ಭದ್ರಾವತಿ: ಕಾಶ್ಮೀರ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿ ಖಂಡಿಸಿ, ಕೃತ್ಯಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗು ಸೈನಿಕರ ಕುಟುಂಬಕ್ಕೆ ಸೂಕ್ತ ನೆರವು ನೀಡುವಂತೆ ಆಗ್ರಹಿಸಿ ನಗರದ ವಕೀಲರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಣಿವೆ ರಾಜ್ಯದಲ್ಲಿ ಸೈನಿಕರ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು ಪದೆ ಪದೇ ದಾಳಿಗಳನ್ನು ತಪ್ಪಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ದಾಳಿಗೆ ಕಾರಣರಾದ ಜೈಷೆ ಮೊಹಮ್ಮದ್ ಸಂಘಟನೆಯನ್ನು ನಿರ್ನಾಮ ಮಾಡಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವ ಎಲ್ಲಾ ರೀತಿಯ ಸಹಕಾರ ಇರುತ್ತದೆ. ಉಗ್ರ ಸಂಘಟನೆಗಳಿಗೆ ನೆರವು ನೀಡುತ್ತಿರುವ ಪಾಕಿಸ್ತಾನದೊಂದಿಗೆ ಎಲ್ಲಾ ವ್ಯವಹಾರ ವಹಿವಾಟುಗಳನ್ನು ತಕ್ಷಣದಿಂದ ನಿಲ್ಲಿಸುವಂತೆ ಆಗ್ರಹಿಸಿದರು.
ರಾಜತಾಂತ್ರಿಕ ಒಡನಾಟವನ್ನು ನಿಲ್ಲಿಸುವುದರೊಂದಿಗೆ ವಿಶ್ವದ ಇತರೆ ದೇಶಗಳೊಂದಿಗೆ ಮಾತುಕತೆ ನಡೆಸಿ ಪಾಕಿಸ್ತಾನಕ್ಕೆ ದಿಗ್ಭಂದನ ಹೇರಲು ಒತ್ತಡ ತರಬೇಕೆಂದು ಸಂಘವು ಪ್ರತಿಪಾದಿಸುತ್ತದೆ. ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಸ್ಲಿಪರ್ ಸೆಲ್‌ಗಳ ಬಗ್ಗೆ ಉಗ್ರಕ್ರಮ ಹಾಗು ಕಠಿಣ ಶಿಕ್ಷೆ ಒದಗಿಸಬೇಕೆಂದು ಹಾಗು ಸೂಕ್ತ ಕಾನೂನು ಜಾರಿ ಮಾಡುವಂತೆ ಮತ್ತು ಉಗ್ರ ಸಂಘಟನೆಗಳಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದರೊಂದಿಗೆ ಗೂಢಚಾರಿಕೆ ಬಲಪಡಿಸುವಂತೆ ಸಂಘವು ಒತ್ತಾಯಿಸುತ್ತದೆ ಎಂದರು.
ಮೃತ ಯೋದರ ಕುಟುಂಬಗಳಿಗೆ ಸೂಕ್ತ ಆರ್ಥಿಕ ನೆರವು, ಭದ್ರತೆ ಒದಗಿಸಬೇಕು. ಅವರ ನೋವು ನಲಿವಿನೊಂದಿಗೆ ಎಲ್ಲಾ ಭಾರತೀಯರು ಸದಾಕಾಲ ಜೊತೆಗಿರುತ್ತಾರೆಂದು ಹಾಗು ಉಗ್ರರ ದಮನಕ್ಕೆ ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೂ ಸಂಘವು ಬೆಂಬಲ ಸೂಚಿಸುತ್ತದೆ. ಈ ತಕ್ಷಣ ಉಗ್ರರನ್ನು ಎಡೆಮುರಿ ಕಟ್ಟಿ ಅವರ ವಿರುದ್ದ ಮತ್ತೊಮ್ಮೆ ಭಾರತದ ಮೇಲೆ ಕಣ್ಣು ಹಾಕದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಂಘವು ಒಕ್ಕೂರಿಲಿನಿಂದ ಮನವಿ ಮಾಡುವುದಾಗಿ ತಿಳಿಸಿದರು.
ಹಿರಿಯ ವಕೀಲರಾದ ಮಂಜಪ್ಪ, ಮೃತುಜಾಖಾನ್, ಕೆ.ಎಸ್.ಸುಧೀಂದ್ರ, ನಯಾಜ್, ಆರ್.ಎಸ್.ಶೋಭ ಸೇರಿದಂತೆ ಅನೇಕರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಟಿ. ಚಂದ್ರೇಗೌಡ, ಪದಾಧಿಕಾರಿಗಳಾದ ಕೆ.ಜಿ.ರಮೇಶ್, ಎಚ್.ಎನ್.ತಿರುಮಲೇಶ್, ವಿ. ಮಗೇಶ್ ಬಾಬು, ಎಂ.ಪ್ರಕಾಶ್, ವಕೀಲರಾದ ಕೆ.ಎನ್. ಶ್ರೀಹರ್ಷ, ಕೂಡ್ಲಿಗೆರೆ ಮಂಜುನಾಥ್, ಶಿವಕುಮಾರ್, ಉದಯಕುಮಾರ್, ಮಂಜುನಾಥ್, ಬಿ.ಟಿ.ರಾಜು ಸೇರಿದಂತೆ ನೂರಾರು ವಕೀಲರು ಪಾಲ್ಗೊಂಡಿದ್ದರು.
ಪ್ರತಿಭಟನೆಗೆ ಮುನ್ನ ನ್ಯಾಯಾಲಯ ಆವರಣದಿಂದ ರಂಗಪ್ಪ ವೃತ್ತ, ಮಾಧವಚಾರ್ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಸತ್ಯನಾರಾಯಣ ರವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post