ಭದ್ರಾವತಿ: ವಿಐಎಸ್‍ಎಲ್ ಕಾರ್ಖಾನೆಯಲ್ಲಿ ನಿವೃತ್ತ ಕಾರ್ಮಿಕರ ಬೆವರು ಇರುವುದರಿಂದ ನಗರ ಪ್ರದೇಶ ಉಳಿಯಲು ಸಾಧ್ಯವಾಗಿದೆ. ಹಾಲಿ ವಾಸ ಮಾಡುತ್ತಿರುವ ಮನೆಗಳನ್ನು ನವೀಕರಿಸಿ ಯಥಾ ಸ್ಥಿತಿಯಲ್ಲಿ ನೀಡಲು ಆಡಳಿತ ಮಂಡಳಿ ಮುಂದಾಗಬೇಕಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಅವರು ವಿಐಎಸ್‍ಎಲ್ ಕಾರ್ಖಾನೆಯ ನ್ಯೂಟೌನ್ ವಿಐಎಸ್‍ಎಲ್ ನಗರಾಡಳಿತ ಕಛೇರಿ ಮುಂಭಾಗ ನಿವೃತ್ತ ಕಾರ್ಮಿಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ನಿವೃತ್ತ ಕಾರ್ಮಿಕರಿಗೆ ನೀಡಲಾಗಿರುವ ವಸತಿ ಗೃಹಗಳನ್ನು ಆಡಳಿತ ಮಂಡಳಿ ನೋಟೀಸ್ ನೀಡಿ ತೆರವು ಮಾಡುವಂತೆ ಒತ್ತಾಯಿಸಿರುವುದು ಸರಿಯಾದ ಕ್ರಮವಲ್ಲ. ನೋಟೀಸ್ ಹಿಂಪಡೆದು ಯಥಾ ಸ್ಥಿತಿಯಲ್ಲಿ ಉಳಿಸಲು ಕ್ರಮ ಕೈಗೊಳ್ಳಬೇಕು. ಆಡಳಿತ ಮಂಡಳಿ ಯಾವುದೇ ರೀತಿಯಲ್ಲಿ ತೊಂದರೆ ನೀಡದಂತೆ ಕ್ರಮಕ್ಕೆ ಮುಂದಾಗಬೇಕು. ನಿವೃತ್ತ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಹಾಲಿ ಇರುವ ಮನೆಗಳನ್ನು ನವೀಕರಿಸಿ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ ಅವರು ಸ್ಥಳದಲ್ಲಿದಲ್ಲಿದ್ದ ಕಾರ್ಯಪಾಲಕ ನಿರ್ದೇಶಕರಿಗೆ ಸೂಚಿಸಿದ ನಂತರ ಶಾಸಕರು ಕಾರ್ಯಪಾಲಕ ನಿರ್ದೇಶಕ ಕೆ.ಎಲ್.ಎಸ್ ರಾವ್ ರವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅವರು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ವಸತಿಗೃಹಗಳನ್ನು ಆಡಳಿತ ಮಂಡಳಿ ನವೀಕರಿಸಲಿ
ನಗರದ ವಿಐಎಸ್‍ಎಲ್ ಕಾರ್ಖಾನೆಯು ನಿವೃತ್ತ ಕಾರ್ಮಿಕರಿಗೆ ನೀಡಿರುವ ಮನೆಗಳನ್ನು ನವೀಕರಿಸಿ ತೊಂದರೆ ನೀಡದಂತೆ ಯಥಾಸ್ಥಿತಿಯಲ್ಲಿ ಮುಂದುವರೆಸಿ ಅನುಕೂಲ ಮಾಡಿ ಕೊಡುವಂತೆ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಒತ್ತಾಯಿಸಿದರು.
ಸುಮಾರು 5 ದಶಕಗಳಿಗೂ ಅಧಿಕ ವರ್ಷಗಳಿಂದ ಸಾವಿರಾರು ಕಾರ್ಮಿಕರು ಕಾರ್ಖಾನೆಯಲ್ಲಿ ದುಡಿದು ನಿವೃತ್ತರಾಗಿದ್ದಾರೆ. ಇದೇ ಕಾರ್ಖಾನೆಯ ವ್ಯಾಪ್ತಿಯಲ್ಲಿ ಇರುವ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಬ್ಯಾಸ ಪಡೆದಿದ್ದಾರೆ. ನಿವೃತ್ತರಾಗಿರುವ ಕಾರ್ಮಿಕರು ಅಸ್ಥಿತ್ವ ಕಂಡುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿ ವಾಸವಿರುವ ಮನೆಗಳನ್ನು ಖಾಲಿ ಮಾಡಿಸಲು ಆಡಳಿತ ಮಂಡಳಿ ಏಕಾಏಕಿ ನೋಟೀಸ್ ನೀಡಿ ಖಾಲಿ ಮಾಡುವಂತೆ ಸೂಚಿಸಿರುವುದು ಖಂಡನೀಯ ಎಂದರು.
