ಭದ್ರಾವತಿ: ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಸೋಲು ಕಂಡಿರುವುದು ನಿಜ. ತಮ್ಮ ಸೋಲಿಗೆ ಯಾರು ಹೊಣೆ ಅಲ್ಲ. ಕಾಲಾವಕಾಶ, ಗೊಂದಲ ಸೇರಿ ಹಲವಾರು ಕಾರಣಗಳಿಂದ ಸೋಲು ಕಾಣಬೇಕಾಯಿತು. ಈ ಭಾರಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮೈತ್ರಿ ಒಕ್ಕೂಟದ ಲೋಕಸಭಾ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಭಾರಿ ಸಮಿಶ್ರ ಸರಕಾರದ ಒಮ್ಮತದ ಅಭ್ಯರ್ಥಿಯಾಗಿಸಿದ್ದಾರೆ. ಎರಡು ಪಕ್ಷಗಳ ಕಾರ್ಯಕರ್ತರೆಲ್ಲರು ಮನಸ್ಸು ಮಾಡಿದ್ದಲ್ಲಿ ಈ ಭಾರಿ 4.9 ಲಕ್ಷ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಸಮ್ಮಿಶ್ರ ಸರಕಾರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ರೂ. 491 ಕೋಟಿ ನೆರವು ನೀಡಿದೆ. ಜಿಲ್ಲೆಯಲ್ಲಿ ಹಲವು ದಶಕದಿಂದ ನೆನೆಗುದಿಯಲ್ಲಿದ್ದ ನೀರಾವರಿ ಯೋಜನೆಗಳಿಗೆ ಭರಪೂರ ಹಣದ ನೆರವನ್ನು ನೀಡುವಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರ ಪಾತ್ರ ಹಿರಿದು. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅವಧಿಯಲ್ಲಿ ಈ ಪ್ರಮಾಣದ ನೆರವನ್ನು ನೀರಾವರಿ ಯೋಜನೆಗೆ ಬಿಡುಗಡೆ ಮಾಡಿರಲಿಲ್ಲ, ಇದನ್ನು ಪೂರೈಸಿದ ಕೀರ್ತಿ ಸಮ್ಮಿಶ್ರ ಸರಕಾರದ್ದಾಗಿದೆ.
ಇಲ್ಲಿ ತನಕ ನಾನಾ ಯೋಜನೆಯಲ್ಲಿ ಸುಮಾರು ರೂ. 1,142 ಕೋಟಿ ರೂಪಾಯಿಗಳನ್ನು ಅನೇಕ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆ ಮಾಡಿದೆ, ಆದರೆ ಜಿಲ್ಲೆಗೆ ಕೇಂದ್ರದ ಕೊಡುಗೆ ಏನು ಎಂಬುದನ್ನು ಬಹಿರಂಗ ಮಾಡಲಿ ಎಂದು ಸವಾಲು ಹಾಕಿದರು.
ಕೆಲಸದ ಸಾಧನೆ ಮಾಡದ ಬಿ.ವೈ. ರಾಘವೇಂದ್ರ ಅವರಿಗೆ ತಕ್ಕಪಾಠ ಕಲಿಸುವ ಚುನಾವಣೆ ಇದಾಗಿ ಬಿಜೆಪಿ ರಾಜಕೀಯ ದುಸ್ಥಿತಿಯತ್ತ ಸಾಗಿದೆ. ಹಾಲಿ ಸಂಸದರು ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಟ ಮಾಡುತ್ತಿರುವ ಸ್ಥಳಗಳಲ್ಲಿ ಕೇವಲ ಪೋಟೋಗಳಿಗೆ ಪೋಸ್ ನೀಡಿ ಹೋಗುವುದು ಬಿಟ್ಟರೆ ಸಾಧನೆ ಕೇವಲ ಶೂನ್ಯ. ಈ ಕ್ಷೇತ್ರದಲ್ಲಿ ಅಪ್ಪಾಜಿಗೌಡರ ನೆರವು ಸಹಕಾರದಿಂದ ಮತ್ತಷ್ಟು ಹೆಚ್ಚಿನ ಅಂತರವನ್ನು ನಾನು ನಿರೀಕ್ಷೆ ಮಾಡಿದ್ದೇನೆ ಎಂದರು.
