ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನಲ್ಲಿ ಕೊರೋನಾ ಸೋಂಕಿರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಾರದಿರುವುದರಿಂದ ಬಿಗಿಗೊಳಿಸಲಾಗಿರುವ ಲಾಕ್‌ಡೌನ್ ಪರಿಣಾಮ ರಸ್ತೆಗಳಲ್ಲಿ ವಾಹನ ಸಂಚಾರ ಜನಸಂಚಾರ ಬಹುತೇಕ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕೊರೋನಾ ಆರಂಭವಗುವ ಮುನ್ನ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಕೆಲವು ಕಾಮಗಾರಿಗಳು ಅಸಮರ್ಪಕ ಹಾಗೂ ಬೇಕಾಬಿಟ್ಟಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಆರೋಪ ಕೇಳಿ ಬಂದಿದ್ದವು. ಈ ಮೇರೆಗೆ ಸ್ಥಗಿತಗೊಂಡಿದ್ದ ಕೆಲವು ಕಾಮಗಾರಿಗಳು ಈಗ ಲಾಕ್‌ಡೌನ್ ಇರುವ ವೇಳೆ ಜನರು ಬೀದಿಗೆ ಬರುವಂತಿಲ್ಲದಿರುವ ಸಂದರ್ಭವನ್ನು ಬಳಸಿಕೊಂಡು ಸ್ಥಗಿತಗೊಂಡಿದ್ದ ಅಂತಹ ಕಾಮಗಾರಿಗಳಿಗೆ ಮರು ಚಾಲನೆ ನೀಡುವ ಪ್ರಯತ್ನ ಆರಂಭಗೊಂಡಂತಿದೆ.
ಚನ್ನಗಿರಿ ರಸ್ತೆ ಅಗಲೀಕರಣ
ನಗರದ ಜನಸಂಖ್ಯೆ, ವಾಹನ ಸಂಖ್ಯೆ ಏರಿದ ಕಾರಣ ಜನ ಸಂಚಾರ ವಾಹನ ನಿಲುಗಡೆಗೆ ತೊಂದರೆಯಗುತ್ತಿದ್ದು ಇಲ್ಲಿನ ಮಾಧವಾಚಾರ್ ರಸ್ತೆಯಿಂದ ರಂಗಪ್ಪ ವೃತ್ತದವರೆಗೆ ಹಾಗು ಅಲ್ಲಿಂದ ಚನ್ನಗಿರಿ ರಸ್ತೆ ಪೂರ್ಣವಾಗಿ ಅಗಲೀಕರಣವಾಗಬೇಕು ಎಂಬುದು ಸಾರ್ವಜನಿಕರ ಒತ್ತಡ ಪೂರ್ವಕ ಅಭಿಪ್ರಾಯ. ಆದರೆ ಇಲ್ಲಿನ ಕೆಲವು ಅಧಿಕಾರಶಾಹಿ ರಾಜಕೀಯ ಹಿತಾಸಕ್ತಿಗಳ ಕೈವಾಡದಿಂದಾಗಿ ಮಾಧವಾಚಾರ್ ರಸ್ತೆಯಿಂದ ರಂಗಪ್ಪ ವೃತ್ತದವರೆಗಿನ ರಸ್ತೆ ಅಗಲೀಕರಣಕ್ಕೆ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳು ಕೈ ಹಾಕಲೇಯಿಲ್ಲ.
ಆದರೆ ರಂಗಪ್ಪ ವೃತ್ತದಿಂದ ಚನ್ನಗಿರಿ ಕಡೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡುವ ಕೆಲಸವನ್ನು ಲಾಕ್ ಡೌನ್ ಸಂದರ್ಭದಲ್ಲಿ ಯಾರು ರಸ್ತೆಗಿಳಿಯುವುದಿಲ್ಲ ಎಂಬ ಖಾತ್ರಿಯೊಂದಿಗೆ ಕಳಪೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ಮಾಡಿ ಮುಗಿಸಿದ್ದಾರೆ.
ಸದರಿ ರಸ್ತೆಯನ್ನು ಮಾಡಬೇಕಾದ ಪ್ರಮಾಣದಲ್ಲಿ ಅಗಲೀಕರಣ ಮಾಡದೆ, ಈ ಹಿಂದೆ ಇದ್ದಷ್ಟೇ ವಿಸ್ತೀರ್ಣದ ಟಾರ್ ರಸ್ತೆಯನ್ನೇ ಅಲ್ಪ-ಸ್ವಲ್ಪ ಅಗಲ ಮಾಡಿದಂತೆ ಮಾಡಿ, ಅದರ ಉಭಯಪಾರ್ಶ್ವಗಳಲ್ಲಿ ಮಣ್ಣಿನ ರಸ್ತೆಯನ್ನೇ ಫುಟ್‌ಪಾತ್ ರೀತಿ ಮಾಡಿ ರಸ್ತೆ ಅಗಲೀಕರಣ ಆಯಿತು ಎನಿಸಿದ್ದಾರೆ.
