ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಸದೃಢ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಕುವೆಂಪು ವಿವಿಯ ರಾಸೇಯೋ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಅವರು ಅಭಿಪ್ರಾಯಪಟ್ಟರು.
ಭದ್ರಾವತಿ ಬೊಮ್ಮನಕಟ್ಟೆಯ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಕಂಬದಾಳ್ ಹೊಸೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಯುವಜನತೆ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕಿದ್ದು, ಗಾಂಧೀಜಿಯವರ ಗ್ರಾಮೋದ್ಧಾರ, ಸೇವೆ, ತ್ಯಾಗದಂತಹ ಪ್ರಮುಖ ಚಿಂತನೆಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ರಾಸೇಯೋಜನೆಯ ಚಟುವಟಿಕೆಗಳು ಆರೋಗ್ಯವಂತ, ಸಮರ್ಥ ವ್ಯಕ್ತಿ ನಿರ್ಮಾಣಕ್ಕೆ ಸಹಕಾರಿಯಾಗಿವೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಯಲ್ಲಿ ಎನ್‌ಎಸ್‌ಎಸ್‌ನ ಸ್ವಯಂ ಸೇವಕರಾಗುವುದರ ಮೂಲಕ ಉತ್ತಮ ಪ್ರಜೆಗಳಾಗಿ ನಿರ್ಮಾಣಗೊಳ್ಳಬೇಕಿದೆ ಎಂದರು.
Also read: ಜೈನ್ ಪಬ್ಲಿಕ್ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಗುಂಪುಗಳಿಗೆ ಸದಸ್ಯರ ನೇಮಕ
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಿ. ರಮೇಶ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಮಾರ್ಗದರ್ಶನದಂತೆ ಈ ಗ್ರಾಮದಲ್ಲಿ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದ್ದು, ಶ್ರಮದಾನದ ಮೂಲಕ ವಿದ್ಯಾರ್ಥಿಗಳು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು, ಆರೋಗ್ಯ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪಾರ್ವತಮ್ಮ, ಗ್ರಾಪಂ ಸದಸ್ಯ ಜಿ.ಎನ್. ವಿರೇಶ್ ಗೌಳಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ, ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ರಂಜಿತಾ, ರಾಜ್ಯ ಪ್ರಶಸ್ತಿ ವಿಜೇತ ರಾಸೇಯೋ ಅಧಿಕಾರಿ ಡಾ. ನಾಗರಾಜ್ ನಾಯ್ಕ್ ಸೇರಿದಂತೆ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಡಾ. ರಘುನಾಥ್ ಸರ್ವರನ್ನೂ ಸ್ವಾಗತಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಮತ್ತು ಶಿಭಿರಾಧಿಕಾರಿ ಡಾ. ಅರಸಯ್ಯ ಪ್ರಾಸ್ತಾವಿಕ ಮಾತನಾಡಿದರು. ರುಕಯ್ಯ ಮತ್ತು ಯಶಸ್ವಿನಿ ನಿರೂಪಿಸಿ, ಸಾಗರ್ ಪ್ರಾರ್ಥಿಸಿ, ಪ್ರೊ. ವಸಂತ್‌ಕಕುಮಾರ್ ಸರ್ವರನ್ನೂ ವಂದಿಸಿದರು.
ಇದಕ್ಕೂ ಮೊದಲು ಕಾಲೇಜಿನ ಬೋಧಕ, ಬೋಧಕೇತರ ವರ್ಗ, ಶಿಬಿರಾರ್ಥಿಗಳು, ಗ್ರಾಮಸ್ಥರು ಗ್ರಾಮದ ಪ್ರಮುಖ ರಸ್ತೆಯಲ್ಲಿ ಜಾಗೃತಿ ಜಾಥಾ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post