ಭದ್ರಾವತಿ: ಮಹಿಳೆ ಜಗನ್ಮಾತೆಯಾಗಿದ್ದರೂ ಶೋಷಣೆಯಿಂದ ಕೂಡಿದ್ದಾಳೆ. ಮಧ್ಯೆಕಾಲದ ಯುಗದಲ್ಲಿಯೂ ಶೋಷಣೆ ಬಹಳಷ್ಟು ಪ್ರಮಾಣದಲ್ಲಿ ಕಂಡುಬಂದಿದ್ದು, ಇಂದಿಗೂ ಆ ಪರಿಸ್ಥಿತಿ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ನಗರಸಭೆ ಸಮೂಹ ಸಂಘಟನಾ ಅಧಿಕಾರಿ ಸುಹಾಸಿನಿ ಎಸ್. ಶೆಟ್ಟಿ ಹೇಳಿದರು.
ಕಾಗದನಗರದ ಎಂಪಿಎಂ ಲೇಔಟ್‌ನ ಸಂಜೀವಿನಿ ಹಿರಿಯ ನಾಗರಿಕರ ಆರೈಕೆ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೋರಾಟದ ಫಲವಾಗಿ ಮಹಿಳೆ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸಲು ಕಾರಣವಾಗಿದೆ. ಹೆಣ್ಣು ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಯಾವ ಸಮಸ್ಯೆಯನ್ನು ಕಾಣಲು ಸಾಧ್ಯವಿಲ್ಲ. ಆಕೆ ಮನಸು ಮಾಡಿದಲ್ಲಿ ಏನನ್ನಾದರೂ ಸಾಧಿಸಬಹುದು ಎಂದರು.
ಬಡತನ ನಿವಾರಣಾ ಕೋಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾವು ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ನಿರಾಶ್ರಿತರಿಗೆ ಆಶ್ರಯ ನೀಡುವ ಸಲುವಾಗಿ ನಗರಸಭೆಯಿಂದ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದ ಸ್ಥಾಪನೆ ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಪ್ರಯತ್ನದಲ್ಲಿ ತೊಡಗಿರುವ ಸಂಸ್ಥೆಯ ಪದಾಧಿಕಾರಿಗಳ ಪ್ರಯತ್ನ ಮೆಚ್ಚುವಂತದ್ದು ಎಂದರು.
ಈ ಬೈಟ್ ಕಂಪ್ಯೂಟರ್ ಸಂಸ್ಥೆ ಮುಖ್ಯಸ್ಥೆ ಅಗ್ನೇಸ್ ಮಾತನಾಡಿ, ಹೆಣ್ಣು ಮಕ್ಕಳು ವಿದ್ಯೆಗೆ ಆದ್ಯತೆ ನೀಡಿದರೆ ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯ. ಹೆಣ್ಣಿನಲ್ಲಿ ಸಹನಾಶೀಲತೆ ಇರುವುದರಿಂದ ಪುರುಷ ಪ್ರಧಾನ ರಾಷ್ಟ್ರದಲ್ಲಿಯೂ ಮಹಿಳೆಗೆ ಪ್ರಾದ್ಯನತೆ ದೊರೆತಿದೆ. ಈ ಕಾರಣದಿಂದಾಗಿಯೇ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದ ಸಂಸ್ಥಾಪಕಿ ಸವಿತಾ, ಭಾರತಿ ಸೇರಿದಂತೆ ಕೇರಳ ಸಮಾಜಂನ ಪದಾಧಿಕಾರಿಗಳು ಹಾಜರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post