ಭದ್ರಾವತಿ: ಶಾಲಾ ಮಕ್ಕಳಿಗೆ ವರ್ಷದಲ್ಲಿ 02 ಭಾರಿ ನೀಡುವ ಜಂತು ಹುಳು ಮಾತ್ರೆಯ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದು ತಹಸೀಲ್ದಾರ್ ಸೋಮಶೇಖರ್ ತಿಳಿಸಿದರು.
ಹಳೇನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರಿಂದ ಪಡೆದ ಮಾತ್ರೆ ಹಾಗೂ ಔಷಧಿಗಳನ್ನು ಸಕಾಲದಲ್ಲಿ ಸೇವಿಸುವುದರಿಂದ ಮಕ್ಕಳ ಆರೋಗ್ಯ ಸುಧಾರಿಸುವುದರೊಂದಿಗೆ ಮಕ್ಕಳಲ್ಲಿ ಅಪೌಷ್ಠಿಕತೆ ಕಡಿಮೆಯಾಗಿ ಕಲಿಕೆಯಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇದು ಒಂದು ಉತ್ತಮ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಶುಚಿತ್ವ ಕಾಪಾಡಿಕೊಳ್ಳುವುದು ಶುದ್ಧ ಕುಡಿಯುವ ನೀರನ್ನು ಉಪಯೋಗಿಸುವುದರಿಂದ ತರಕಾರಿಯನ್ನು ಶುದ್ದವಾದ ನೀರಿನಿಂದ ತೊಳೆಯುವುದರಿಂದ ಪರಿಸರದ ಸ್ವಚ್ಚತೆಯಿಂದಲು ಜಂತುಹುಳ ತಡೆಗಟ್ಟಬಹುದು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಆರ್. ಗಾಯತ್ರಿ ಮಾತನಾಡಿ, ಪ್ರತಿ ವರ್ಷ ಎರಡು ಭಾರಿಯಂತೆ ಜಂತುಹುಳುಗಳ ಮಾತ್ರೆಯನ್ನು ಆರೋಗ್ಯ ಇಲಾಖೆಯಿಂದ ನೀಡಲಾಗುತ್ತದೆ. ಪ್ರತಿ ಮಕ್ಕಳು 01 ರಿಂದ 05 ವರ್ಷದ ಮಕ್ಕಳಿಗೆ ಅಂಗನವಾಡಿಯಲ್ಲಿ 200 ಎಂಜಿಯಂತೆ ಅರ್ಧ ಮಾತ್ರೆ ಹಾಗೂ 6 ರಿಂದ 19 ವರ್ಷದ ಮಕ್ಕಳಿಗೆ 400 ಎಂಜಿ ಮಾತ್ರೆಯನ್ನು ಕೊಡಲಾಗುತ್ತದೆ. ಊಟದ ನಂತರ ಮಾತ್ರೆ ಜಗಿದು ತಿನ್ನುವುದು ಇಲ್ಲವೇ ಪುಡಿಮಾಡಿ ಕುಡಿಸುವುದರಿಂದ ಹೊಟ್ಟೆಯಲ್ಲಿರುವ ಜಂತುಹುಳುಗಳು ನಾಶವಾಗುತ್ತವೆ. ಇದರಲ್ಲಿ ಹೆಚ್ಚಿನ ತೊಂದರೆ ಉಂಟಾಗುವುದಿಲ್ಲ ಎಂದ ಅವರು ಅಂತಹ ಅನಾಹುತಗಳು ಕಂಡು ಬಂದಲ್ಲಿ ಸಮೀಪದ ಆಸ್ಪತ್ರೆಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸಿಡಿಪಿಒ ಸುರೇಶ್ ಮಾತನಾಡಿ, ಪ್ರತಿ ವರ್ಷವು ಇಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಯಲು ಶೌಚಾಲಯಗಳನ್ನು ನಿಯಂತ್ರಿಸಿದ್ದಲ್ಲಿ ಜಂತುಹುಳು ನಿವಾರಣೆಗೆ ಕಡಿವಾಣ ಹಾಕಬಹುದಾಗಿದೆ. ಶೌಚ ನಂತರ ಸಾಬೂನಿನಿಂದ ಕೈಗಳನ್ನು ತೊಳೆಯುವುದರಿಂದ ಜಂತುಹುಳು ಬಾಧೆಯನ್ನು ತಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ನೀಲೇಶ್ ರಾಜ್, ಅಕ್ಷರ ದಾಸೋಹ ಸಹ ನಿರ್ದೇಶಕ ನಟರಾಜ್, ಆಸ್ಪತ್ರೆಯ ಮಧುಮತಿ, ರೇವತಿ, ನಾಗರತ್ನ, ಕೆಂಚಮ್ಮ, ಆರೋಗ್ಯ ಸಿಬ್ಬಂದಿ ವೀಣಾಮುರಳಿ, ಗ್ರೇಷಿಯ, ಆಶಾ ಕಾರ್ಯಕರ್ತೆಯರು ಅಂಗನವಾಡಿ ಮೇಲ್ವಿಚಾರಕರು ಸೇರಿದಂತೆ ಹಲವರು ಭಾಗವಹಿಸಿದ್ದರು. ಆರ್. ಚಂದ್ರಕಲಾ ಪ್ರಾರ್ಥಿಸಿ, ವಸಂತ ಸ್ವಾಗತಿಸಿದರೆ, ಆಶಾ ಮೆಂಟರ್ ವಂದಿಸಿ, ಶೋಭ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post