ಭದ್ರಾವತಿ: ಅನಿಷ್ಟ ಕುಡಿತದಿಂದ ಮತ್ತು ದುಶ್ಚಟಗಳಿಂದ ದೂರವಾಗಬೇಕು. ಅನಾಚಾರಗಳಿಂದ ಹೊರಬಂದು ಸದಾಚಾರ ರೂಢಿಸಿಕೊಂಡರೆ ಉತ್ತಮ ಸಮಾಜ ಕಟ್ಟಿದಂತಾಗುತ್ತದೆ. ಇಲ್ಲದಿದ್ದಲ್ಲಿ ಜೀವನ ಹಾಳಾಗುವುದರ ಜೊತೆಗೆ ಭಿಕ್ಷೆ ಬೇಡುವ ದಿನಗಳು ಬರಬಹುದೆಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿ ಮಾತು ಹೇಳಿದರು.
ತಾಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಎ.ಜಿ.ಶಿವಕುಮಾರ್ ಲಿಂಗೈಕ್ಯರಾದ ಪ್ರಯುಕ್ತ ಏರ್ಪಡಿಸಿದ್ದ ಶಿವಗಣಾರಾಧನೆ ಮತ್ತು ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ತಾಯಿ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು. ಕಿರುಕುಳು ಬಂದರೆ ತಲೆ ಮೇಲೆ ಕೈ ಹೊತ್ತು ಕೂರದೆ ಮನೋಬಲ, ಛಲದಿಂದ ದ್ವೆಷಿಸುವವರನ್ನು ಪ್ರೀತಿಯಿಂದ ಅಪ್ಪಿಕೊಂಡರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ. ಶಾಂತಿಯಿಂದ ಎಲ್ಲವನ್ನು ಸಾಧಿಸಬಹುದು. ಯುದ್ದವೆ ಅಂತಿಮವಲ್ಲ. ತಾಳ್ಮೆಇದ್ದರೆ ಎಲ್ಲವು ಸರಿಯಾದಂತೆ. ಆಂತರಿಕ ಮತ್ತು ಬಹಿರಂಗ ಶತೃಗಳಿಗೆ ಮಟ್ಟ ಹಾಕುವ ಹಾದಿಯನ್ನು ಪ್ರೀತಿಯಿಂದಲೆ ಸಾಧಿಸಿ ಸಮಾಜ ಕಟ್ಟಬೇಕು. ಆತ್ಮ ನಿವೇಧನೆಯಲ್ಲಿ ಅಂತರಂಗದ ತೊಳಲಾಟ ದೂರವಾಗಿ ಬದುಕು ಕಟ್ಟಿಕೊಳ್ಳಬಹುದು. ಪ್ರತಿಯೊಬ್ಬರಲ್ಲಿ ಆದರ್ಶಮಯವಾದ ಛಲ ಇರಬೇಕು. ಆದರೆ ಲಿಂಗೈಕ್ಯ ಶಿವಕುಮಾರ್ ಈ ಹಾದಿಯಲ್ಲಿ ಸಾಗದೇ ವೈರಿಗಳನ್ನು ತಮ್ಮತ್ತ ಸೆಳೆಯುವಲ್ಲಿ ವಿಫಲರಾಗಿದ್ದಾರೆ.
ವ್ಯವಸಾಯದಿಂದ ದೂರವಾಗುವವರೆ ಹೆಚ್ಚಾಗಿದ್ದಾರೆ. ಮೂಲವೃತ್ತಿಯಿಂದ ಸಂತೃಪ್ತಿ ಕಾಣಬಹುದು. ಶ್ರೀಮಂತರು ದೊಡ್ಡವರಾಗುವುದು ಕಷ್ಟ. ಆದರೆ ಆರ್ಥಿಕ ಬಡವರಲ್ಲಿ ಹೆಚ್ಚು ಶ್ರೀಮಂತರಿದ್ದಾರೆ. ಅಂತಹ ಬದುಕು ಬೇಕಾಗಿದೆ. ದಿಲ್ಲಿಯ ಜನ ಹಳ್ಳಿ ನೋಡುವಂತಾಗಬೇಕು. ಆದರೆ ಇಂದು ಹಳ್ಳಿಯ ಜನ ದಿಲ್ಲಿ ನೋಡುವ ಆಸೆ ಹೆಚ್ಚಾಗಿ ಮೂಲ ಕಸಬು ಮರೆತು ಕೈ ಚಲ್ಲುತ್ತಿರುವುದು ವಿಷಾಧನೀಯ. ಮೃತರ ಪುತ್ರ ರುದ್ರೇಶ್ ಮತ್ತು ಸೊಸೆ ಹಾಗು ಸೋದರರು ಇವರ ಕನಸುಗಳನ್ನು ನನಸಾಗಿಸುವಲ್ಲಿ ಯಶಸ್ಸು ಕಾಣಲೆಂದು ಆತ್ಮಕ್ಕೆ ಶಾಂತಿ ಕೋರಿದರು.
