ಭದ್ರಾವತಿ: ಇಂದಿನ ಯುವ ಜನತೆ ಕ್ಷಣಿಕ ಆಸೆಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಪ್ರಸ್ತುತ ಯುವ ಸಮೂಹ ಮೊಬೈಲ್‌ಗಳಿಗೆ ಮಾರು ಹೋಗಿ ಮೈ ಮೇಲೆ ಎಚ್ಚರವಿಲ್ಲದಂತೆ ನಡೆದುಕೊಳ್ಳುತ್ತಿರುವುದು ವಿಷಾಧನೀಯ ಎಂದು ನಗರದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಅನುಪಮ ಲಕ್ಷ್ಮೀ ಹೇಳಿದರು.
ನ್ಯೂಟೌನ್ ಸರಕಾರಿ ಸರ್‌ಎಂವಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗು ಕಾಲೇಜು ಆಡಳಿತ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಜಾಗೃತಿ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳು ಮತ್ತು ಮೊಬೈಲಿನ ದುಷ್ಪರಿಣಾಮಗಳು ವಿಷಯ ಕುರಿತು ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಂದು ಮೈ ಮೇಲೆ ಎಚ್ಚರವಿಲ್ಲದೆ ಮೊಬೈಲ್‌ಗಳನ್ನು ನೋಡುತ್ತಾ ಹಾದಿ ತಪ್ಪುತ್ತಿದ್ದಾರೆ. ಮೊಬೈಲ್‌ಗಳಲ್ಲಿ ತಲ್ಲೀನರಾಗಿ ಮೈ ಮರೆತಿರುತ್ತಾರೆ. ಇದರಿಂದ ಅಪರಾಧಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿರುವುದು ವಿಷಾಧನೀಯ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೂಪಶ್ರೀ ಮಾತನಾಡಿ ಮೊಬೈಲ್ ಹಾವಳಿಯಿಂದ ಅವಿಭಕ್ತ ಕುಟುಂಬಗಳು ಮಾಯವಾಗಿದೆ. ಮನೆಗಳಲ್ಲಿ ಪರಸ್ಪರ ಕುಳಿತು ಚರ್ಚಿಸುವ, ಮಾತನಾಡುವವರಿಲ್ಲದೆ ಮೊಬೈಲ್‌ಗಳನ್ನು ಹಿಡಿದು ತಲ್ಲೀನರಾಗಿರುವುದರಿಂದ ಸುಭಿಕ್ಷ ಸಮಾಜ ಕಾಣದಂತಾಗಿದೆ. ಯುವಕರು ದುಶ್ಚಟಗಳಿಗೆ ಮಾರು ಹೋಗದೆ ಸನ್ನಡತೆಯಲ್ಲಿ ನಡೆಯಬೇಕಿದೆ ಎಂದರು.
ಸರಕಾರಿ ಸಹಾಯಕ ಅಭಿಯೋಜಕ ಶ್ರೀಧರ್ ಮಾತನಾಡಿ ಮಾದಕ ವಸ್ತುಗಳು ನೋವನ್ನು ಕಡಿಮೆ ಮಾಡಿಕೊಳ್ಳುವ ವಸ್ತುವಾಗಿದೆ. ಆದರೆ ಇಂದು ಮಾದಕ ವಸ್ತುಗಳಿಗೆ ದಾಸರಾಗಿ ಬಲಿಯಾಗುವುದೆ ಹೆಚ್ಚಾಗಿದೆ. ಅದ್ದರಿಂದ ಯುವಕರು ಇದರಿಂದ ದೂರವಿರುವಂತೆ ಸಲಹೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಟಿ. ಚಂದ್ರೇಗೌಡ ಮಾತನಾಡಿ ಮೊಬೈಲ್‌ಗಳಲ್ಲಿ ಹರಿದಾಡುತ್ತಿರುವ ಸಾಮಾಜಿಕ ಜಾಲತಾಣಗಳಿಗೆ ಬಲಿಯಾಗಬಾರದೆಂದರು. ವಕೀಲರಾದ ಎಂ.ಎಸ್.ಶಿವಕುಮಾರ್, ವಿ.ಎಚ್. ರಾಘವೇಂದ್ರರಾವ್ ಉಪನ್ಯಾಸ ನೀಡಿದರು.
ಕಾಲೇಜು ಪ್ರಾಂಶುಪಾಲ ಡಾ.ಎಂ.ಜಿ.ಉಮಾಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ನಿರ್ಮಲ ಪ್ರಾರ್ಥಿಸಿ, ಪ್ರಾದ್ಯಾಪಕಿ ಫರಾನ ಅಂಜುಮ್ ಸ್ವಾಗತಿಸಿದರೆ, ಡಾ.ಎಚ್.ಎಂ. ಪ್ರಕಾಶ್ ವಂದಿಸಿದರು, ಎಸ್.ವರದರಾಜ್ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post