ನಮ್ಮ ತಂದೆ ದಿವಂಗತ ಬಂಗಾರಪ್ಪನವರ ಕೊಡುಗೆ, ಎಂ.ಜೆ.ಅಪ್ಪಾಜಿ, ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಪೂರ್ಯನಾಯ್ಕ ಅವರ ಶಕ್ತಿ ಹಾಗೂ ವಿಶೇಷವಾಗಿ ಈ ಕ್ಷೇತ್ರದ ಜನರು ನನಗೆ ಕಳೆದ ಬಾರಿ ನೀಡಿದ್ದಕ್ಕಿಂತ ಹೆಚ್ಚಿನ ಅಂತರವನ್ನು ಈಬಾರಿ ಕೊಡಿಸುತ್ತಾರೆ ಎಂಬ ನಿರೀಕ್ಷೆ ನನಗಿದ್ದು, ಅದರ ಋಣವನ್ನು ತೀರಿಸಲು ನಾನು ಸಿದ್ದನಾಗಿದ್ದೇನೆ. ಮುಂದಿನ 30 ದಿನ ನನ್ನನ್ನು ಬೆಂಬಲಿಸಿ ಸಹಕಾರ ಕೊಡಿ ಮುಂದಿನ ಐದು ವರ್ಷ ಈ ಜಿಲ್ಲೆಯ ಮಗನಾಗಿ ನಿಮ್ಮೊಂದಿಗೆ ಕೆಲಸ ಮಾಡುವ ಮೂಲಕ ನೆನೆಗುದಿಯ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಧಿಕಾರ ಎಂಬುದು ತಮ್ಮಲ್ಲೆ ಅಲ್ಲ ನಮ್ಮವರಲ್ಲಿ ಇರಬೇಕು ಎಂದ ಅವರು ಏ: 3 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಹಾಲಿ ಮಾಜಿ ಸಂಸದರು ಹತ್ತು ವರ್ಷಗಳ ಮಾಡಿರುವ ಕೆಲಸ ಶೂನ್ಯ: ಅಪ್ಪಾಜಿ
ಕಳೆದ ಹತ್ತು ವರ್ಷದಿಂದ ಲೋಕಸಭಾ ಸದಸ್ಯರಾಗಿ ಕೆಲಸ ಮಾಡಿರುವ ಬಿ.ಎಸ್.ಯಡಿಯೂರಪ್ಪ ಹಾಗು ಬಿ.ವೈ.ರಾಘವೇಂದ್ರ ಅವರ ಕೊಡುಗೆ ಏನು ಎಂಬುದನ್ನು ಬಹಿರಂಗ ಮಾಡಲಿ ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಸವಾಲು ಹಾಕಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬಿ.ಎಸ್. ಯಡಿಯೂರಪ್ಪ ಇಲ್ಲಿನ ವಿಐಎಸ್‍ಎಲ್ ಕಾರ್ಖಾನೆಗೆ 150 ಹೆಕ್ಟೇರ್ ಗಣಿ ಮಂಜೂರು ಮಾಡಲು ಸಾದ್ಯವಾಗಿಲ್ಲ. ಎಂಪಿಎಂ ಕಾರ್ಖಾನೆಗೆ ಕೇಳಿದ್ದ 300 ಕೋಟಿ ಬ್ಯಾಂಕ್ ಗ್ಯಾರಂಟಿ ಕಡತಕ್ಕೆ ಒಪ್ಪಿಗೆ ನೀಡಲಿಲ್ಲ, ಆಗ ಅವರಿಗೆ ಸಿಕ್ಕ ಅಧಿಕಾರವನ್ನು ಈ ಕ್ಷೇತ್ರಕ್ಕೆ ವಿನಿಯೋಗ ಮಾಡಿದ್ದಾರೆ ನಗರದಲ್ಲಿನ ಅವಳಿ ಕಾರ್ಖಾನೆಗಳು ಉತ್ತುಂಗದಲ್ಲಿ ಇರುತ್ತಿತ್ತು, ಆಗ ಮಾಡದ ಕೆಲಸವನ್ನು ಈಗ ಮಾಡುತ್ತೇವೆ ಎಂದು ಹೇಳಿಕೊಂಡು ಚುನಾವಣೆ ಗಿಮಿಕ್ ಮಾಡುತ್ತಿರುವುದು ಎಷ್ಟು ಸಮಂಜಸ ಎಂದು ಕಿಡಿಕಾರಿದರು.
