ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಗುತ್ತಿಗೆದಾರನಿಂದ ಪೌರಕಾರ್ಮಿಕರ ಶೋಷಣೆ ತಪ್ಪಿಸಲು, ಗುತ್ತಿಗೆ ಪದ್ಧತಿಯನ್ನು ತೆಗೆದು ಪೌರಕಾರ್ಮಿಕರನ್ನು ಖಾಯಂ ಪೌರಕಾರ್ಮಿಕರನ್ನಾಗಿ ಮಾಡುವ ದಿಸೆಯಲ್ಲಿ ಚಿಂತನೆ ನಡೆದಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಶಿವಣ್ಣ ಎಂ ಕೋಟೆ ಹೇಳಿದರು.
ಅವರು ಮಂಗಳವಾರ ನ್ಯೂಟೌನ್‌ನಲ್ಲಿರುವ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಪೌರಕಾರ್ಮಿಕರ ಹಿತರಕ್ಷಣೆಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಸದಾ ಬದ್ಧವಾಗಿದೆ ಎಂದರು.

ಭದ್ರಾವತಿಯಲ್ಲಿ ಕಳೆದ ವಾರ ಪೌರಕಾರ್ಮಿಕ ಸುನೀಲ್ ಕೊಲೆಯಾಗಿರುವುದು ನೋವಿನ ಸಂಗತಿ. ಇಂದು ನಾನು ಮೃತನ ಮನೆಗೆ ಹೋಗಿ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಮೃತನ ಪತ್ನಿಗೆ ನಗರಸಭೆ ವತಿಯಿಂದ ಐವತ್ತು ಸಾವಿರದ ಚೆಕ್ ನೀಡಿರುತ್ತೇನೆ. ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ರೂ. 4 ಲಕ್ಷದ 12 ಸಾವಿರದ ಐನೂರುಗಳನ್ನು ಈಗಾಗಲೆ ನೀಡಲಾಗಿದೆ. ಮೃತನ ಪತ್ನಿಗೆ ಕೆಲಸ ನೀಡುವ ಕುರಿತಂತೆ ಗಮನಹರಿಸಲಾಗುವುದು ಎಂದರು.
ದೇಶ ಮತ್ತು ರಾಜ್ಯದಲ್ಲಿ ಮಲಹೊರುವ ಪದ್ಧತಿಯನ್ನು ರದ್ಧು ಪಡಿಸಲಾಗಿದ್ದರೂ ಸಹ ಈಗಲೂ ಕೆಲವೆಡೆ ಈ ಅನಿಷ್ಠ ಪದ್ಧತಿ ಜೀವಂತವಾಗಿರುವುದಕ್ಕೆ ಅಲ್ಲಿನ ಸ್ಥಳೀಯ ಆಡಳಿತದ ಅಧಿಕಾರಿಗಳಲ್ಲಿ ಸದರಿ ಕಾನೂನಿನ ಅಜ್ಞಾನದ ಕೊರತೆ ಹಾಗೂ ನಿರ್ಲಕ್ಷ್ಯ ಧೋರಣೆ ಕಾರಣ ವಾಗಿದೆ. ಇದನ್ನುನಾವು ಸಹಿಸುವುದಿಲ್ಲ ಎಂದರು.

ಪೌರಕಾರ್ಮಿಕರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಪೌರಕಾರ್ಮಿಕರಿಗೆ ಕಾರ್ಯನಿರ್ವಹಣೆಯಲ್ಲಿ ಅಗತ್ಯವಾದ ರಕ್ಷಣಾ ಸಾಧನಗಳನ್ನು ನೀಡುವುದು ನಗರಸಭೆ, ಮಹಾನಗರ ಪಾಲಿಕೆಯ ಅಲ್ಲಿನ ಅಧಿಕಾರಿಗಳ ಕೆಲಸ, ಅದನ್ನು ಆ ಅಧಿಕಾರಿಗಳು ಮಾಡದಿದ್ದರೆ ಅಂತಹವರಿಗೆ ಹೇಗೆ ಪಾಠ ಕಲಿಸಬೇಕೆಂಬುದು ನಮಗೆ ಗೊತ್ತಿದೆ ಎಂದರು.
ಪೌರಕಾರ್ಮಿಕರಿಗೆ ಜೀವವಿಮೆ ಮಾಡಿಸುವ ಹೊಣೆಗಾರಿಕೆ ಅಲ್ಲಿನ ಅಧಿಕಾರಿಗಳದ್ದಾಗಿದೆ. ಆದರೆ ಭದ್ರಾವತಿ ನಗರಸಭೆ ಅಧಿಕಾರಿಗಳು ಆ ರೀತಿ ಪೌರಕಾರ್ಮಿಕರಿಗೆ ಜೀವವಿಮೆ ಮಾಡಿಸಿಲ್ಲ. ಈ ಬಗ್ಗೆ ನಾನು ಇಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಪೌರಕಾರ್ಮಿಕರ ಜೀವನ ಉತ್ತಮ ಮಟ್ಟದಲ್ಲಿರಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಇಲಾಖೆ ಮಾಡಲಿದೆ ಎಂದರು.
ಕರ್ನಾಟಕ ರಾಜ್ಯ ಸಫಾಯಿಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ರಮಾ, ಉಪವಿಭಾಗಾಧಿಕಾರಿ ಪ್ರಕಾಶ್, ನಗರಸಭೆ ಆಯುಕ್ತ ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಸಂಚಾರಿ ಪೋಲಿಸ್ ಠಾಣೆಯ ಪಿಎಸ್‌ಐ ಕವಿತಾ, ದಲಿತ ಮುಖಂಡರಾದ ಚಿನ್ನಯ್ಯ ಮುಂತಾದವರು ಹಾಜರಿದ್ದರು.

ಹತ್ಯೆಯಾದ ಸುನೀಲ್ ಮನೆಗೆ ಭೇಟಿ
ಸುದ್ಧಿಗೋಷ್ಠಿಗೂ ಮುನ್ನ ಆಯೋಗದ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಜೈಭೀಮ್ ನಗರದಲ್ಲಿರುವ ಕೊಲೆಯಾದ ಸುನೀಲನ ಮನೆಗೆ ಭೇಟಿ ನೀಡಿ ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ನಗರಸಭೆ ವತಿಯಿಂದ ಐವತ್ತು ಸಾವಿರ ರೂ.ಗಳ ಚೆಕ್ ಅನ್ನು ಮೃತನ ಪತ್ನಿಗೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















