ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನುದ್ಧೇಶಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿತರಿಗಾಗಿ ಮೀಸಲಿರಿಸಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಗಳಿಗೆ ಮಾತ್ರ ಆಕ್ಸಿಜನ್ ಸೌಲಭ್ಯವಿದ್ದು, ಇನ್ನುಳಿದ 50 ಬೆಡ್‌ಗಳಿಗೆ ತಾಲೂಕು ಆಸ್ಪತ್ರೆಯ ಆವರಣದಲ್ಲಿಯೇ ಆಕ್ಸಿಜನ್ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆ ಆವರಣದ 25*25 ಜಾಗದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗುತ್ತಿದ್ದು, ಈ ಕಾಮಗಾರಿಗೆ ಶಾಸಕರ ನಿಧಿಯಿಂದ ಹಣ ವಿನಿಯೋಗಿಸುವಂತೆ ಜಿಲ್ಲಾಧಿಕಾರಿ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.
ಹಾಲಿ ಇರುವ 50 ಬೆಡ್‌ಗಳಿಗೆ ಆಕ್ಸಿಜನ್ ಸಾಕಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ. ಇಒ, ಪಿಡಿಒಗಳು ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಇರುವುದೇ ಸೋಂಕು ಹೆಚ್ಚಾಗಲು ಕಾರಣವಾಗಿದ್ದು, ಇವರ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.
ಈಗ ಸರ್ಕಾರಿ ಆಸ್ಪತ್ರೆಯಲ್ಲಿ 3 ಐಸಿಯು ಬೆಡ್ ಇದ್ದು, ಅದನ್ನು 10ಕ್ಕೆ ಏರಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯ ಬಂದಲ್ಲಿ ದೇವರ ನರಸೀಪುರದಲ್ಲಿ 160 ಹಾಗೂ ದೊಡ್ಡೇರಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 100 ಬೆಡ್’ಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತದೆ ಎಂದರು.
ಈ ವೇಳೆ ಕಲ್ಪ ಮೀಡಿಯಾ ಹೌಸ್’ನೊಂದಿಗೆ ಮಾತನಾಡಿದ ಶಾಸಕರು, ಜನರ ಆರೋಗ್ಯ ಹಾಗೂ ಜೀವ ಅತ್ಯಂತ ಮುಖ್ಯವಾದುದು. ಇದಕ್ಕೆ ಅಗತ್ಯವಾಗಿರುವ ಎಲ್ಲ ರೀತಿಯ ತುರ್ತು ಚಿಕಿತ್ಸೆ ಹಾಗೂ ವೈದ್ಯಕೀಯ ವ್ಯವಸ್ಥೆ ಮಾಡುವುದು ನಮ್ಮ ಮೊದಲ ಆದ್ಯತೆ. ಕೋವಿಡ್ ಸೋಂಕು ಹೊಡೆದೋಡಿಸಿ, ತಾಲೂಕಿನ ಜನರ ಜೀವ ಉಳಿಸಿ, ಆರೋಗ್ಯ ಕಾಪಾಡುವ ದೃಷ್ಠಿಯಿಂದ ಎಲ್ಲ ರೀತಿಯ ಗರಿಷ್ಠ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರಸಭೆ, ತಾಲೂಕು ಆಡಳಿತ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಇದಕ್ಕಾಗಿ ಅವಿರತ ಶ್ರಮಿಸುತ್ತಿದೆ. ಜನರೂ ಸಹ ಇದಕ್ಕೆ ಸಹಕಾರ ನೀಡಬೇಕು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಇಇ ರವಿಕಿರಣ್ ಮಾತನಾಡಿ, ಶಾಸಕರ ಪ್ರಯತ್ನದಿಂದ ಆಸ್ಪತ್ರೆ ಹಿಂಭಾಗದಲ್ಲಿ 25*25 ವ್ಯಾಪ್ತಿಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಜಾಗ ಗುರುತಿಸಲಾಗಿದೆ. ಗಾಳಿಯಲ್ಲಿ ಪ್ರತಿ ನಿಮಿಷಕ್ಕೆ 400 ಲೀ ಆಮ್ಲಜನಕ ಉತ್ಪಾದಿಸುವ ಉದ್ದೇಶ ಹೊಂದಿದ್ದು, ಇನ್ನು 2 ವಾರದಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಲಿದೆ. ಕಟ್ಟಡ ಕಾಮಗಾರಿಗೆ 18 ಲಕ್ಷ ಸೇರಿದಂತೆ ಒಟ್ಟು 100.3 ರೂ. ಲಕ್ಷ ವೆಚ್ಚವಾಗಲಿದೆ ಎಂದರು.
ಆಸ್ಪತ್ರೆಯ ಆವರಣದಲ್ಲೇ ಗಾಳಿಯಲ್ಲಿ ಆಕ್ಸಿಜನ್ ಉತ್ಪಾದಿಸಲಾಗುವ ಕಾರಣ ಜಂಬೋ ಸಿಲಿಂಡರ್‌ಗಳ ಅವಶ್ಯಕತೆ ಇರುವುದಿಲ್ಲ. ಪೈಪ್‌ಲೈನ್ ಮೂಲಕ ಸಪ್ಲೈ ಮಾಡಲಾಗುವುದು. ಆದರೆ ಹೊರಗಡೆ ನೀಡುವ ಅಗತ್ಯವಿದ್ದರೆ ಮಾತ್ರ ಸಿಲಿಂಡರ್ ಬೇಕಾಗಬಹುದು. ಜೂನ್ ಕೊನೆಯಲ್ಲಿ ಆಕ್ಸಿಜನ್ ಬಳಕೆಗೆ ಲಭ್ಯವಾಗಲಿದೆ ಎಂದರು.
ನಗರಸಭೆ ಅಧಿಕಾರಿ ಸುನೀತಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post