ಕಲ್ಪ ಮೀಡಿಯಾ ಹೌಸ್ | ಗೋಣಿಬೀಡು(ಭದ್ರಾವತಿ) |
ಮುಂಬರುವ ವಿಧಾನಸಭಾ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ. ಅಪ್ಪಾಜಿಗೌಡರ ಪತ್ನಿ ಶಾರದಾ ಅವರ ಹೆಸರನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಗೋಣಿ ಬೀಡಿನಲ್ಲಿ ದಿ. ಅಪ್ಪಾಜಿ ಗೌಡರ ಪುತ್ಥಳಿ ಅನಾವರಣದ ಬಳಿಕ ಮಾತನಾಡಿದ ಅವರು, ಭದ್ರಾವತಿ ಕ್ಷೇತ್ರದ ಜನರ ಪಕ್ಷದ ಹಾಗೂ ಅಪ್ಪಾಜಿ ಗೌಡರ ಬೆಂಬಲಿಗರ ಧ್ವನಿಗೆ ನಾನು ಬೆಲೆ ಕೊಡುತ್ತೇನೆ. ಕ್ಷೇತ್ರದ ಜನರ ಅಭಿಪ್ರಾಯ ನಮಗೆ ಮುಖ್ಯ. ಇಲ್ಲಿನ ಜನತೆ ತಮ್ಮ ಅಭ್ಯರ್ಥಿ ಯಾರು ಎಂದು ಈಗಲೇ ನಿರ್ಧರಿಸಿದ್ದಾರೆ. ಎಲ್ಲರ ಇಚ್ಛೆಯಂತೆ ಶಾರದಾ ಅಪ್ಪಾಜಿ ಗೌಡರನ್ನು ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ ಎಂದರು.
ಇದೇ ತಿಂಗಳ 27ರಂದು ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 140 ಅಭ್ಯರ್ಥಿಗಳ ಪಕ್ಷದ ಕಾರ್ಯಾಗಾರ ನಡೆಯಲಿದ್ದು, ಉಳಿದ ವಿಚಾರಗಳನ್ನು ಅಂದು ಮಾತನಾಡುತ್ತೇವೆ. ಅಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಅಪ್ಪಾಜಿಗೌಡರು ಬದುಕಿದ್ದಷ್ಟು ಕಾಲ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಏನೇ ಸಾಧನೆ ಮಾಡಿದ್ದರೂ, ಅದಕ್ಕೆ ಅವರ ಪತ್ನಿ ಶಾರದಾ ಅವರ ಸಹಕಾರವೇ ಪ್ರಮುಖ ಕಾರಣ. ಹೀಗಾಗಿ ಭದ್ರಾವತಿ ಜೆಡಿಎಸ್ ನೇತೃತ್ವವನ್ನು ಅವರಿಗೆ ವಹಿಸಿ, ನಿಮ್ಮ ಮನೆ ಮಗಳನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅವರನ್ನು ಗೆಲ್ಲಿಸುವ ಜವಾಬ್ಧಾರಿ ಜನತೆಯ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಕನಕ ಗುರುಪೀಠ ಹೊಸದುರ್ಗ ಶಾಖೆಯ ಶ್ರೀ ಈಶ್ವರಾನಂದ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಶ್ರೀ ಬಸವನಾಗಿದೇವ ಶರಣರು, ಚಿತ್ರದುರ್ಗ ಬಂಜಾರ ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಹರಿಹರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹಿರಿಯೂರು ಕೋಡಿಹಳ್ಳಿ ಬೃಹನ್ಮಠ ಮಾದಾರ ಪೀಠದ ಶ್ರೀ ಆದಿಜಾಂಭವ ಮಾರ್ಕಾಂಡಮುನಿ ಸ್ವಾಮೀಜಿ, ಅರಕೆರೆ ವಿರಕ್ತಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಭದ್ರಗಿರಿಯ ಶ್ರೀ ಮುರುಗೇಶ್ ಸ್ವಾಮೀಜಿ, ಸಿಎಸ್‌ಐ ವೇನ್ಸ್ ಮೆಮೋರಿಯಲ್ ಚರ್ಚ್‌ನ ಶಿವಮೊಗ್ಗ ವಲಯಾಧ್ಯಕ್ಷ ರೆವರೆಂಡ್ ಜಿ. ಸ್ಟ್ಯಾನ್ಲಿ ಮತ್ತು ಶಿವಮೊಗ್ಗ ದಾರುಲ್ ಇ-ಹಸನ್ ಮದರಸ ಪ್ರಿನ್ಸಿಪಾಲ್ ಶ್ರೀ ಮೌಲಾನ ಶಾಹುಲ್ ಹಮೀದ್, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಕಡೂರು ಮಾಜಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ಮುಖಂಡ ಎಂ. ಶ್ರೀಕಾಂತ್ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post