ಭದ್ರಾವತಿ: ಚಾಕು ಇರಿತದಿಂದ ಓರ್ವ ಮೃತಪಟ್ಟಿದ್ದು ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ನಗರದ ಹೊರವಲಯ ಹಿರಿಯೂರು ಗ್ರಾಮದ ಅಪ್ಪಾಜಿ ಬಡಾವಣೆಯ ಆಟೋಚಾಲಕ ರಮೇಶ್ ಮತ್ತು ಆತನ ಸ್ನೇಹಿತರು ತಡರಾತ್ರಿ ಬೊಮ್ಮನಕಟ್ಟೆಯ ವೈನ್ಸ್ ಸ್ಟೋರ್ ಬಳಿ ಬೈಕ್ ನಿಲ್ಲಿಸಿ ಡ್ರಿಂಕ್ಸ್ ತೆಗೆದುಕೊಂಡಿರುತ್ತಾರೆ. ಅದೇ ಸಮಯದಲ್ಲಿ ಮುಜಾಹಿದ್, ಮೌಲಾಲಿ ಹಾಗು ಫರೀದ್ ಎಂಬುವವರು ನಿಲ್ಲಿಸಿರುವ ಬೈಕನ್ನು ಬೀಳಿಸಿದ್ದರಿಂದ ಎಡಭಾಗದ ಇಂಡಿಕೇಟರ್ ಹಾಳಾಗಿರುತ್ತದೆ. ಈ ವಿಚಾರವನ್ನು ಸಂತೋಷ್ ಮತ್ತು ಸುರೇಶ್ ಕೇಳಲಾಗಿ ಇಬ್ಬರನ್ನು ಅವ್ಯಾಚ ಪದಗಳಿಂದ ಬೈದು ಗಲಾಟೆ ಮಾಡಿ ಹೊಡೆದಿರುತ್ತಾರೆ. ಅವರನ್ನು ಬಿಡಿಸಲು ಹೋದ ರಮೇಶ್‍ನನ್ನು ಮುಜಾಹಿದ್ ಚಾಕುವಿನಿಂದ ಹಿರಿದು ಮತ್ತಿಬ್ಬರಿಗೂ ಗಾಯಪಡಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ರಮೇಶ್ ಎದೆಗೆ ಚಾಕುವಿನಿಂದ ತಿವಿದ ಗಾಯವಾಗಿ, ಮುಖಕ್ಕೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಷಯ ತಿಳಿದ ಸಹೋದರ ರವಿ ಮತ್ತು ಅಕ್ಕನ ಮಗ ಸಂಜಯ್ ಸ್ಥಳಕ್ಕೆ ಧಾವಿಸಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ರಮೇಶ್‍ನನ್ನುಪರೀಕ್ಷೆ ನಡೆಸಿದ ವೈದ್ಯರು ಸಾವನ್ನಪ್ಪಿರುವುದು ದೃಢಪಡಿಸಿದ್ದಾರೆ. ಗಾಯಗೊಂಡಿರುವ ಸುರೇಶ್ ಮತ್ತು ಸಂತೋಷ್ ರವರನ್ನು ಸಹ ಆಸ್ಪತ್ರೆಗೆ ಕರೆತರಲಾಗಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದ್ಯೊಯಲಾಗಿದೆ.
ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
















