ಭದ್ರಾವತಿ: ನಗರಸಭಾ ವ್ಯಾಪ್ತಿಯ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಿಗೆ ಸೇರಿದ ಕೊಳಚೆ ಪ್ರದೇಶಗಳು ಸೇರಿದಂತೆ ಸರಕಾರಿ ಭೂಮಿಯಲ್ಲಿ ಹಕ್ಕುಪತ್ರ ಮತ್ತು ಗುರುತಿನ ಪತ್ರಗಳನ್ನು ಪಡೆದ ಸುಮಾರು 9 ಸಾವಿರ ನಿವಾಸಿಗಳಿಗೆ ನಗರಸಭೆಯು ಖಾತೆ ದಾಖಲು ಮಾಡಲು ಮುಂದಾಗಿದೆ ಎಂದು ಶಾಸಕ ಬಿ.ಕೆ. ಸಂಗಮೆಶ್ವರ್ ಹೇಳಿದರು.
ಶಾಸಕರ ಗೃಹ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ವಿಐಎಸ್‌ಎಲ್ ಮತ್ತು ಎಂಪಿಎಂ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶಗಳ ಸಹಸ್ರಾರು ಮಂದಿ ವಾಸಿಗಳು ಹಕ್ಕುಪತ್ರ ಮತ್ತು ಗುರುತಿನ ಪತ್ರಗಳನ್ನು ಪಡೆದಿದ್ದರು ನಗರಸಭೆಯಲ್ಲಿ ಖಾತೆ ದಾಖಲಾಗದೆ ಪರಿತಪಿಸುತ್ತಿದ್ದರು. ಮಕ್ಕಳ ಮದುವೆ ಮುಂಜಿ ಮತ್ತಿತ್ಯಾದಿಗಳಿಗೆ ಮಾರಾಟ ಮಾಡಲಾಗದೆ, ಹಣ ದೊರೆಯದೆ, ಖರೀದಿಸಿದ ಮನೆಗಳ ಖಾತೆ ದಾಖಲಿಲ್ಲದೆ ಭದ್ರತೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಇವೆಲ್ಲವನ್ನು ಪರಿಗಣಿಸಿ ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಭರವಸೆಯಂತೆ ನಿವಾಸಿಗಳ ಮನೆ ಬಾಗಿಲಿಗೆ ನಗರಸಭೆಯ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಸ್ವೀಕರಿಸಿ ಖಾತೆ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯವು ಜ.7 ರ ಸೋಮವಾರದಿಂದ ಚಾಲನೆ ನೀಡಲಾಗುವುದು ಎಂದರು.
ರಾಜ್ಯ ಸರಕಾರ 5 ವರ್ಷಗಳ ಕಾಲ ಸುಭದ್ರ
ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕರು ಸಮಿಶ್ರ ರಾಜ್ಯ ಸರಕಾರ 5 ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಬಿಜೆಪಿ ಮತ್ತು ಶಾಸಕ ರಮೇಶ್ ಜಾರಕಿಹೊಳಿ ಇವರುಗಳ ವರ್ತನೆ ಅತಿರೇಖದ್ದಾಗಿದೆ. ಇವರಿಂದ ಸರಕಾರಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಸಧ್ಯದಲ್ಲೆ ಲ್ಯಾಂಡ್ ಆರ್ಮಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಅಧಿಕಾರ ಸ್ವೀಕಾರ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಚಂದ್ರೇಗೌಡ, ನಗರಸಭಾ ಸದಸ್ಯ ಪ್ರಕಾಶ್ ರಾವ್, ಮಾಜಿ ಸದಸ್ಯ ಸಿ.ರಾಮಕೃಷ್ಣೇಗೌಡ, ಆಸ್ಪತ್ರೆ ಸಲಹಾ ಸಮಿತಿ ಸದಸ್ಯ ವಸಂತರಾವ್ ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post