ನಿವೃತ್ತ ಕಾರ್ಮಿಕರಿಗೆ ಯಥಾಸ್ಥಿತಿಯಲ್ಲಿ ಮನೆಗಳನ್ನು ನೀಡುವುದರಿಂದ ಕಾರ್ಖಾನೆಗೆ ಲಾಭವಾಗಿದೆ. ಅಲ್ಲದೆ ನಗರ ಪ್ರದೇಶವು ಸಹ ಸುಂದವಾಗಿರಲು ಕಾರಣವಾಗಿದೆ. ಇಂತಹ ಸ್ಥಿತಿಯಲ್ಲಿ ಮನೆಗಳನ್ನು ತೆರವು ಮಾಡಲು ನೋಟೀಸ್ ನೀಡಿರುವುದರಿಂದ ಕಾರ್ಮಿಕರಲ್ಲಿ ದಿಕ್ಕು ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಮನೆಗಳನ್ನು ತೆರವು ಮಾಡಬೇಡಿ ಎಂದು ನಿವೃತ್ತರಿಗೆ ಧೈರ್ಯ ತುಂಬಿದರು.
ಕಾರ್ಮಿಕ ಹಿರಿಯ ಮುಖಂಡ ಎಸ್.ಎನ್.ಬಾಲಕೃಷ್ಣ ಮಾತನಾಡಿ ನಿವೃತ್ತ ಕಾರ್ಮಿಕರಿಗೆ ಮನೆಗಳ ತೆರವಿಗೆ ನೋಟೀಸ್ ನೀಡಿರುವುದು ಅತ್ಯಂತ ಖಂಡನೀಯ. ನಿವೃತ್ತರಾಗಿರುವ ಕಾರ್ಮಿಕರ ಮಕ್ಕಳು ತಂದೆ ತಾಯಿಗಳನ್ನು ತೊರೆದು ಬೇರೆ ಬೇರೆ ನೆಲಸಿದ್ದಾರೆ. ಮಕ್ಕಳಿದ್ದರು ಸಹ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿ ಕಾರ್ಖಾನೆಗಳ ಮನೆಗಳ ಮೇಲೆ ಅವಲಂಭಿತರಾಗಿರುವ ನಿವೃತ್ತರಿಗೆ ಮನೆ ತೊರೆಯುವಂತೆ ಆದೇಶ ನೀಡಿರುವುದನ್ನು ಕೈಬಿಟ್ಟು ಬಾಡಿಗೆ ಆಧಾರದಡಿ ಅಥವಾ ಬಾಡಿಗೆ ಆಧಾರದಡಿ ಮುಂದುವರೆಸಲು ಅನುವು ಮಾಡಿಕೊಡಬೇಕು.
ಕೂಡಲೇ ಸಂಸದ ಬಿ.ವೈ. ರಾಘವೇಂದ್ರ ಮಧ್ಯೆ ಪ್ರವೇಶಿಸಿ ಕಾರ್ಮಿಕರ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರ ಗಮನ ಸೆಳೆಯಲು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಎಎಲ್‍ಎಸ್ ರಾವ್, ಅಧಿಕಾರಿಗಳಾದ ಚಕ್ರವರ್ತಿ, ವಿಶ್ವನಾಥ್, ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಜೆ. ಜಗದೀಶ್, ಬಸಂತಕುಮಾರ್, ಅಮೃತ್ ಕುಮಾರ್, ನಿವೃತ್ತ ಕಲ್ಯಾಣ ಕೇಂದ್ರದ ಜೆ.ಎನ್. ನಾಗಭೂಷಣ್, ಹನುಮಂತರೆಡ್ಡಿ, ಕೆ.ಎನ್. ಭೈರಪ್ಪಗೌಡ, ರಾಮಲಿಂಗಯ್ಯ, ರವೀಂದ್ರರೆಡ್ಡಿ, ಮುಖಂಡರಾದ ಕರಿಯಪ್ಪ, ಎಂ.ಎಸ್.ಸುಧಾಮಣಿ, ಕೃಷ್ಣೇಗೌಡ ಸೇರಿದಂತೆ ಮಹಿಳೆಯರಾದಿಯಾಗಿ ನೂರಾರು ನಿವೃತ್ತ ಕಾರ್ಮಿಕರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)





Discussion about this post