸಿಗಳಿಗೆ ಹಾಗು ಕಟ್ಟಡ ಮಾಲೀಕರಿಗೆ ರಸ್ತೆ ಅಗಲೀಕರಣದಿಂದ ನುಂಗಲಾರದ ತುತ್ತಾಗಿದೆ.
ಶಾಸಕ ಸಂಗಮೇಶ್ವರ್ ಸ್ಪಷ್ಟೀಕರಣ
ಹೊಸಮನೆ ಮುಖ್ಯರಸ್ತೆಯ ಅಗಲೀಕರಣ ರಾಜಕೀಯ ಮುಕ್ತ ಹಾಗು ಸಾರ್ವಜನಿಕರ ಹಿತಾಸಕ್ತಿಗಾಗಿ ಕೈಗೆತ್ತಿಕೊಂಡಿರುವ 2.50 ಕೋಟಿ ರೂ ವೆಚ್ಚದ ಕಾಂಕ್ರೀಟ್ ಕಾಮಗಾರಿಯಾಗಿದೆ. ನಮ್ಮ ಅನುಯಾಯಿಗಳಿಗೆ ಅಥವಾ ಬೇಕಾದ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸುವ ಅಥವಾ ಅಂತಹ ಕಟ್ಟಡಗಳನ್ನು ಉಳಿಸುವ ಕ್ಷುಲ್ಲಕ ರಾಜಕಾರಣ ಎಂದಿಗೂ ಮಾಡುವುದಿಲ್ಲ. ಜನರ ಅನುಕೂಲಕ್ಕಾಗಿ ಹೆಚ್ಚು ಹಾನಿಯಾಗದಂತೆ 60 ಅಡಿಗಳ ಬದಲಿಗೆ 50 ಅಡಿಗಳಿಗೆ ಸೀಮಿತಗೊಳಿಸಿ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಸಾರ್ವಜನಿಕರು ಯಾವುದೇ ಅಪ ಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಶಾಸಕರು ಹಾಗು ಲ್ಯಾಂಡ್ ಆರ್ಮಿ ನಿಗಮದ ಅಧ್ಯಕ್ಷ ಬಿ.ಕೆ. ಸಂಗಮೇಶ್ವರ್ ಸ್ಪಷ್ಟೀಕರಿಸಿದರು.
ರಸ್ತೆ ಅಗಲೀಕರಣದಲ್ಲಿ ರಾಜಕೀಯ ಸಲ್ಲದು: ಮಾಜಿ ಶಾಸಕ ಅಪ್ಪಾಜಿ
ಹೊಸಮನೆ ಮುಖ್ಯರಸ್ತೆ ಅಗಲೀಕರಣ ವಿಚಾರಸದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಾರತಮ್ಯ ತೋರದೆ, ರಾಜಕೀಯ ಮಾಡದೆ ಸರ್ವರನ್ನು ಒಂದಾಗಿ ಕಾಣಬೇಕು. ಯಾವುದೋ ಇಚ್ಚಾಶಕ್ತಿಗೆ ರಸ್ತೆಯ ನಕ್ಷೆಯನ್ನೇ ಅದಲು ಬದಲು ಮಾಡಬಾರದು. ರಸ್ತೆ ಮಧ್ಯ ಭಾಗದಿಂದ 2 ಕಡೆ ತಾರತಮ್ಯ ತೋರದೆ, ರಾಜಕೀಯ ಬೆರಸದೆ ಸಮವಾಗಿ ರಸ್ತೆ ಅಗಲೀಕರಣ ಮಾಡಬೇಕು. ಒಂದುಕಡೆ ರಸ್ತೆ ಮಧ್ಯ ಭಾಗದಿಂದ ಮತ್ತೊಂದು ಕಡೆ ಚರಂಡಿಯಿಂದ ಚರಂಡಿಗೆ ಅಳತೆ ಎಂಬ ಮಾನಗೇಡಿತನ ಮಾಡಬಾರದು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳ ಮತ್ತು ವ್ಯಾಪಾರಸ್ಥರ ಜೊತೆ ಚರ್ಚಿಸಿ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಎಚ್ಚರಿಸಿದರು.