ಕಾರ್ಖಾನೆಗಳು ಅವನತಿಯತ್ತ ಸಾಗಿ ಕಾರ್ಮಿಕರು ಕ್ಷೇತ್ರ ತೊರೆದು ಗುಳೆ ಹೋಗುವಂತಾಗಿದೆ. ರೈತರು, ಆಟೋಚಾಲಕರು, ವರ್ತಕರು ವ್ಯವಸ್ಥೆಯಲ್ಲಿ ಉತ್ತಮ ಸ್ಥಿತಿಕಾಣದಂತಾಗಿದೆ. ನಾಲ್ಕುವರೆ ವರ್ಷಗಳ ಕಾಲ ಲೋಕಸಭೆಯಲ್ಲಿ ಏನು ಮಾತನಾಡದೆ ಚುನಾವಣೆ ಸಂದರ್ಭದಲ್ಲಿ ಎಲ್ಲವನ್ನು ತಾವೇ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುವ ಇಚ್ಛಾಶಕ್ತಿ ಇಲ್ಲದ ನಾಯಕರ ಆಯ್ಕೆಯಿಂದ ಏನೂ ಪ್ರಯೋಜನವಿಲ್ಲ, ಆದರೆ ದೇವೇಗೌಡರು ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ ವಿಐಎಸ್‍ಎಲ್ ಕಾರ್ಖಾನೆಯನ್ನು ಕೇಂದ್ರ ಉಕ್ಕು ಪ್ರಾಧಿಕಾರಕ್ಕೆ ಸೇರ್ಪಡೆ ಮಾಡುವ ಕಡತಕ್ಕೆ ಸಹಿ ಹಾಕಿ ಜನರ ಇಚ್ಚೆ ಪೂರೈಸಿದ್ದರು, ಆದರೆ ಮುಖ್ಯಮಂತ್ರಿ ಅಧಿಕಾರ ಇದ್ದಾಗ ಬಿ.ಎಸ್.ಯಡಿಯೂರಪ್ಪ ಕಾರ್ಖಾನೆಗಳಿಗೆ ಏನೂ ಕೊಡುಗೆ ನೀಡದೆ ನಾಟಕ ಮಾಡಿದರು ಎಂದು ಟೀಕಿಸಿದರು.
ನಾಲ್ಕು ವರ್ಷ ಹನ್ನೊಂದು ತಿಂಗಳು ಆಯ್ಕೆಯಾದ ವ್ಯಕ್ತಿಗಳನ್ನು ಬೈಯುವ ಜನರು ಕೇವಲ ಒಂದು ತಿಂಗಳ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ದೊಂಬರಾಟ ವ್ಯಕ್ತಿಗೆ ಜೈ ಎನ್ನುವ ಮತದಾರರ ಮನಸ್ಸನ್ನು ನನ್ನ 40 ವರ್ಷದ ರಾಜಕೀಯ ಬದುಕಿನಲ್ಲಿ ಇನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಮತದಾರರು ಮೋದಿ, ದೇವೇಗೌಡರನ್ನು ನೋಡಿ ಮತ ನೀಡದೆ ಯೋಚಿಸಿ ಮತ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಪಂ ಸದಸ್ಯರಾದ ಜೆ.ಪಿ. ಯೋಗೇಶ್, ಎಸ್. ಕುಮಾರ್, ಮಣಿಶೇಖರ್, ನಗರಸಭಾಧ್ಯಕ್ಷೆ ಎಸ್.ಹಾಲಮ್ಮ ಸದಸ್ಯರಾದ ಎಸ್. ಸುಧಾಮಣಿ, ವಿಶಾಲಾಕ್ಷಿ, ಎಚ್.ಬಿ. ರವಿಕುಮಾರ್ ಪಕ್ಷದ ಮುಖಂಡರಾದ ಸುಕನ್ಯ, ಎಚ್.ಆರ್. ಲೋಕೇಶರಾವ್, ಧರ್ಮೇಗೌಡ, ಧರ್ಮಣ್ಣ, ಸಮೀವುಲ್ಲಾ, ಪೀರ್ ಷರೀಫ್, ಸುಜಾತ, ಡಿ.ಟಿ. ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post