ಭದ್ರಾವತಿ: ಉಕ್ಕಿನ ನಗರಿಯಲ್ಲಿ ಈಗ ನದಿ ತುಂಬಿ, ಸೇತುವೆ ಮುಳಿಗಿನ ಸಂಭ್ರಮ ಮನೆ ಮಾಡಿದ್ದು, ಅದೂ ನಾಲ್ಕು ವರ್ಷಗಳ ನಂತರ ನದಿ ತುಂಬಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ.
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಭದ್ರಾ ಜಲಾಶಯ ತುಂಬಿದ್ದು, ಹಲವು ದಿನಗಳ ಹಿಂದೆಯೇ ನದಿಗೆ ನೀರು ಹರಿಸಲಾಗಿತ್ತು. ಆನಂತರ ಕೊಂಚ ಬಿಡುವು ಪಡೆದಿದ್ದ ಮಳೆರಾಯ, ಈಗ ಮತ್ತೆ ಚುರುಕುಗೊಂಡಿದ್ದು, ಪರಿಣಾಮ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗಿದ್ದು, ಇಂದು 26678 ಕ್ಯೂಸೆಕ್‌ಸ್ ನೀರು ಒಳ ಹರಿವಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಇಂದು ಮತ್ತೆ 19657 ಕ್ಯೂಸೆಕ್‌ಸ್ ನೀರನ್ನು ಹೊರಬಿಡಲಾಗಿದ್ದು, ಭದ್ರಾವತಿಯಲ್ಲಿರುವ ಸಂಗಮೇಶ್ವರ ಮಂಟಪ ಬಹುತೇಕ ಮುಳುಗಡೆಯಾಗಿದೆ.
ಇನ್ನು, ನೀರಿನ ಪ್ರಮಾಣ ಅಧಿಕವಾಗಿರುವ ಕಾರಣ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆ ಮೇಲೆ ನೀರು ಹರಿಯತ್ತಿದ್ದು, ಇಂದು ಸಂಜೆ 4 ಗಂಟೆಯಿಂದಲೇ ಈ ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಭಂಧಿಸಲಾಗಿದೆ. ಸೇತುವೆಯ ಎರಡೂ ಕಡೆಗಳನ್ನು ಬ್ಯಾರಿಕೇಟ್‌ಸ್ ಹಾಕಿ, ಪೊಲೀಸರನ್ನು ನಿಯೋಜಿಸಲಾಗಿದೆ.
ನಾಲ್ಕು ವರ್ಷದ ನಂತರ ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಭದ್ರಾವತಿ ಜನತೆ ತಂಡೋಪತಂಡವಾಗಿ ನೋಡಲು ನೆರೆದಿದ್ದರು.
ಇಂದು ರಾತ್ರಿ ಇನ್ನಷ್ಟು ಹೊರ ಹರಿವಿನ ಸಾಧ್ಯತೆ
ಭದ್ರಾ ಜಲಾಶಯಕ್ಕೆ ಇಂದು ಒಳ ಹರಿವಿನ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ(ಆ.10) ವೇಳೆ ಮತ್ತಷ್ಟು ನೀರು ಹೊರ ಬಿಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಇನ್ನು, ಹೊಸ ಸೇತುವೆ ಮೇಲೆ ಸಂಚಾರ ನಿರ್ಭಂಧಿಸಿರುವ ಪರಿಣಾಮ ಹಳೆ ಸೇತುವೆ ಮೇಲೆ ಸಂಚಾರ ದಟ್ಟಣೆ ಅಧಿಕವಾಗಿದ್ದು, ಕೆಲವು ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು.
ಈ ಸೇತುವೆ ಇಂಜಿನೀಯರಿಂಗ್ ಅದ್ಬುತ
ಭದ್ರಾವತಿಯಲ್ಲಿರುವ ಹೊಸ ಸೇತುವೆ ಇಂಜನೀಯರಿಂಗ್ ಅದ್ಬುತಗಳಲ್ಲಿ ಒಂದು ಎಂದು ಭದ್ರಾವತಿ ಜನತೆ ಸಾಮಾನ್ಯವಾಗಿ ಆಡಿಕೊಳ್ಳುವ ಮಾತು. ರಸ್ತೆಯ ಮಟ್ಟಕ್ಕಿಂತಲೂ ಕೆಳಗೆ ಈ ಸೇತುವೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭದ್ರ ಜಲಾಶಯ ತುಂಬಿ, ಭಾರೀ ಪ್ರಮಾಣದಲ್ಲಿ ನೀರು ಹರಿಸಿದರೆ ಈ ಸೇತುವೆ ಮುಳುಗುವುದು ಸಾಮಾನ್ಯ.
ಸುಮಾರು 150 ವರ್ಷಗಳ ಹಿಂದೆ ನಿರ್ಮಾಣವಾದ ಹಳೆಯ ಸೇತುವೆ ಇಂದಿಗೂ ಗಟ್ಟಿ ಮುಟ್ಟಾಗಿ ನಿಂತಿದೆ. ಆದರೆ 2 ದಶಕದ ಹಿಂದೆ ನಿರ್ಮಾಣವಾದ ಈ ಸೇತುವೆ ಮಾತ್ರ ದುಸ್ಥಿತಿಗೆ ಬಂದು ವರ್ಷಗಳೇ ಕಳೆದಿವೆ. ಹೀಗಾಗಿ, ಈ ಸೇತುವೆಗೆ ಪರ್ಯಾಯ ಸೇತುವೆ ನಿರ್ಮಾಣವಾಗಬೇಕು ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ.
ಹಲವೆಡೆ ರಸ್ತೆಗಳಿಲ್ಲ, ಬರೀ ಗುಂಡಿಗಳು ಮಾತ್ರ
ಇನ್ನು, ಭದ್ರಾವತಿ ನಗರದ ಹೊಸ ಸೇತುವೆ ರಸ್ತೆ, ತಾಲೂಕು ಕಚೇರಿ ರಸ್ತೆ, ಹೊಸಮನೆ ಮುಖ್ಯರಸ್ತೆ ಸೇರಿದಂತೆ ಹಲವು ರಸ್ತೆಗಳು ಗುಂಡಿಗೊಟರುಗಳ ಗೂಡಾಗಿವೆ. ಈ ಬಾರಿ ಮಳೆ ಅಧಿಕವಾಗಿರುವ ಪರಿಣಾಮ ರಸ್ತೆ ಸಾಕಷ್ಟು ಹಾಳಾಗಿದ್ದು, ವಾಹನ ಸವಾರರು ಸಂಚರಿಸುವುದಿರಲಿ, ಪಾದಚಾರಿಗಳು ಹೋಗುವುದೂ ಸಹ ಒಂದು ಸಾಹಸವಾಗಿದೆ.
ಇನ್ನಾದರೂ ಅಧಿಕಾರಿ ವರ್ಗ ಎಚ್ಚೆತ್ತು ರಸ್ತೆಗಳ ದುರಸ್ಥಿಗೆ ಮುಂದಾಗಬೇಕಿದೆ.
Discussion about this post