ಭದ್ರಾವತಿ: ರಾಜ್ಯದ ಆಡಳಿತ ನಡೆಸುತ್ತಿರುವ ಸಮಿಶ್ರ ಸರಕಾರವು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಂಸದೆ ಹಾಗು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತೀಯ ಜನತಾ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು ಸಹ ಜೆಡಿಎಸ್ ಪಕ್ಷವು ಕೇವಲ 37 ಸ್ಥಾನಗಳಿಸಿ ಪಡೆದು ಕಾಂಗ್ರೆಸ್ ಪಕ್ಷದೊಂದಿಗೆ ಅಪವಿತ್ರ ಮೈತ್ರಿಯೊಂದಿಗೆ ಹಿಂಬಾಗಿಲಿನಿಂದ ಒಳ ಪ್ರವೇಶಿಸುವ ಮೂಲಕ ಗದ್ದುಗೆಗೇರಿರುವುದು ದುರಂತ ಎಂದರು.
ಸಮಾಜವಾದದ ಹಿನ್ನಲೆ ಹೊಂದಿರುವ ಶಿವಮೊಗ್ಗ ಜಿಲ್ಲೆಯು ರಾಜ್ಯಕ್ಕೆ 4 ಮುಖ್ಯಮಂತ್ರಿಗಳನ್ನು ನೀಡಿರುವ ಬುದ್ದಿಜೀವಿಗಳ ಜಿಲ್ಲೆಯಾಗಿದೆ. ಈ ಹಿನ್ನಲೆಯಲ್ಲಿ ಮತ್ತೊಮ್ಮೆ ಲೋಕಸಭೆ ಉಪ ಚುನಾವಣೆ ಬಂದಿರುವುದು ಬಿಜೆಪಿ ಪಕ್ಷಕ್ಕೆ ವರದಾನವಾಗಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಮುರಿದ ಮನೆಯಾಗಿ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ಕಡೆಗಳಿಗೆಯಲ್ಲಿ ಒತ್ತಡದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಸ್ಪರ್ಧಾಕಣಕ್ಕೆ ಇಳಿಸಿರುವುದು ನಾಚಿಕೆ ಗೇಡಿನ ಸಂಗತಿ. ಪ್ರಧಾನಿ ಮೋದಿರವರ ಸಾಧನೆಗಳನ್ನು ಇಂದು ವಿಶ್ವವೆ ಕೊಂಡಾಡುತ್ತಿದೆ. ಮತ್ತೊಮ್ಮೆ ಮೋದಿ ಅಧಿಕಾರ ಚುಕ್ಕಾಣಿ ಹಿಡಿಯುವುದರಲ್ಲಿ ಅನುಮಾನ ಇಲ್ಲ ಎಂದರು.
ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ರಾಜ್ಯದಲ್ಲಿ ಎಂದೆಂದು ಕಂಡರಿಯದ ಅಭಿವೃದ್ದಿ ಕಾರ್ಯಗಳು ನಡೆದಿವೆ. ಆದರೆ ಅವಕಾಶವಾದಿ ರಾಜಕಾರಣದಿಂದ ಅಸ್ಥಿರತೆ ಕಳೆದುಕೊಂಡ ಸಮಿಶ್ರ ಸರಕಾರ ರಾಜ್ಯದ ಜನತೆಗೆ ಪೊಳ್ಳು ಆಶ್ವಾಸನೆ ನೀಡುವ ಮೂಲಕ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಮೋದಿ ಪ್ರಭಾವ, ಅವರ ಆಡಳಿತ ವೈಖರಿಯ ಜನಪ್ರಿಯ ಕಾರ್ಯಕ್ರಮಗಳ ಅಗ್ನಿಪರೀಕ್ಷೆ ಒಂದೆಡೆ ಇದ್ದರೆ ಮತ್ತೊಂದೆಡೆ ದುರ್ಬಲ ನಾಯಕತ್ವ ಇವೆಲ್ಲದರ ನಡುವೆ ಮತದಾರ ಉಪ ಚುನಾವಣೆಯಲ್ಲಿ ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕೇಂದ್ರದಲ್ಲಿ ಮೋದಿ ರವರ ಸರಕಾರವನ್ನು ಸಂಪೂರ್ಣವಾಗಿ ಬೆಂಬಲಿಸುವ ವಿಶ್ವಾಸವಿದೆ ಎಂದರು.
ಜಾತಿ ಎಂಬುದು ಕೇವಲ ಒಂದು ಕುಟುಂಬಕ್ಕೆ ಸೀಮಿತ ಎಂಬ ರೀತಿಯ ವರ್ತನೆ ಒಂದೆಡೆಯಾದರೆ, ಅದಕ್ಕೆ ಹೊರತಾಗಿ ಆ ಜಾತಿಯ ಸಾಮಾನ್ಯ ಕುಟುಂಬದವರು ರಾಜಕಾರಣ ಮಾಡಲು ಸಾಧ್ಯ ಎಂಬುದನ್ನು ಯಾವುದಾದರು ಪಕ್ಷ ತೋರಿದೆ ಎಂದರೆ ಅದು ಬಿಜೆಪಿ ಮಾತ್ರ ಎಂದು ಜೆಡಿಎಸ್ ಪಕ್ಷವನ್ನು ತೇಜಸ್ವಿನಿ ಟೀಕಿಸಿದರು.
ಹಾಸನ ಶಾಸಕ ಪ್ರೀತಂಗೌಡ ಮಾತನಾಡಿ ಜಿಲ್ಲೆಯ ರಾಜಕಾರಣ ತನ್ನದೆ ಆದ ವಿಶಿಷ್ಟತೆ ಹೊಂದಿದೆ. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್. ಪಟೇಲ್, ಎಸ್.ಬಂಗಾರಪ್ಪ ಹಾಗು ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆಗಳನ್ನು ಚಿಂತನೆ ಮಾಡಬೇಕಿದೆ. ಜಿಲ್ಲೆಯ ಅಭಿವೃದ್ದಿ ಹರಿಕಾರ ಬಿ.ಎಸ್.ಯಡಿಯೂರಪ್ಪ ಎಂಬುದನ್ನು ಇಡೀ ರಾಜ್ಯ ಒಪ್ಪುತ್ತದೆ. ಈ ಆಧಾರದಡಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಪರ ಮತಯಾಚನೆ ನಡೆಸಬೇಕಿದೆ. ಇದರ ಜೊತೆಗೆ ಕೇಂದ್ರದಲ್ಲಿ ಮೋದಿ ಸರಕಾರದ ಸಾಧನೆಗಳನ್ನು ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಘವೇಂದ್ರ, ಕರಿಗೌಡ, ತೋಪೇಗೌಡ, ಮಣಿ, ಪ್ರಭಾಕರ್, ಜೆ.ಪಿ.ಐತಾಳ್, ಚನ್ನೇಶ್, ರವಿ ಮುಂತಾದವರಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post