ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನೆ ವೇಳೆ ಅಂಗಿ ಬಿಚ್ಚಿದ ಶಾಸಕ ಬಿ.ಕೆ. ಸಂಗಮೇಶ್ವರ್ ಅವರನ್ನು ಸದನದಿಂದ ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ.
ಈ ಕುರಿತಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಆದೇಶ ಹೊರಡಿಸಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ರಾಷ್ಟ್ರ, ಒಂದು ಚುನಾವಣೆ ವಿಚಾರ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಇದು ಆರ್’ಎಸ್’ಎಸ್ ಅಜೆಂಡಾ ಇಂತಹ ವಿಚಾರದ ಚರ್ಚೆ ಬೇಡ ಎಂದು ಗದ್ದಲ ಎಬ್ಬಿಸಿದರು.
ಈ ವೇಳೆ ಪ್ರತಿಪಕ್ಷಗಳ ವಿರೋಧದ ನಡುವೆಯೂ ಒಂದು ದೇಶ, ಒಂದು ಚುನಾವಣೆ ವಿಚಾರ ಚರ್ಚೆಗೆ ಮುಂದಾಗ ಸ್ಪೀಕರ್ ನಡೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು.
ಈ ವೇಳೆ ಶಾಸಕ ಸಂಗಮೇಶ್ವರ್ ಅವರು ಅಂಗಿ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸಂಗಮೇಶ್ವರ್ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮೊದಲಿಗೆ ಕಲಾಪವನ್ನು ಮುಂದೂಡಿದ್ದರು. ಮತ್ತೆ ಸದನ ಸೇರುತ್ತಿದ್ದಂತೆ, ಸಂಗಮೇಶ್ವರ್ ಅವರು ಅಗೌರವದಿಂದ ನಡೆದುಕೊಂಡಿರುವುದರ ವಿರುದ್ಧ ಪ್ರಸ್ತಾವನೆ ಮಂಡಿಸಲಾಯಿತು.
ಧ್ವನಿ ಮತದ ಮೂಲಕ ಪ್ರಸ್ತಾವನೆಗೆ ಒಪ್ಪಿಗೆ ಪಡೆದ ಕಾಗೇರಿ ಅವರು, ’ಸಂಗಮೇಶ್ವರ್ ಅಸಭ್ಯತೆ ಮತ್ತು ಅಗೌರವದಿಂದ ನಡೆದು ಕೊಂಡಿರುವುದರಿಂದ ಒಂದು ವಾರಗಳ ಕಾಲ ಸದನದಿಂದ ಹೊರ ನಡೆಯುತ್ತಾರೆ’ ಎಂದು ಪ್ರಕಟಿಸಿದರು.
ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಿಯಮಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮಾರ್ಚ್ 12ರ ವರೆಗೂ ಸಂಗಮೇಶ್ವರ್ ಅವರು ಸದನಕ್ಕೆ ಹಾಜರಾಗುವುದರಿಂದ ತಡೆಯಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post