ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕು ಆಡಳಿತ ಯಂತ್ರ ಕುಸಿದಿದ್ದು, ಕಂದಾಯ ಹಾಗು ಅರಣ್ಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಇದರಿಂದಾಗಿ ರೈತರು ಹಾಗು ಕೃಷಿ ಕಾರ್ಮಿಕರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ಜೆಡಿಎಸ್ ಮುಖಂಡರು ಆರೋಪಿಸಿದರು.
ಗುರುವಾರ ತಾಲೂಕು ಕಛೇರಿ ಆವರಣದಲ್ಲಿ ಜಾತ್ಯತೀತ ಜನತಾದಳ ವತಿಯಿಂದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ, ಜೆಡಿಎಸ್ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಪ್ರಮುಖರಾದ ಗೊಂದಿ ಜಯರಾಂ, ಎಂ.ಎ ಅಜಿತ್, ತಿಮ್ಮೇಗೌಡ, ಸುರೇಶ್, ಎ. ಮಸ್ತಾನ್, ಎಚ್.ಬಿ ರವಿಕುಮಾರ್ ಸೇರಿದಂತೆ ಇನ್ನಿತರರು, ಕಂದಾಯ ಹಾಗು ಅರಣ್ಯ ಇಲಾಖೆ ಅಧಿಕಾರಿಗಳು ಭೂಮಿ ಜಂಟಿ ಸರ್ವೇ ಮಾಡದೆ, ರೈತರಿಗೆ ಯಾವುದೇ ಪೋಡಿ ದುರಸ್ತಿ ಮಾಡದೆ ಇರುವುದರಿಂದ ಹಲವರಿಗೆ ಖಾತೆ ಬದಲಾವಣೆ ಮಾಡಿಕೊಳ್ಳಲು ತೊಂದರೆಯಾಗುತ್ತಿದೆ ಎಂದರು.
ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಭೂಮಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿದ್ದು, ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆದೊಟ್ಟಿ ಮತ್ತು ನೆಟ್ಟಕಲ್ಲಹಟ್ಟಿ ಗ್ರಾಮಗಳಲ್ಲಿ ಕಂದಾಯ ಹಾಗು ಅರಣ್ಯ ಭೂಮಿಯನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೇರೆಯವರು ಕಬಳಿಸುತ್ತಿದ್ದಾರೆ. ತಾಲೂಕು ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದರು.
ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆ ಗಂಗೂರು ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಏಕಾಏಕಿ ನೂರಾರು ಅಡಕೆ ಸಸಿಗಳನ್ನು ಕಡಿದು ಹಾಕಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಯಾವುದೇ ನೋಟಿಸ್ ಸಹ ನೀಡಿರುವುದಿಲ್ಲ. ಜಮೀನಿನ ಮಾಲೀಕರೊಂದಿಗೆ ಚರ್ಚಿಸದೆ, ಯಾವುದೇ ಪರಿಹಾರ ಸಹ ನೀಡದೇ ದೌರ್ಜನ್ಯವೆಸಗಿರುವುದು ಖಂಡನೀಯ. ಅಲ್ಲದೆ ವಿನಾಕಾರಣ ಕೆಲವರ ವಿರುದ್ಧ ಜಾತಿನಿಂದನೆ ಪ್ರಕರಣಗಳನ್ನು ದಾಖಲಿಸಿ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸದೆ ಒತ್ತಡಕ್ಕೆ ಮಣಿದು ದೌರ್ಜನ್ಯವೆಸಗುತ್ತಿದ್ದಾರೆಂದು ದೂರಿದರು.
ತಾಲೂಕು ಆಡಳಿತದ ವಿರುದ್ಧ ಉಪವಿಭಾಗಾಧಿಕಾರಿಗಳ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಚಂದ್ರೇಗೌಡ, ಧರ್ಮೇಗೌಡ, ಡಿ ಆನಂದ, ಜಯರಾಮ, ಮಧುಸೂದನ್, ಮೋಹನ್ ರಾವ್, ಧರ್ಮರಾಜ್, ಭಾಗ್ಯಮ್ಮ, ಸುಬ್ಬಣ್ಣ, ಉದಯಕುಮಾರ್, ಆರ್. ಮೋಹನ್ ಕುಮಾರ್, ಗುಣಶೇಖರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post