ವಿಧಾನ ಪರಿಷತ್ ಸದಸ್ಯ ಹಾಗು ಉದ್ಯಮಿ ರುದ್ರೇಗೌಡರು ಮಾತನಾಡಿ ಮನುಷ್ಯ ಜೀವನದಲ್ಲಿ ನೆಮ್ಮದಿ ಕಾಣಬೇಕು. ಬದುಕಿನಲ್ಲಿ ಹಣವನ್ನೆ ಹಿಂಬಾಲಿಸಬಾರದು. ಶಾಂತಿ ಮತ್ತು ಒಳ್ಳೆಯ ನಡೆತೆಗೆ ಸಮಾಜ ಸ್ಪಂದಿಸುತ್ತದೆ. ಕೃಷಿ ಕೈಗಾರಿಕೆ ಹಾಗು ಅಕ್ಕಿಗಿರಣಿ ಎಲ್ಲವನ್ನು ಮಾಡಿ ಸಾಧಿಸಿದ ಎ.ಜೆ.ಎಸ್ ಮತ್ತಷ್ಟು ಕನಸುಗಳನ್ನು ಹೊತ್ತಿದ್ದರು. ಬಿಜೆಪಿ ಪಕ್ಷದಿಂದ ಎಪಿಎಂಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ರಾಜಕೀಯದಿಂದ ಹಿಂದೆ ಸರಿದಿದ್ದರು. ವೈಯಕ್ತಿಕ ಕಾರಣಗಳಿಂದ ಕಿರುಕುಳ ಅನುಭವಿಸಿದರು. ನಾವು ಸಹ ಜಿಲ್ಲಾಡಳಿತದ ಗಮನ ಸೆಳೆದಿರುವುದಾಗಿ ತಿಳಿಸಿದ ಅವರು ಈ ಕುಟುಂಬ ಸದಸ್ಯರು ಯಾವುದೇ ಕ್ಷಣದಲ್ಲಿ ಕಿರುಕುಳದಿಂದ ಕುಗ್ಗಬಾರದು ಎಂದರು.
ವಕೀಲ ಉಮಾಪತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೊಸೆ ಶೃತಿ ಕಂಬನಿ ಸುರಿಸಿ ಮಾತನಾಡಿದರು. ವೇದಿಕೆಯಲ್ಲಿ ಸಮಾಜದ ಮುಖಂಡರಾದ ಶಿವರುದ್ರಪ್ಪ, ಎ.ಪಿ. ಬಸಪ್ಪ, ಶಾಂತರಾಜ್, ಜಿ,ಎಸ್. ಚಂದ್ರಶೇಖರ್, ತೀರ್ಥಯ್ಯ, ಹೆಬ್ಬಂಡಿ ಲೋಕಣ್ಣ ಉಪಸ್ಥಿತರಿದ್ದರು. ಅಕ್ಕಮಹಾದೇವಿ ಬಳಗದ ಅನ್ನಪೂರ್ಣ ಪ್ರಾರ್ಥಿಸಿದರು. ಪುತ್ರ ರುದ್ರಕುಮಾರ್ ಸ್ವಾಗತಿಸಿದರು. ಕಲಾವಿದ ಹಾರೋನಹಳ್ಳಿ ಸ್ವಾಮಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಲಾವಿದ ಶ್ರೀನಿವಾಸ್, ಶಿಕ್ಷಕ ಹಾರೋನಹಳ್ಳಿ ಸ್ವಾಮಿ, ಭಕ್ತಿಗೀತೆಗಳನ್ನು ಹಾಡಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post