ಭದ್ರಾವತಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆಗೆ ತೆರಳಲು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ನಗರದ ಜನ್ನಾಪುರ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ಹಾಗೂ ವಿವಿಧ ಅಂಗಡಿ ಮುಗ್ಗಟ್ಟುಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಮತನೀಡುವಂತೆ ಅರಿವು ಮೂಡಿಸಿದರು.
ಕಾಲ್ನಡಿಗೆಯಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ಮತದ ಮಹತ್ವವನ್ನು ಸಾರಿ ಹೇಳುತ್ತ, ಮನೆ ಮನೆಗೆ, ಅಂಗಡಿ ಮಳಿಗೆಗಳಿಗೆ, ಹೆಜ್ಜೆ ಹಾಕುತ್ತಾ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಸ್ಟ್ಯಾನ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಮನೆಗಳಿಗೆ ಚುನಾವಣಾ ಸ್ಟಿಕರ್ ಲೋಗೋ ಅಂಟಿಸುವಲ್ಲಿ ನಿರತರಾಗಿದ್ದರು.
ಜನ್ನಾಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೆಟ್ಟಿಗೆ ಅಂಗಡಿಯ ಬಳಿ ಚಹಾ ಸೇವನೆ ಮಾಡಿ ಮಾಲೀಕರಿಗೆ ಅರಿವು ಮೂಡಿಸಿದರು. ನಂತರ ಓರ್ವ ವೃದ್ದೆಯ ಮನೆ ಭೇಟಿ ನೀಡಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಮುಂದಾದಾಗ ಮತದಾನ ಮಾಡಲು ನಿರಾಕರಿಸಿದ ವೃದ್ದೆಯ ಕಾಲಿಗೆ ನಮಸ್ಕರಿಸಿ ಮತದಾನದ ಮಹತ್ವದ ಅರಿವು ಮೂಡಿಸಲಾಯಿತು. ನಂತರ ಇ-ಕಂಪ್ಯೂಟರ್ ಸಿಎಸ್‌ಸಿ ಕಛೇರಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿ ನಂತರ ಕಾಲ್ನಡಿಗೆಯಲ್ಲಿ ಮುನ್ನೆಡೆದರು. ಮುನ್ನ ಮಲ್ಲೇಶ್ವರ ಸಮುದಾಯ ಭವನದಲ್ಲಿ ಮತಯಾಚನೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಮಹಿಳಾ ಒಕ್ಕೂಟದ ಸದಸ್ಯರು ಮತ್ತು ಸ್ವಯಂ ಸೇವಕರಾಗಿ ಆಗಮಿಸಿದ್ದ ಸಾರ್ವಜನಿಕನ್ನುದ್ದೇಶಿಸಿ ಮಾತನಾಡಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post