ಭದ್ರಾವತಿ: ರಾಜ್ಯದಲ್ಲಿ ಬಿಜೆಪಿ ಮೋದಿ ಸರಕಾರ ರೈತರ-ಕಾರ್ಮಿಕರ ಹಾಗು ಅಮಾಯಕರ ಹಿತ ಕಾಯುವಲ್ಲಿ ವಿಫಲವಾಗಿದೆ. ಉಪ ಚುನಾವಣೆಯಲ್ಲಿ ಮತದಾರರ ತೀರ್ಪೇ ಮುಖ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಅವರು ಮಂಗಳವಾರ ಸಂಜೆ ಹಳೇನಗರ ಕನಕಮಂಟಪ ಮೈದಾನದಲ್ಲಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 3 ಸಂಸತ್ ಹಾಗೂ 2 ವಿಧಾನಸಭಾ ಒಟ್ಟು 5 ಉಪ ಚುನಾವಣೆಗಳು ಬಂದಿರುವ ಉದ್ದೇಶದಿಂದ ಈ ಉಪ ಚುನಾವಣೆಗಳಲ್ಲಿ ಮತದಾರರ ತೀರ್ಪೇ ಮುಖ್ಯವಾಗಿದೆ. ಭಾರತ ದೇಶವು ಯಾವುದೊಂದು ಜಾತಿ-ಧರ್ಮಕ್ಕೆ ಸೀಮಿತವಾಗಿಲ್ಲ. ಜಾತ್ಯಾತೀತ ರಾಷ್ಟ್ರದಲ್ಲಿ ಪ್ರತಿಯೊಬ್ಬರು ನೆಮ್ಮದಿ ಜೀವನ ನಡೆಸಬೇಕಾಗಿದೆ. ಬಿಜೆಪಿ ಸರಕಾರ ಜಾತಿ-ಜಾತಿ, ಧರ್ಮ-ಧರ್ಮಗಳ ಮಧ್ಯೆ ಒಡಕುಂಟು ಮಾಡುತ್ತಾ ನೆಮ್ಮದಿ ಹಾಳು ಮಾಡುತ್ತಿದೆ. ನಮ್ಮ 86 ನೆಯ ಇಳಿಯ ವಯಸ್ಸಿನಲ್ಲಿ ಈ ದುರಂತ ನೋಡಬೇಕಾಗಿದೆ ಎಂದರು.
ಆದರೆ ಇಂದಿನ ಉಪ ಚುನಾವಣೆಗೆ ಮಧು ಬಂಗಾರಪ್ಪ ರವರ ಪರ ಮತ ಯಾಚಿಸಲು ಮತ್ತು ದೇಶದಲ್ಲಿ ನಡೆಯುತ್ತಿರುವ ದುರಂತ ಹಾಗೂ ರಾಜ್ಯದಲ್ಲಿ ಅನಿರೀಕ್ಷಿತವಾಗಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಂತಾದ ಕಾಂಗ್ರೆಸ್ ವರಿಷ್ಠರ ಒಮ್ಮತದ ತೀರ್ಮಾನದ ಮೇರೆಗೆ 37 ಸ್ಥಾನಗಳನ್ನು ಪಡೆದ ಸಣ್ಣ ಜೆಡಿಎಸ್ ಪಕ್ಷದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಒಪ್ಪಿಗೆ ನೀಡುವಂತಾಯಿತು. ಹಿಂದಿನ ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಮುಂದುವರೆಸಲಾಗಿದೆ. ಜನರಿಗೆ ನೀಡಿದ ಭರವಸೆಗಳನ್ನು ಅನುಷ್ಠಾನಕ್ಕೆ ಮುಂದಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಖಾನೆಗಳನ್ನು ಸ್ಥಾಪಿಸಿ ನಿರುದ್ಯೋಗ ನಿರ್ಮೂಲನೆ ಮಾಡುವ ಉದ್ದೇಶ ಹೊತ್ತಿರುವುದಾಗಿ ತಿಳಿಸಿದೆ. ಮೋದಿ ಸರಕಾರಕ್ಕೆ 282 ಸ್ಥಾನಗಳು ಲಭಿಸಿದ್ದರು ಜನತೆಗೆ ನೀಡಿದ ಭರವಸೆಗಳನ್ನು ಹುಸಿಗೊಳಿಸಿ ನಾಲ್ಕೂವರೆ ವರ್ಷ ಸರಕಾರ ಏನು ಕೆಲಸ ಮಾಡಿಲ್ಲ. ಕಾಶ್ಮೀರಕ್ಕೆ ಯಾರು ಕಾಲಿಡದ ಪರಿಸ್ಥಿತಿಯಲ್ಲಿ ನಾವು ಪ್ರಧಾನಿಯಾಗಿ ತೆರಳಿ ಅಲ್ಲಿಯ ಜನತೆಗೆ ನ್ಯಾಯ ಒದಗಿಸಿದ್ದೇನೆ. ನಮ್ಮ 11 ತಿಂಗಳ ಪ್ರಧಾನಿ ಅವಧಿಯಲ್ಲಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಿದ್ದೇನೆ ಎಂದರು.
ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆಯನ್ನು ಸಂಪೂರ್ಣವಾಗಿ ಕೇಂದ್ರ ಸೈಲ್ ಆಡಳಿತಕ್ಕೆ ಸೇರ್ಪಡೆಗೊಳಿಸಿ 560 ಕೋಟಿ ರೂ. ಅನುದಾನ ನೀಡಲು ಆದೇಶಿಸಿದ್ದೆ. ದೇಶದ 9 ಕಾರ್ಖಾನೆಗಳನ್ನು ಮಾರಾಟ ಮಾಡಲು ಬಿಡದೆ ಸಾರ್ವಜನಿಕ ವಲಯದಲ್ಲಿ ಉಳಿಸಿದ್ದೇನೆ. ಉಭಯ ಪಕ್ಷಗಳ ಒಮ್ಮತದ ಅಭ್ಯರ್ಥಿ ಬಂಗಾರಪ್ಪ ರವರ ಪುತ್ರ ಮಧು ಬಂಗಾರಪ್ಪ ಅವರಿಗೆ ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿ ಸಂಸತ್‌ಗೆ ಕಳುಹಿಸಿ ರಾಷ್ಟ್ರದಲ್ಲಿ ಮಾದರಿಯಾಗಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಮಾತನಾಡಿ, ಬಿಎಸ್‌ವೈ ಮತ್ತು ಬಿವೈಆರ್ ಅವರ ಅಧಿಕಾರದ ಅವಧಿಯಲ್ಲಿ ವಿಐಎಸ್‌ಎಲ್-ಎಂಪಿಎಂ ಅವಳಿ ಕಾರ್ಖಾನೆಗಳನ್ನು ಅಧೋಗತಿಗೆ ತಂದವರೆ ಅವರಾಗಿದ್ದಾರೆ. ಅಂತಹವರು ಮತ್ತೆ ಚುನಾವಣೆಗೆ ಗಿಮಿಕ್ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಅವರಿಗೆ ಮತಗಳನ್ನು ನೀಡದೆ ಸೋಲಿಸಿ ಮಧು ಬಂಗಾರಪ್ಪ ರವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಚಲನಚಿತ್ರ ನಟ ಶಿವರಾಜಕುಮಾರ್ ಪತ್ನಿ ಗೀತಾ, ಮುಖಂಡರಾದ ಬಲ್ಕಿಷ್ ಬಾನು, ಜ್ಯೋತಿ ಎಸ್. ಕುಮಾರ್, ಮಣಿಶೇಖರ್, ಎಸ್. ಕುಮಾರ್, ಜೆ.ಎನ್. ಚಂದ್ರಹಾಸ, ಟಿ.ವಿ. ಗೋವಿಂದಸ್ವಾಮಿ, ರವಿಕುಮಾರ್, ಮೈಲಾರಪ್ಪ, ಫೀರ್ ಷರೀಫ್ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಕೋನರೆಡ್ಡಿ, ಎಚ್.ಸಿ. ದಾಸೇಗೌಡ. ಲೋಕೇಶ್ ರಾವ್, ಸುಕನ್ಯ, ಹಾಲಮ್ಮ, ಎಂ.ಎಸ್. ಸುಧಾಮಣಿ, ಯಶೋದಮ್ಮ, ಜಹೀರ್ ಜಾನ್, ಮೀನಾಕ್ಷಿ, ಬದ್ರಿನಾರಾಯಣ, ಎಚ್.ಬಿ. ರವಿಕುಮಾರ್, ಜೆ.ಪಿ. ಯೋಗೀಶ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post