ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೋವಿಡ್-19 ಎರಡನೆಯ ಅಲೆಯಲ್ಲಿ ನಗರದಾದ್ಯಂತ ಸೋಂಕಿತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಜಿಲ್ಲಾಡಳಿತದ ನಿನ್ನೆಯ ಮಾಹಿತಿಯಂತೆ ಇಡಿಯ ಜಿಲ್ಲೆಯಲ್ಲೇ ಭದ್ರಾವತಿಯಲ್ಲಿ ಅತಿಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

ಇದೇವೇಳೆ ಕಳೆದ ವರ್ಷ ಸೋಂಕು ಪತ್ತೆಯಾದ ಪ್ರದೇಶವನ್ನು ಸೀಲ್‌ಡೌನ್ ಮಾಡುತ್ತಿದ್ದ ಮಾದರಿಯಲ್ಲೇ ಈ ಬಾರಿಯೂ ಸಹ ಆರಂಭವಾಗಿದೆ. ಒಂದೇ ಕುಟುಂಬದಲ್ಲಿ 9 ಮಂದಿ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಪೇಪರ್‌ಟೌನ್ ನಾಲ್ಕನೇ ವಾರ್ಡ್‌ನ ಸಣ್ಣಪ್ಪ ಅವರ ನಿವಾಸದ ಬಳಿಯ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್‌ಗೆ ಮಾಹಿತಿ ನೀಡಿದ, ನಗರಸಭೆ ಆಯುಕ್ತ ಮನೋಹರ್ ಒಂದೇ ಮನೆಯಲ್ಲಿ 9 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಡೀ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಭಾಗದಿಂದ 14 ದಿನಗಳ ಕಾಲ ಯಾರೂ ಹೊರಕ್ಕೆ ಬರುವಂತಿಲ್ಲ. ಹಾಗೂ ಯಾರೂ ಒಳ ಹೋಗುವಂತಿಲ್ಲ. ಅಲ್ಲದೆ ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದರು.
ಎಲ್ಲಾ ವಾರ್ಡ್‌ಗಳಲ್ಲಿ ಸ್ಯಾನಿಟೇಸೇಷನ್ ಆರಂಭ:
ನಗರದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಸೋಂಕು ನಿವಾರಕ ಸಿಂಪಡಣೆ ಕಾರ್ಯಕ್ಕೆ ಆಯಕ್ತರು ಚಾಲನೆ ನೀಡಿದ್ದಾರೆ.

ಸೋಂಕಿತರ ಮನೆಗೆ ಟೇಪಿಂಗ್:
ಕೊರೋನಾ ಎರಡನೆಯ ಅಲೆಯಲ್ಲಿ ಸೋಂಕಿತರ ನಿವಾಸವನ್ನು ಅಥವಾ ಆ ರಸ್ತೆಯನ್ನು ಸೀಲ್‌ಡೌನ್ ಮಾಡುವುದು ಅಥವಾ ಸ್ಟಿಕರ್ ಅಂಟಿಸುವ ಕಾರ್ಯವನ್ನು ಮಾಡಲಾಗುತ್ತಿರಲಿಲ್ಲ. ಆದರೆ, ನಗರದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದರ ಭಾಗವಾಗಿ ಸೋಂಕು ಪತ್ತೆಯಾದರ ನಿವಾಸವನ್ನು ಸ್ಯಾನಿಟೈಸ್ ಮಾಡಿ ಸದರಿ ನಿವಾಸವನ್ನು ಟೇಪಿಂಗ್ ಮಾಡಲಾಗುತ್ತಿದೆ.

ಒಂದು ದಿನದ ಅವಧಿಯಲ್ಲಿ ನಗರದಾದ್ಯಂತ 245 ಸೋಂಕಿತರ ನಿವಾಸಕ್ಕೆ ಟೇಪ್ ಅಂಟಿಸಲಾಗಿದೆ. ಈ ಮೂಲಕ ಟೇಪಿಂಗ್ ಮಾಡಲಾಗಿರುವ ನಿವಾಸದ ಅಕ್ಕಪಕ್ಕದ ನಿವಾಸಿಗಳಿಗೆ ಎಚ್ಚರಿಕೆ ನೀಡುವ ಜೊತೆಯಲ್ಲಿಯೇ ಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















