ಭದ್ರಾವತಿ: ಬೆಳಗಾವಿಯ ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಇಂಜಿನಿಯರಿಂಗ್ ಪ್ರಶ್ನೆ ಪತ್ರಿಕೆಗಳ ಸೋರಿಕೆಯಾಗಿರುವುದನ್ನು ಖಂಡಿಸಿ ಎಬಿವಿಪಿ ಮುಖಂಡ ಧನುಷ್ ನೇತೃತ್ವದಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಬದಲಿಗೆ ಹಲವಾರು ಹಗರಣಗಳಲ್ಲಿ ಸಿಲುಕಿ ಸಮಸ್ಯೆಗಳ ಸರಮಾಲೆಯಾಗಿ ಎದ್ದು ನಿಂತಿದೆ. ಅನೇಕ ವರ್ಷಗಳಿಂದ ಭ್ರಷ್ಟಾಚಾರ, ಮೌಲ್ಯಮಾಪನ, ಪರೀಕ್ಷೆ ಹಾಗು ಅಂಕಪಟ್ಟಿ ಗೊಂದಲ ಹೀಗೆ ಹಲವಾರು ಸಮಸ್ಯೆಗಳ ನಡುವೆ ನರಳುತ್ತಿದೆ. ಇತ್ತೀಚಿಗೆ ಆರಂಭವಾದ ಇಂಜನಿಯರಿಂಗ್ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ಸುರಕ್ಷಿತವಾಗಿ ತಲುಪಿಸಬೇಕಾದ ವಿವಿಯು ಬೀದಿಗಳಲ್ಲಿ ಹರಿದಾಡುವಂತೆ ಮಾಡಿರುವುದು ಖಂಡನೀಯ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ವಿವಿಯು ಹಗರಣಗಳಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿವಿಯಲ್ಲಿ ಪ್ರಶ್ನೆ ಪತ್ರಿಕೆ ಜೋಪಾನವಾಗಿಡಲು ಸ್ಟ್ರಾಂಗ್ ರೂಮಿನ ವ್ಯವಸ್ಥೆ ಇದ್ದರು ಪತ್ರಿಕೆಗಳು ಸೋರಿಕೆಯಾಗಿರುವುದು ನಿರ್ಲಕ್ಷತನವಾಗಿದೆ. ಪ್ರತಿಯೊಂದು ಪ್ರಶ್ನೆ ಪತ್ರಿಕೆಯು 10 ಸಾವಿರ ರೂಗಳಿಗೆ ಮಾರಾಟವಾಗುತ್ತಿದೆ. ಇದರಿಂದ ಕಾಣದ ಕೈಗಳು ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿದೆ. ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೂಡಲೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳುಹಿಸದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿದೆ.
ಈ ಕೂಡಲೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ಆಕಾಶ್, ಆದಿತ್ಯ, ಗೋಪಿನಾಥ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post