ಭದ್ರಾವತಿ: ಸರ್.ಎಂ. ವಿಶ್ವೇಶ್ವರಯ್ಯ ಕನಸಿನ ಎಂಪಿಎಂ ಅಭಿವೃದ್ಧಿಗೆ ಮರುಜೀವ ಕೊಡುವ ಪ್ರಯತ್ನ ಈಗಾಗಲೇ ನಡೆದಿದೆ ಎಂದು ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಭದ್ರಾವತಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಪಿಎಂ ಮರುಜೀವದ ಪ್ರಯತ್ನಕ್ಕೆ ಯಡಿಯೂರಪ್ಪ, ಆಯನೂರು ಮಂಜುನಾಥ್ ಮತ್ತು ನಾನು ಮತ್ತು ಭದ್ರಾವತಿಯ ಬಿಜೆಪಿ ಮುಖಂಡರುಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಅಮೃತ್, ಗ್ರಾಮೀಣ ಜ್ಯೋತಿ, ಉಜ್ವಲ್ ಯೋಜನೆ ಅನುದಾನಗಳು ಸೇರಿದಂತೆ ಹಲವಡಿಯಲ್ಲಿ ಸಿಂಹಪಾಲು ಬಂದಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ಜನರಿಗೆ ಕೊಟ್ಟಂತಹ ಕಾರ್ಯಗಳು ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟಿದೆ. ಅದರಲ್ಲೂ, ವಿಶೇಷವಾಗಿ ಭದ್ರಾವತಿ ಕ್ಷೇತ್ರಕ್ಕೆ ಅಮೃತ್ ಯೋಜನೆ ಅಡಿಯಲ್ಲಿ 150 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದರಲ್ಲಿ ನೀರು ಸರಬರಾಜು ಯೋಜನೆಗೆ ರೂ. 65 ಕೋಟಿ ಒಳಚರಂಡಿ ವ್ಯವಸ್ಥೆಗೆ ರೂ. 45 ಕೋಟಿ ಉದ್ಯಾನವನ ಅಭಿವೃದ್ಧಿಗೆ ರೂ. 4 ಕೋಟಿ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ರೂ. 36 ಕೋಟಿ ಸೇರಿದಂತೆ ಕಾಮಗಾರಿ ಅಭಿವೃದ್ಧಿಯಾಗಿದೆ ಎಂದರು.
ಬಡವರ ಮನೆಯಲ್ಲಿ ತಿಂಗಳ ವಿದ್ಯುತ್ ಬಿಲ್ ಕಡಿಮೆ ಬರುವ ಸಹಾಯದ ದೃಷ್ಟಿಯಿಂದ ಕೇಂದ್ರದ ಯೋಜನೆ ಅಡಿ ಸುಮಾರು 3096 ಫಲಾನುಭಗಳಿಗೆ ಎಲ್ಇಡಿ ಬಲ್ಬ್ ಕೊಡುವ ಕಾರ್ಯ ಆಗಿದೆ. ಪ್ರತಿ ಮನೆಗೆ ಐದರಿಂದ ಆರು ಬಲ್ಬ್ ನೀಡಲಾಗಿದೆ. ಉಜ್ವಲ ಯೋಜನೆಯಡಿ ಲಕ್ಷ ಬಿಪಿಎಲ್ ಬಡ ಕುಟುಂಬಕ್ಕೆ ಅನಿಲ ಸಂಪರ್ಕ ವ್ಯವಸ್ಥೆ ನೇರವಾಗಿ ಯಾವುದೇ ರಾಜಕೀಯವಿಲ್ಲದೆ ಬಡವರ ಮನೆ ಸೇರಿದೆ ಎಂದರು.