ಕೋರ್ಟ್ ರಸ್ತೆ
ನಗರದ ತಾಲೂಕು ಕಚೇರಿ ರಸ್ತೆಯನ್ನು ಅಗಲೀಕರಣದ ನೆಪದಲ್ಲಿ ಅ ಸಂಖ್ಯಾತ ಬೃಹತ್ ಮರಗಳನ್ನು ಕಡಿದು ಹಾಕಲಾಯಿತು. ಆದರೆ ಮಾಡಿರುವ ರಸ್ತೆ ಅಗಲೀಕರಣ ಅಸಮರ್ಪಕವಾಗಿದ್ದು, ಒಂದೊಂದು ಕಡೆ ಒಂದೊಂದು ಅಳತೆಯಂತೆ ಮನಸ್ಸಿಗೆ ಬಂದಂತೆ ಸಿಮೆಂಟ್ ರಸ್ತೆ ಮಾಡಿ, ಕೋರ್ಟ್ ಮುಂದೆ ರಸ್ತೆಯ ವಿಸ್ತೀರ್ಣವನ್ನು ಮಾಡದೆ ಅದಕ್ಕೇ ತೇಪೆ ಹಾಕುವ ಕೆಲಸಕ್ಕೆ ಮುಂದಾದಾಗ ನಗರದ ನ್ಯಾಯವಾದಿಗಳ ಸಂಘ ಹಾಗೂ ಸಾರ್ವಜನಕರು ಖಂಡಿಸಿ ಆಗಿರುವ ಲೋಪವನ್ನು ಸರಿಪಡಿಸುವಂತೆ 2020ರ ಮಾರ್ಚ್ ತಿಂಗಳಲ್ಲಿ ಪ್ರತಿಭಟನೆ ಮಾಡಿದ್ದರು. ಆಗ ಅಧಿಕಾರಿಗಳು ಸ್ಥಳಕ್ಕೆ ಬಂದು ಆಗಿರುವ ಲೋಪವನ್ನು ಸರಿ ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ವಕೀಲರ ಸಂಘ ಪ್ರತಿಭಟನೆಗೆ ನಿಲ್ಲಿಸಿತ್ತು.
ಈಗ ಲಾಕ್ ಡೌನ್ ಇರುವುದರಿಂದ ನ್ಯಾಯಾಲಯವೂ ಸಹ ಹಲವು ನಿರ್ಬಂಧಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ನ್ಯಾಯವಾದಿಗಳೂ ಸಹ ನ್ಯಾಯಾಲಯಕ್ಕೆ ಬರುತ್ತಿರುವುದು ಕಡಿಮೆಯಾಗಿದೆ. ಈಗ ಯಾವುದೇ ರೀತಿ ಕಾಮಗಾರಿಯನ್ನು ಯಾರ ವಿರೊಧವೂ ಇಲ್ಲದೆ ಮನಸ್ಸಿಗೆ ಬಂದಂತೆ ಪೂರ್ಣಗೊಳಿಸಬಹುದೆಂದು ಅರಿತು, ರಸ್ತೆ ಅಗಲಿಕರಣ ಹಾಗೂ ವೃತ್ತ ಅಗಲೀಕರಣ ಮಾಡುವ ಜವಾಬ್ಧಾರಿ ಹೊತ್ತಿರುವ ಲೋಕೋಪಯೋಗಿ ಇಲಾಖೆ, ನಗರಸಭೆ ಈಗ ಶುಕ್ರವಾರದಿಂದ ರಂಗಪ್ಪ ವೃತ್ತದ ಅಗಲೀಕರಣದ ಹೆಸರಲ್ಲಿ ಕಾಮಗಾರಿಯನ್ನು ಆರಂಭಿಸಿರುವಂತೆ ಕಾಣುತ್ತದೆ. ಸಾರ್ವಜನಕಿರ ಉಪಯೋಗಕ್ಕಾಗಿ ಮಾಡುವ ರಸ್ತೆ ಅಗಲೀಕರಣ, ವೃತ್ತಗಳ ಅಗಲೀಕರಣದಲ್ಲಿ ಈ ರೀತಿಯ ರಾಜಕೀಯ ಊರಿನ ಹಿತದೃಷ್ಟಿಯಿಂದ ಸಮರ್ಥನೀಯವಲ್ಲ ಎಂಬುದನ್ನು ಸರ್ಕಾರಿ ಅಧಿಕಾರಿಗಳು ಹಾಗೂ ಜನರಿಂದ ಜನರಿಗಾಗಿ ಜನರೇ ಆರಿಸಿರುವ ಅಧಿಕಾರರೂಢ ರಾಜಕಾರಣಿಗಳು ಅರಿಯಬೇಕಿದೆ.
