ಭದ್ರಾವತಿ: ನಗರಸಭೆ ಆಡಳಿತವು ಪ್ರಸ್ತುತ ಸಾಲಿನ ನಾಡ ಹಬ್ಬ ದಸರಾ ಮಹೋತ್ಸವ-2019 ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆಯಲ್ಲಿ ತೊಡಗಿದೆ. ಉತ್ಸವಕ್ಕೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಸ್. ಕುಮಾರಸ್ವಾಮಿ ನಾಡದೇವತೆ ಶ್ರೀ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಪೌರಾಯುಕ್ತ ಮನೋಹರ್ ಹೇಳಿದರು.
ಅವರು ಬುಧವಾರ ನಗರಸಭಾ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ನಗರಸಭೆ ಆಡಳಿತವು ನವರಾತ್ರಿಯ ಅಂತಿಮ ದಿನದಂದು ಅದ್ದೂರಿಯಾಗಿ ವೈಭವದ ಉತ್ಸವ ನೆರವೇರಿಸಿ ಬನ್ನಿ ಮುಡಿಯಲಾಗುತ್ತಿತ್ತು. ಆದರೆ ಪ್ರಸ್ತುತ ವರ್ಷದಲ್ಲಿ 9 ದಿನಗಳ ಕಾಲ ವಿವಿಧ ಬಗೆಯ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಮೇಳಗಳನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಕಳೆದ ವರ್ಷ 25 ಲಕ್ಷ ರೂ ವೆಚ್ಚ ಭರಿಸಲಾಗುತ್ತಿತ್ತು. ಈ ವರ್ಷ 21.5 ಲಕ್ಷ ರೂ ವೆಚ್ಚದಲ್ಲಿ 9 ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸೆ.29 ರ ಭಾನುವಾರ: ಬೆಳಿಗ್ಗೆ 10 ಗಂಟೆಗೆ ಗ್ರಾಮದೇವತೆ ಶ್ರೀ ಹಳದಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀಚಾಮುಂಡೇಶ್ವರಿ ದೇವಿಗೆ ಪೂಜೆ ನೆರವೇರಿಸಿ ಅಲ್ಲಿಂದ ಹಳೇನಗರದ ಕನಕಮಂಟಪ ಮೈದಾನಕ್ಕೆ ಮೆರವಣಿಗೆ ಮೂಲಕ ತೆರಳಿ ನಾಡಹಬ್ಬಕ್ಕೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಎಸ್. ಕುಮಾರಸ್ವಾಮಿ ಚಾಲನೆ ನೀಡುವರು. ಸಂಜೆ ಶಾಸಕ ಬಿ.ಕೆ. ಸಂಗಮೇಶ್ವರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ನೃತ್ಯ ರೂಪಕ ನಡೆಯಲಿದೆ.
ಸೆ.30 ರ ಸೋಮವಾರ: ಬೆಳಿಗ್ಗೆ ಯುವ ದಸರಾ ಮತ್ತು ಕ್ರೀಡಾ ಮತ್ತು ಭಾಷಣ ಸ್ಪರ್ಧೆಯು ಬಲಿಜ ಸಮುದಾಯ ಭವನದಲ್ಲಿ ನಡೆದರೆ, ಸಂಜೆ 6.30 ಕ್ಕೆ ಕನಕಮಂಟಪ ಮೈದಾನದಲ್ಲಿ ಸಂಗೀತ ಭಾವ ಸಂಗಮ ಹಾಗು ಹಾಸ್ಯ-ಲಾಸ್ಯ ಕಾರ್ಯಕ್ರಮ ನಡೆಯಲಿದೆ.
ಅ.1 ರ ಮಂಗಳವಾರ: ಕನಕಮಂಟಪ ಮೈದಾನದಲ್ಲಿ ಬೆಳಿಗ್ಗೆ ಕವಿಗೋಷ್ಟಿ, ಸಂಜೆ ಸುಗಮ ಸಂಗೀತ ಕಾರ್ಯಕ್ರಮ. ವೀರಭದ್ರೇಶ್ವರ ಚಿತ್ರಮಂದಿರದಲ್ಲಿ 2 ದಿನಗಳ ಕಾಲ ಉಚಿತ ಚಲನಚಿತ್ರ ಪ್ರದರ್ಶನ
ಅ.2 ರ ಬುಧವಾರ: ಗಾಂಧಿ ಜಯಂತಿ ಪ್ರಯುಕ್ತ ಮಾಧವಚಾರ್ ವೃತ್ತದ ಬಳಿ ಭದ್ರಾನದಿ ದಂಡೆಯಲ್ಲಿ ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮ ಮತ್ತು ಕನಕಮಂಟಪ ಮೈದಾನದಲ್ಲಿ ಪರಿಸರ ಜಾಗೃತಿ ಕುರಿತು ವಸ್ತುಪ್ರದರ್ಶನ, ಸಂಜೆ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಯವರಿಂದ ನಾವು-ನೀವು ಮತ್ತು ಪರಿಸರ ಕಿರು ರೂಪಕ, ಪೌರ ಕಾರ್ಮಿಕರಿಂದ ಬದುಕು-ಬವಣೆ ಹಾಗು ಸ್ವಚ್ಚತೆ ರೂಪಕ ನಡೆಯಲಿದೆ.
