ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಒಂಭತ್ತು ದಿನಗಳ ವಿಶೇಷ ಆಚರಣೆಗಳಿಂದ ನವದುರ್ಗೆಯರನ್ನು ಪೂಜಿಸುವ ಮೂಲಕ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಸಾಧ್ಯವಾಗುತ್ತದೆ. ನಾಡಿನ ಅದಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಕ್ಷೇತ್ರದ ಜನತೆಗೆ ಸುಖ ಶಾಂತಿ ನೀಡಲಿ ಎಂದು ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ಹೇಳಿದರು.
ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ನಗರಸಭೆ ಕಚೇರಿ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಅವರು ಚಾಲನೆ ನೀಡಿದರು.
ದಸರಾ ಶಕ್ತಿ ದೇವತೆಗಳ ಹಬ್ಬ ಮಾತ್ರವಲ್ಲದೆ ನಾಡಿನ ಸಂಪ್ರದಾಯ ಸಂಸ್ಕೃತಿ ಬಿಂಬಿಸುವ ಹಬ್ಬವಾಗಿದೆ. ಇಂತಹ ಹಬ್ಬಕ್ಕೆ ಚಾಲನೆ ನೀಡಲು ಅವಕಾಶ ಮಾಡಿಕೊಟ್ಟ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ವತಿಯಿಂದ ಆಯೋಜಿಸಿರುವ ನಾಡಹಬ್ಬ ದಸರಾ ಸೌಹಾರ್ದತೆಯ ಹಬ್ಬವಾಗಬೇಕು. ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಸೇರಿದಂತೆ ಎಲ್ಲಾ ಸಮಾಜದ ಸಮುದಾಯದ, ಧರ್ಮದ ಜನರು ಒಟ್ಟಾಗಿ ಆಚರಿಸುವಂತಾಗಬೇಕು. ಆಗ ಮಾತ್ರ ಏಕತೆ ಕಾಣಲು ಸಾಧ್ಯವಾಗುತ್ತದೆ. ಅಂತಹ ಸೌಹಾರ್ದತೆಯ ಹಬ್ಬಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕು ಎಂದರು.
ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಮಾತನಾಡಿ, ಹಲವು ಸಂಸ್ಕೃತಿಗಳನ್ನು ಒಳಗೊಂಡಿರುವ ಭಾರತದಲ್ಲಿ ಸಂಸ್ಕೃತಿಯ ಉಳಿವಿಗೆ ದಸರಾ ಪೂರಕವಾಗಿದೆ ಎಂದರು.
Also read: ಬಸವಣ್ಣನವರ ಭಾವಚಿತ್ರ ವಿರೂಪ ವಿರೋಧಿಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ
ಪೌರಾಯುಕ್ತ ಮನುಕುಮಾರ್ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, ದುಷ್ಟಶಕ್ತಿಗಳ ನಿವಾರಣೆ ಹಾಗು ಶಿಷ್ಟಶಕ್ತಿಗಳ ಏಳಿಗೆಗಾಗಿ ದಸರಾ ಆಚರಿಸಲಾಗುತ್ತದೆ. ಭದ್ರಾವತಿ ದಸರಾ ಆಚರಣೆಯಲ್ಲಿ ಕುಸ್ತಿ ಪಂದ್ಯಾವಳಿಗೆ ಜನರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ ಎಂದರು.
ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ವಿವಿಧ ಸಮಿತಿಗಳ ಅಧ್ಯಕ್ಷರಾದ ಬಷೀರ್ ಅಹಮದ್, ಬಸವರಾಜ ಬಿ. ಆನೇಕೊಪ್ಪ, ಚನ್ನಪ್ಪ, ಆರ್. ಮೋಹನ್‌ಕುಮಾರ್, ವಿ. ಕದಿರೇಶ್, ಮಣಿ ಎಎನ್‌ಎಸ್, ಅನುಸುಧಾಮೋಹನ್ ಪಳನಿ, ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಲತಾಚಂದ್ರಶೇಖರ್, ಅನುಪಮ ಚನ್ನೇಶ್, ಮಂಜುಳ ಸುಬ್ಬಣ್ಣ, ಜಾರ್ಜ್, ಬಿ.ಎಂ ಮಂಜುನಾಥ್, ಅನಿತಾ ಮಲ್ಲೇಶ್, ಕೋಟೇಶ್ವರ ರಾವ್, ಪಲ್ಲವಿ ದಿಲೀಪ್, ರೇಖಾ ಪ್ರಕಾಶ್, ಎಸ್. ಜಯಶೀಲ ಸುರೇಶ್, ಸವಿತಾ ಉಮೇಶ್, ಶಶಿಕಲಾ ನಾರಾಯಣಪ್ಪ, ಆರ್. ಶ್ರೇಯಸ್, ಸೈಯದ್ ರಿಯಾಜ್, ಕಾಂತರಾಜ್, ಉದಯಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ನಾಗರೀಕರು ಪಿ. ವೆಂಕಟರಮಣಶೇಟ್ ಹಾಗೂ ಪ್ರೇಮಾ ಶೇಟ್ ದಂಪತಿಯನ್ನು ಮಾಧವಚಾರ್ ವೃತ್ತದಿಂದ ನಗರಸಭೆ ಕಚೇರಿ ಆವರಣದವೆರಗೂ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ಕಂದಾಯಾಧಿಕಾರಿ ರಾಜ್‌ಕುಮಾರ್ ನಿರೂಪಿಸಿ, ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು. ಪವನ್‌ಕುಮಾರ್ ಉಡುಪ, ನರಸಿಂಹಚಾರ್, ರಮಾಕಾಂತ್ ನೇತೃತ್ವದ ತಂಡದ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post