ಪಂಡಿತ್ ದೀನದಯಾಳ್ ಉಪಾಧ್ಯಾಯರ ಶತಮಾನ ಉತ್ಸವದ ಈ ಸಮಯದಲ್ಲಿ ನಮ್ಮ ಕಟ್ಟಕಡೆಯ ವ್ಯಕ್ತಿಗೂ ಕೂಡ ಗ್ರಾಮೀಣ ಅಭಿವೃದ್ದಿ ಯೋಜನೆಯಡಿ ಗ್ರಾಮೀಣ ಜ್ಯೋತಿ ಯೋಜನೆ ಅಡಿಯಲ್ಲಿ 3050 ಫಲಾನುಭವಿಗಳಿಗೆ ಟೂಫೇಸ್, ತ್ರೀಪೇಸ್ ವಿದ್ಯುತ್ ಸಂಪರ್ಕ ಕೊಡುವ ಕೆಲಸ ಕೈಗೊಂಡಿದೆ. ಇದು ಭದ್ರಾವತಿ ಕ್ಷೇತ್ರಕ್ಕೆ ನರೇಂದ್ರ ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಬಂದಿರುವ ಅನುದಾನವಾಗಿದೆ ಎಂದರು.
ಇನ್ನೊಂದು ಕಡೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ವೇಳೆ ಭದ್ರಾವತಿ ಕ್ಷೇತ್ರಕ್ಕೆ ನಗರೋತ್ಥಾನ ಯೋಜನೆ ಜಾರಿಗೆ ತಂದು, ನಗರ ಯೋಜನೆಯಡಿ ರೂ. 3 ಕೋಟಿ ಮತ್ತು ನಗರಸಭೆಗೆ ರೂ. 50 ಐವತ್ತು ಕೋಟಿ ಅನುದಾನ ಕೊಡುವುದರ ಮೂಲಕ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಈ ಭಾಗದಲ್ಲಿ ಮಾಡಿದ್ದಾರೆ ಎಂದರು.
ಇನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ. 50ರಷ್ಟು ಅನುದಾನದಡಿ ಶಿವಮೊಗ್ಗದಲ್ಲಿ ಭದ್ರಾವತಿಯ ಸುಸಜ್ಜಿತ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಿದ್ದು, ಈಗ ಬೆಂಗಳೂರಿನಿಂದ ಶಿವಮೊಗ್ಗ ತಾಳಗುಪ್ಪವರೆಗೆ ಇಂಟರ್ ಸಿಟಿ ರೈಲು ಓಡಾಡುತ್ತಿದೆ. ಕ್ಷೇತ್ರದ ಜನರು ಒಂದೇ ದಿನದಲ್ಲಿ ಬೆಂಗಳೂರಿಗೆ ಹೋಗಿ ವಾಪಸ್ ತಮ್ಮೂರಿಗೆ ಆಗಮಿಸುತ್ತಿದ್ದಾರೆ ಎಂದರೆ ಯಡಿಯೂರಪ್ಪನವರ ಪ್ರಾಮಾಣಿಕ ಕೊಡುಗೆ ಎಂದರು.
ನರೇಂದ್ರ ಮೋದಿಯವರ ಜನಪರ ಯೋಜನೆಗಳನ್ನು ಮೆಚ್ಚಿ ನಮ್ಮ ಪಕ್ಷಕ್ಕೆ ಬೆಂಬಲವನ್ನು ನೀಡಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ರಾಜ್ಯ ಬಿಜೆಪಿ ವಿಶೇಷ ಆಹ್ವಾನಿತ ಸದಸ್ಯ ಎಸ್. ದತ್ತಾತ್ರಿ, ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್, ಭದ್ರಾವತಿ ತಾಲೂಕು ಬಿಜೆಪಿ ಅಧ್ಯಕ್ಷ ಆನಂದ್, ತಾಲೂಕು ಪ್ರಭಾರಿ ಕದಿರೇಶ್, ಗ್ರಾಮಾಂತರ ಅಧ್ಯಕ್ಷ ರುದ್ರೇಶ್ ಮಂಗೋಟೆ ಪ್ರವೀಣ್ ಪಟೇಲ್ ಇದ್ದರು.
Discussion about this post