ಅ.3 ರ ಗುರುವಾರ: ಬೆಳಿಗ್ಗೆ 6 ಗಂಟೆಗೆ ಯೋಗ ನಡಿಗೆ, 7 ಕ್ಕೆ ಸಾಮೂಹಿಕ ಯೋಗಾಸನ, ಸಂಜೆ ಭಾವಸಂಗಮ.
ಅ.4 ರ ಶುಕ್ರವಾರ: ಬೆಳಿಗ್ಗೆ 8.30 ಕ್ಕೆ ನ್ಯೂಟೌನ್ ಬಂಟರ ಭವನದಲ್ಲಿ ಮಹಿಳಾ ಸಂಘಗಳಿಂದ ಆಹಾರ ತಯಾರಿಕಾ ಸ್ಪರ್ಧೆ ಮತ್ತು ಕ್ರೀಡಾಕೂಟ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ.
ಅ.5 ರ ಶನಿವಾರ: ಬೆಳಿಗ್ಗೆ 9.30 ಕ್ಕೆ ಇಡ್ಲಿ ತಿನ್ನುವ ಸ್ಪರ್ಧೆ. ಸಂಜೆ ಶಾಂತಲಾ ಕಲಾವೇದಿಕೆಯಿಂದ ಜಾನಪದ ಐತಿಹಾಸಿಕ ಈರ್ ಮಾಸ್ತೆವ್ವ ನಾಟಕ.
ಅ.6 ರ ಭಾನುವಾರ: ಬೆಳಿಗ್ಗೆ 10.30 ಕ್ಕೆ ನ್ಯೂಟೌನ್ ಗಾಂಧಿಪಾರ್ಕ್‌ನಲ್ಲಿ ನನ್ನ ಕನಸಿನ ಭದ್ರಾವತಿ ಶೀರ್ಷಿಕೆಯಡಿ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಸಂಜೆ ಸಂಸ್ಕೃತಿ ವೈಭವ ಸಾಂಸ್ಕೃತಿಕ ಕಾರ್ಯಕ್ರಮ.
ಅ.7ರ ಸೋಮವಾರ: ಬೆಳಿಗ್ಗೆ 9 ಕ್ಕೆ ಕಛೇರಿಯ ವಿವಿಧ ನೀರು ಶುದ್ದೀಕರಣ ಕೇಂದ್ರಗಳಲ್ಲಿ ಆಯುಧಪೂಜೆ, ಸಂಜೆ ಭದ್ರಾವತಿ ಬ್ರದರ್ಸ್ ರವರಿಂದ ಸಂಗೀತ ರಸಸಂಜೆ.
ಅ.8ರ ಮಂಗಳವಾರ: ಮಧ್ಯಾಹ್ನ 2 ಕ್ಕೆ ಲೋಯರ್ ಹುತ್ತಾ ಬಳಿಯ ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲಂಕೃತಗೊಂಡ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಮತ್ತು ನಗರದ ವಿವಿಧ ದೇವಾಲಯಗಳ ದೇವಾನುದೇವತೆಗಳ ಭವ್ಯ ಮೆರವಣಿಗೆಯು ಶಾಸಕ ಬಿ.ಕೆ. ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮೆರವಣಿಗೆಯಲ್ಲಿ ಜಾನಪದ ಕಲಾ ಪ್ರಾಕಾರಗಳಾದ ವೀರಗಾಸೆ, ಕೀಲುಕುದುರೆ, ಡೊಳ್ಳುಕುಣಿತ, ಮಂಗಳವಾದ್ಯ, ವಿವಿಧ ವಾದ್ಯಗೋಷ್ಟಿಯ ತಂಡಗಳು ಹಾಗು ಶಾಲಾ ಮಕ್ಕಳ ವಿಶೇಷ ವೇಷಭೂಷಣಗಳು ಇರುತ್ತದೆ. ಸಂಜೆ 7 ಕ್ಕೆ ಕನಕ ಮಂಟಪ ಮೈದಾನದಲ್ಲಿ ತಾಲೂಕು ದಂಡಾಧಿಕಾರಿಗಳಿಂದ ಬನ್ನಿ ಮುಡಿಯವ ಶಮಿ ಪೂಜೆ ನೆರವೇರುವುದು.
ಈ ಸಂದರ್ಭದಲ್ಲಿ ರಾವಣ ಸಂಹಾರದ ವಿಶೇಷ ಆಕರ್ಶನೆಯ ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದರು. ಅಲ್ಲದೆ ಈ ಉತ್ಸವ ಆಚರಣೆಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಕಂದಾಯಾಧಿಕಾರಿ ರಾಜಕುಮಾರ್, ಪರಿಸರ ಇಂಜಿನಿಯರ್ ರುದ್ರೇಗೌಡ, ಹಿರಿಯ ಲೆಕ್ಕಾಧಿಕಾರಿ ಮಹಮದ್ ಅಲಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀರಂಗ, ವ್ಯವಸ್ಥಾಪಕಿ ಸುನಿತಾ ಕುಮಾರಿ, ಸಂಯೋಜನಾಧಿಕಾರಿ ಸುಹಾಸಿನಿ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post