ಭದ್ರಾವತಿ: ಎಲ್ಲಾ ಸಮಾಜಗಳು ಅಭಿವೃದ್ದಿ ಹೊಂದಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂಬುದನ್ನು ಮೊಟ್ಟಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ರವರು ತೋರಿಸಿಕೊಟ್ಟಿದ್ದಾರೆ ಎಂದು ನಗರಸಭಾ ಆಯುಕ್ತ ಮನೋಹರ್ ಹೇಳಿದರು.
ನಗರದ ಹುಡ್ಕೋ ಸಮೀಪದ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗು ದಲಿತ ನೌಕರರ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ರವರ 188 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಎಲ್ಲಾ ಕ್ರಾಂತಿಗಳಿಗೂ ಅಸ್ತçವಾಗಿದ್ದು ಅದನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ದಾಗ ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಾಧ್ಯ. ಅಂದಿನ ಶಿಕ್ಷಣ ಸಮಾಜದ ಬದಲಾವಣೆಯತ್ತ ಕೊಂಡೊಯ್ಯುವುದಾಗಿತ್ತು. ಆದರೆ ಇಂದಿನ ಬದಲಾದ ಸನ್ನಿವೇಷದಲ್ಲಿ ಕೇವಲ ಪಠ್ಯ ಪುಸ್ತಕಗಳಾಗಿ ಉಳಿಸದುಕೊಂಡಿವೆ. ಮಹಿಳೆಯರ ಹಿತ ರಕ್ಷಣೆಗಾಗಿ ಅನೇಕ ಹೋರಾಟಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಹೆಚ್ಚು ಒತ್ತು ನೀಡಿದ್ದಾರೆಂದರು.
ಡಾ.ವೀಣಾಭಟ್ ಮಾತನಾಡಿ ಮಹಿಳಾ ಶಿಕ್ಷಣಕ್ಕೆ ವಿರೋಧವಿದ್ದ ಅಂದಿನ ಕಾಲದಲ್ಲಿಯೆ ಉನ್ನತ ಶಿಕ್ಷಣ ಪಡೆದು ಮೊಟ್ಟಮೊದಲ ಮಹಿಳಾ ಶಿಕ್ಷಕಿ ಯಾಗಿ ಬ್ರಿಟೀಷರಿಂದ ಗುರುತಿಸಿಕೊಂಡ ಹೆಗ್ಗಳಿಕೆ ಸಾವಿತ್ರಿಬಾಯಿ ಪುಲೆ ರವರದ್ದಾಗಿದೆ. ಜಾತಿ, ಮತ, ಪಂಥಬೇಧವಿಲ್ಲದೆ ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಪುಲೆಯವರ ಕಾರ್ಯಶ್ಲಾಘನೀಯ. ಅಂದು ಬಾಲ್ಯ ವಿವಾಹ, ದೌರ್ಜನ್ಯಗೊಳಗಾದವರ ಬೆನ್ನಲುಬಾಗಿ ನಿಂತು ಹೋರಾಟ ನಡೆಸಿದ ದಿಟ್ಟ ಮಹಿಳೆಯಾಗಿದ್ದರು. ಅದ್ದರಿಂದ ಇಂದು ಪ್ರತಿಯೊಬ್ಬರು ನೆನಪು ಮಾಡಿಕೊಳ್ಳುವಂತಾಗಬೇಕು.
ಈ ನಿಟ್ಟಿನಲ್ಲಿ ಶಿಕ್ಷಣ ಪಡೆದ ಮಹಿಳೆಯರಿಂದ ಸಮಸ್ಯೆಗಳು ದೂರವಾಗಲಿವೆ. ಅಕ್ಷರದ ತಾಯಿ ಎಂದೇ ಖ್ಯಾತಿ ಪಡೆದಿರುವ ಜಾಗತಿಕ ಮಟ್ಟದಲ್ಲಿ ಸಾವಿತ್ರಿಬಾಯಿ ಪುಲೆ ರವರ ಜನ್ಮ ದಿನವನ್ನು ಸರಕಾರದ ಮಟ್ಟದಲ್ಲಿ ಆಚರಿಸದಿರುವುದು ವಿಷಾಧನೀಯ ಎಂದರು.
ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ಉಮಾ ಅಧ್ಯಕ್ಷತೆ ವಹಿಸಿದ್ದರು. ದಸಂಸ ರಾಜ್ಯ ಖಜಾಂಚಿ ಭದ್ರಾವತಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಜಯಪ್ಪ ಮಾತನಾಡಿದರು. ಮುಖಂಡರಾದ ಎಸ್.ಕೃಷ್ಣ, ಎಂ.ಎಸ್.ಬಸವರಾಜ್, ರಂಗನಾಥ್, ತಿಪ್ಪೇ ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post