ಒತ್ತಡಗಳಿಗೆ ಮಣಿದು ಕರ್ತವ್ಯ ನಿರ್ವಹಿಸುತ್ತಿಲ್ಲ: ಪೌರಾಯುಕ್ತ ಮನೋಹರ್
ರಂಗಪ್ಪವೃತ್ತದಿಂದ ಶಿವಾಜಿ ವೃತ್ತದ ವರಗಿನ ಹೊಸಮನೆ ಮುಖ್ಯರಸ್ತೆಯ ಕಾಂಕ್ರೀಟ್ ರಸ್ತೆ ಕಾಮಗಾರಿಯು 2.50 ಕೋಟಿ ರೂ ವೆಚ್ಚದಲ್ಲಿ ಪಿಡಬ್ಕ್ಯೂಡಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆಯ ಮಾಸ್ಟರ್ ಪ್ಲಾನ್ 60 ಅಡಿಗಳಿಗೆ ಸೀಮಿತವಾಗಿದೆ.
ಶಾಸಕರು ವ್ಯಾಪಾರಸ್ಥರ ಮತ್ತು ಕಟ್ಟಡ ಮಾಲೀಕರ ಹಾಗೂ ಅಧಿಕಾರಿಗಳ ಸಭೆ ನಡೆಸಿ 50 ಅಡಿಗಳ ರಸ್ತೆ ಅಗಲೀಕರಣಕ್ಕೆ ತೀರ್ಮಾನಿಸಿದ್ದಾರೆ. ಪ್ರಸ್ತುತವೀಗ 40 ಅಡಿಗಳ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 2 ಬದಿಗಳಲ್ಲಿ ತಲಾ 10 ಅಡಿಗಳಂತೆ ಒಟ್ಟು 20 ಅಡಿ ಜಾಗದಲ್ಲಿ ಫುಟ್‌ಪಾತ್ ಮತ್ತು ಚರಂಡಿ ನಿರ್ಮಿಸಲಾಗುತ್ತದೆ. ಸರಕಾರವೀಗ 2.50 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ. ಆ ಹಣದಲ್ಲಿ 40 ಅಡಿಗಳ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು.
ರಸ್ತೆ ಕಾಮಗಾರಿ ಮುಗಿದ ನಂತರ ಸರಕಾರದಿಂದ ಅಂದಾಜು 2 ಕೋಟಿ ರೂ ಅನುದಾನ ಪಡೆದು 20 ಅಡಿಗಳ ಫುಟ್‌ಪಾತ್ ಮತ್ತು ಚರಂಡಿ ನಿರ್ಮಾಣ ಕೈಗೊಳ್ಳಲಾಗುವುದು. ಸಂತೆ ಮೈದಾನ ಮುಂಭಾಗದ ಫೇಸ್ ಕಂಪ್ಯೂಟರ್ ಕಟ್ಟಡ ಉಳಿಸಲು ಯಾವುದೇ ತಾರತಮ್ಯ ಮಾಡಿಲ್ಲ. ರಸ್ತೆ ಮಧ್ಯಭಾಗದಿಂದ 20 ಅಡಿಗಳಿಗೆ ಟೇಪು ಹಿಡಿದು ಅಳತೆ ಮಾಡಿದಾಗ ಕೇವಲ 3 ಅಡಿಗಳಿಗೆ ಬೃಹತ್ ಕಟ್ಟಡ ಒಡೆಯಬೇಕಾಗಿದೆ. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಚರಂಡಿ ಮತ್ತು ಫುಟ್‌ಪಾತ್ ಮಾಡುವಾಗ 3 ಅಡಿಗಳನ್ನು ಸೇರಿಸಿ ನಿರ್ದಿಷ್ಟ ಪಡಿಸಿದ ಅಳತೆಗೆ ಕಟ್ಟಡವನ್ನು ತೆರವುಗೊಳಿಸಲಾಗುವುದು. ಸಾರ್ವಜನಿಕರು ಹಾಗೂ ಕಟ್ಟಡ ಮಾಲೀಕರು ಅಪಾರ್ಥ ಮಾಡಿಕೊಳ್ಳಬಾರದೆಂದು ತಿಳಿಸಿದ ಪೌರಾಯುಕ್ತ ಮನೋಹರ್ ರಸ್ತೆ ಅಗಲೀಕರಣ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟಪಡಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post