ಭದ್ರಾವತಿ: ಕೇಂದ್ರ ಸರಕಾರವು ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿಡಲು ವಿಫಲವಾಗಿರುವುದನ್ನು ಖಂಡಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ಭಾಗಶಃ ಬಂದ್ ಆಚರಿಸಿದೆ. ವಿವಿಧ ಬಡಾವಣೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.
ಬೆಳಿಗ್ಗೆ ಕಾಂಗ್ರೆಸ್ ಮತ್ತು ಪ್ರಗತಿಪರ ಒಕ್ಕೂಟಗಳ ಕಾರ್ಯಕರ್ತರು ಮತ್ತು ಮುಖಂಡರು ಉಜ್ಜನಿಪುರ, ಕಾಗದನಗರ, ಜನ್ನಾಪುರ, ಬಿ.ಎಚ್.ರಸ್ತ, ಲೋಯರ್ ಹುತ್ತಾ, ಸಿ.ಎನ್.ರಸ್ತೆ, ತಾಲೂಕು ಕಛೇರಿ ರಸ್ತೆ, ಟಿ.ಕೆ.ರಸ್ತೆ ಸೇರಿದಂತೆ ನಗರದೆಲ್ಲೆಡೆ ದ್ವಿಚಕ್ರ ವಾಹನಗಳ ಮೂಲಕ ರ್ಯಾಲಿ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ದೃಶ್ಯಗಳು ಕಂಡು ಬಂದವು.
ರಸ್ತೆ ಬದಿಗಳಲ್ಲಿ ಹಣ್ಣು, ಹಂಪಲು, ಫುಟ್‌ಪಾತ್ ವ್ಯಾಪಾರಸ್ತರು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದರು. ಮುಖ್ಯ ಬಸ್‌ನಿಲ್ದಾಣ ಮುಂಭಾಗ ಬಹುತೇಕ ಅಂಗಡಿಗಳು ತೆರೆದಿದ್ದವು. ಪೆಟ್ರೋಲ್ ಬಂಕ್‌ಗಳು, ಬ್ಯಾಂಕುಗಳು, ನ್ಯಾಯಾಲಯ, ನಗರಸಭೆ, ತಾಲೂಕು ಕಛೇರಿ ಸೇರಿದಂತೆ ಸರಕಾರಿ ಇಲಾಖೆಗಳು ಕಾರ್ಯನಿರ್ವಹಿಸಿದ್ದವು.
ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಮುಖ್ಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಆಟೋ ಸಂಚಾರ ವಿರಳವಾಗಿತ್ತು. ಶಾಲಾ ಕಾಲೇಜುಗಳಿಗೆ ರಜಾ ಘೋಷಣೆಯಾಗಿದ್ದರು ಗ್ರಾಮಾಂತರ ಮತ್ತು ನಗರ ಪ್ರದೇಶದ ಕೆಲವು ಖಾಸಗೀ ಶಾಲೆಗಳು ಕಾರ್ಯನಿರ್ವಹಿಸಿದವು. ಪ್ರವಾಸಿ ವಾಹನಗಳ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಡಿಪ್ಪರ್ ರಾಜ ನೇತೃತ್ವದಲ್ಲಿ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post