ಒಂದೊಮ್ಮೆ ಕೋರ್ಟ್ ಎದುರಿಗೆ ರಸ್ತೆ ಕಾಮಗಾರಿಯಲ್ಲಿ ಆಗಿರುವ ಲೋಪದೋಷವನ್ನು ಸರಿಪಡಿಸದೇ ಹಾಗೇ ಸಂಕುಚಿತಗೊಳಿಸಿ ರಸ್ತೆ ಅಗಲೀಕರಣ ಪೂರ್ಣಗೊಳಿಸಿದರೆ, ಅದರಿಂದ ಅಧಿಕಾರರೂಢರ ಕೆಲವು ಹಿಂಬಾಲಕರಿಗೆ ಅನುಕೂಲವಾಗಬಹುದು. ಆದರೆ ಊರಿನ ಉದ್ಧಾರ ಮಾಡುತ್ತಾರೆ ಎಂದು ನಂಬಿ ಮತ ಹಾಕಿ ಆರಿಸಿರುವ ಜನಸಾಮಾನ್ಯರಿಗೆ ಇದರಿಂದ ಅನಾನುಕೂಲವಾಗುತ್ತದೆ ಎಂಬ ಸಾಮಾನ್ಯ ಪ್ರಜ್ಞೆ ಜನನಾಯಕರಲ್ಲಿ ಮರೆಯಾಗಬಾರದಲ್ಲವೇ.
ರಸ್ತೆ ಅಗಲೀಕರಣ ಕಾಮಗಾರಿಯಾಗಲಿ, ವೃತ್ತದ ಅಗಲೀಕರಣ ಕಾಮಗಾರಿಯಾಗಲಿ, ಅಧಿಕಾರಿಗಳು ಸಹ ಸರ್ಕಾರದ ಕೆಲಸ ದೇವರ ಕೆಲಸ ಎಂಬುದನ್ನು ಕರ್ತವ್ಯ ನಿರ್ವಹಣೆಯಲ್ಲಿ ಪಾಲಿಸಿದಾಗ ಈ ರೀತಿ ಕಳಪೆ ಕಾಮಗಾರಿ ಅಥವಾ ಅಸಮರ್ಪಕ ಕಾಮಗಾರಿಗಳಾಗದಂತೆ ತಡೆಯಬಹುದು. ಅಧಿಕಾರ ಶಾಶ್ವತವಲ್ಲ. ಆದರೆ ಮಾಡಿರುವ ಕಾಮಗಾರಿಗಳು ನಿಯಮಾನುಸಾರ ಸಧೃಡವಾಗಿದ್ದರೆ ಅದರಿಂದ ಜನರು ಅಧಿಕಾರಿಗಳನ್ನು ಮತ್ತು ಜನಪ್ರತಿನಿದಿಗಳನ್ನು ಸದಾ ಸ್ಮರಿಸುತ್ತಾರೆ.
ನಾಗರೀಕರೆಲ್ಲ ಕೊರೊನಾ ಸಂಕಷ್ಟದ ಕಪಿಮುಷ್ಠಿಯಲ್ಲಿ ಸಿಲುಕಿ ಹೊರ ಜಗತ್ತಿಗೆ ಬರಲಾಗದ ಪರಿಸ್ಥಿತಿಯ ದುರ್ಲಾಭ ಬಳಸಿಕೊಂಡು ಹೊಸದಾದ ಮತ್ತು ಸ್ಥಗಿತಗೊಂಡೊರುವ ಕಳಪೆ ಕಾಮಗಾರಿಗಳನ್ನು ತೇಪೆಹಚ್ಚಿ ಮುಗಿಸಲು ಹೊರಟಿರುವವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಲೇಖನ: ಕೋ.ಶ್ರೀ. ಸುಧೀಂದ್ರ, ಭದ್ರಾವತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post