ಭದ್ರಾವತಿ: ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಅ.5 ರಂದು ಶುಕ್ರವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಜಿಲ್ಲಾ ಮಟ್ಟದ ಬೃಹತ್ ಗಾಂಧಿ ಸ್ಮತಿ, ವ್ಯಸನ ಮುಕ್ತ ಸಾಧಕರ ಸಮಾವೇಶ ಹಾಗು ಜಾಥಾ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆಯ ಕಾರ್ಯದರ್ಶಿ ಶಿವರಾಯ ಪ್ರಭು ತಿಳಿಸಿದರು.
ಈ ಕುರಿತಂತೆ ಇಂದು ಮಾತನಾಡಿದ ಅವರು, ಸಮಾಜದಲ್ಲಿ ದುರ್ಬಲ ವರ್ಗದ ಏಳಿಗೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ರವರ ದೂರದರ್ಶಿತ್ವದಿಂದ 1991 ರಲ್ಲಿ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ಮಿಸಲಾಗಿ ರಾಜ್ಯದಾದ್ಯಂತ ವಿಸ್ತರಿಸಿ 2012 ರಲ್ಲಿ ಶಿವಮೊಗ್ಗ ಜಿಲ್ಲೆ ಜಿಲ್ಲಾ ಸಮಿತಿ ರಚಿಸುವ ಮೂಲಕ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ ಹಾಗು ಸಾರ್ಥಕ ಸೇವೆಯ ಕಲ್ಪನೆ ಹೊತ್ತು ಸಮಾಜ ಸುಧಾರಣೆಗಾಗಿ ಶ್ರಮಿಸಿ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಮುಂದಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 75 ಮದ್ಯವರ್ಜನ ಶಿಬಿರಗಳನ್ನು ನಡೆಸಿ 4016 ಶಿಬಿರಾರ್ಥಿಗಳು ಸೇರ್ಪಡೆಗೊಂಡು ಮದ್ಯಮುಕ್ತ ಜೀವನ ನಡೆಸುವಂತಾಗಿದೆ. ರಾಜ್ಯದಲ್ಲಿ 26 ಜಿಲ್ಲಾ ವೇದಿಕೆಗಳು, 9 ತಾಲೂಕು ವೇದಿಕೆ 112 ವಲಯ ವೇದಿಕೆ 273 ಗ್ರಾಮ ಸಮಿತಿಗಳು ಕ್ರಿಯಾಶೀಲವಾಗಿ ಕಾರ‌್ಯ ನಿರ್ವಹಿಸುತ್ತಿವೆ. 1.50 ಲಕ್ಷಕ್ಕೂ ಅಧಿಕ ಮಂದಿ ಶಿಬಿರಗಳ ಮೂಲಕ ಹಾಗು ಸ್ವಪ್ರೇರಣೆಯಿಂದ ಪಾನ ಮುಕ್ತರಾಗಿದ್ದಾರೆ. ರಾಜ್ಯದ 26 ಜಿಲ್ಲೆಗಳಲ್ಲಿ 1257 ಮದ್ಯವರ್ಜನ ಶಿಬಿರಗಳನ್ನು ನಡೆಸಿ 86559 ಜನರಿಗೆ ಚಿಕಿತ್ಸೆ ನೀಡಲಾಗಿದೆ. 122 ವಿಶೇಷ ಶಿಬಿರ, ಪೊಲೀಸರ, ಅಪರಾಧಿಗಳ ಹಾಗು ಪೌರ ಕಾರ್ಮಿಕರ ತಲಾ ಒಂದೊಂದು ಶಿಬಿರಗಳನ್ನು ನಡೆಸಿ ಯಶಸ್ಸು ಕಾಣಲಾಗಿದೆ ಎಂದರು.
2008 ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಿರುವುದನ್ನು ಮನಗಂಡು ತಡೆಯಲು ಸ್ವಾಸ್ಥ್ಯ ಸಂಕಲ್ಪ ಎಂಬ ತರಬೇತಿ ಕಾರ‌್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ ವರ್ಷ 41 ಶಿಬಿರಗಳನ್ನು ನಡೆಸಲಾಗಿ 3288 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರಲ್ಲದೆ 28991 ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಈವರೆವಿಗೆ 805 ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು 7.70 ಲಕ್ಷಕ್ಕೂ ಅಧಿಕ ವಿದ್ಯಾರ್ಥಿ ಸಮುದಾಯಕ್ಕೆ ಜಾಗೃತಿ ಮೂಡಿಸಲಾಗಿದೆ ಎಂದರು.
ಇವೆಲ್ಲ ಸಾಧನೆಗಳನ್ನು ಮೆಲಕು ಹಾಕಲು ಹಾಗೂ ವ್ಯಸನ ಮುಕ್ತ ಜನರನ್ನು ಒಗ್ಗೂಡಿಸಿ ಮತ್ತಷ್ಟು ಹೆಚ್ಚು ಅರಿವು ಮೂಡಿಸಲು ಗಾಂಧಿ ಜಯಂತಿ ಪ್ರಯುಕ್ತ ಅ. 5 ರಂದು ನಗರದಲ್ಲಿ ಜಿಲ್ಲಾ ಮಟ್ಟದ ಗಾಂಧಿ ಸ್ಮತಿ, ಜಾಥಾ ಹಾಗು ವ್ಯಸನ ಮುಕ್ತ ಸಾಧಕರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ಸುಮಾರು 5 ಸಹಸ್ರಕ್ಕು ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಶಿವರಾಯ ಪ್ರಭು ಹೇಳಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಜಿ. ಆನಂದಕುಮಾರ್, ಜಿಲ್ಲಾ ಸದಸ್ಯ ಆರ್. ಕರುಣಾಮೂರ್ತಿ, ಪಾಲಾಕ್ಷಪ್ಪ ಇವರು ವೇದಿಕೆ ನಡೆದುಬಂದ ದಾರಿ ಹಾಗು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಕೆ.ಪ್ರಸಾದ್ ಯೋಜನೆಯ ಮಾಹಿತಿ ನೀಡಿದರು. ರಾಜಣ್ಣ, ರೇವಣಕರ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post