ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಗೌರಿ ಮತ್ತು ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿದ್ದು, ಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ಹಬ್ಬಗಳನ್ನು ವೈಯಕ್ತಿಕವಾಗಿ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಎಲ್ಲರೂ ಸೇರಿ ಆಚರಣೆ ಮಾಡುತ್ತೇವೆ. ಸಾರ್ವಜನಿಕವಾಗಿ ಹಬ್ಬಗಳನ್ನು ಆಚರಣೆ ಮಾಡುವಾಗ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲವು ನಿರ್ಬಂಧನೆಗಳನ್ನು ಹಾಕುವುದು ಸೂಕ್ತವಾಗಿರುತ್ತದೆ ಮತ್ತು ಅನಿವಾರ್ಯವಾಗಿರುತ್ತದೆ ಎನ್ನುವುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು.
ಸಾರ್ವಜನಿಕರು ಹಬ್ಬ ಆಚರಿಸುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸ್ ಇಲಾಖೆಯ ಮೂಲ ಉದ್ದೇಶವಾಗಿರುತ್ತದೆ. ಆ ನಿಟ್ಟಿನಲ್ಲಿ ಮಾತ್ರ ಕೆಲವು ಸೂಚನೆಗಳನ್ನು ನೀಡಿ, ನಿಬಂಧನೆಗಳನ್ನು ವಿಧಿಸಲಾಗುತ್ತದೆಯೇ ಹೊರತು, ಸಾರ್ವಜನಿಕರಿಗೆ ತೊಂದರೆ ನೀಡುವ ಯಾವುದೇ ಉದ್ದೇಶವಿರುವುದಿಲ್ಲ ಎಂದರು.
ಎಲ್ಲರೂ ಸೇರಿ ಹಬ್ಬ ಆಚರಿಸುವಾಗ ಕೆಲವು ಜನ ಕಿಡಿಗೇಡಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಸಾಧಿಸಲು ಕಿಡಿಗೇಡಿತನ ತೋರಿ ಹಬ್ಬದ ಆಚರಣೆಗೆ ತೊಂದರೆ ನೀಡುವ ಸಾಧ್ಯತೆಗಳಿರುತ್ತವೆ. ಪೊಲೀಸ್ ಇಲಾಖೆಯಿಂದ ಈಗಾಗಲೇ ಆ ರೀತಿಯ ವ್ಯಕ್ತಿಗಳನ್ನು ಗಮನಿಸಿ, ಕಳೆದ 02 ತಿಂಗಳಿಂದ ಅಂತಹವರ ಮೇಲೆ ಕೈಗೊಳ್ಳಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸಿದೆ ಎಂದಿದ್ದಾರೆ.ಪ್ರಮುಖವಾಗಿ ಭದ್ರಾವತಿಯಲ್ಲಿ ಲಕ್ಷಾಂತರ ಜನ ಸೇರಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾಗ ಕೆಲವರು ಮಾಡುವ ಕಿಡಿಗೇಡಿತನದಿಂದ ಎಲ್ಲರ ಮೇಲೆ ಅದರ ದುಷ್ಪರಿಣಾಮಗಳು ಆಗುತ್ತವೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 86 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಂಡಿದ್ದು, ಇಲಾಖೆಯಿಂದ 1000 ಕ್ಕೂ ಹೆಚ್ಚು ಪೋರ್ಟಬಲ್ ಕ್ಯಾಮೆರಾಗಳನ್ನು ಖರೀಸಿದಿಸಿ, ಮೆರವಣಿಗೆಯ ವೇಳೆ ಸೂಕ್ಷ್ಮ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಲಾಗುತ್ತದೆ ಎಂದರು.
ಇನ್ನು, ಪ್ರತಿ ಗಣಪತಿ ಪೆಂಡಾಲ್ ರವರು, ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಿರಿ. ಇದರಿಂದ ಅಪರಾಧಿಕ ಕೃತ್ಯಗಳು ಆಗದಂತೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡಂತೆ ಆಗುತ್ತದೆ. ಸುರಕ್ಷತೆಯ ದೃಷ್ಠಿಯಿಂದ ಇದು ಮುಖ್ಯವಾದ ಕ್ರಮವಾಗಿರುತ್ತದೆ. ಗಣಪತಿ ಪೆಂಡಾಲ್ ಗಳ ಬಳಿ ಸಾವಿರಾರು ಜನರು ಬಂದು ಹೋಗುವುದರಿಂದ ಅಲ್ಲಿ ಜರುಗುವು ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹಾ ತಡೆ ಗಟ್ಟಲು ಸಾಧ್ಯ ಎಂದು ಸಲಹೆ ನೀಡಿದರು.
ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸೋಣ. ಹಬ್ಬವನ್ನು ಆಚರಿಸುವಾಗ ಇನ್ನೊಬ್ಬರ ಭಾವನೆಗಳಿಗೆ ತೊಂದರೆಯಾಗದಂತೆ ಆಚರಿಸಬೇಕು. ಪ್ರತೀ ಹಬ್ಬವು ಶ್ರೇಷ್ಠ ಎಂಬ ಭಾವನೆಯಿಂದ ಹಬ್ಬ ಆಚರಿಸೋಣ ಎಂದು ಕರೆ ನೀಡಿದರು.
ಕಳೆದ 2 ವರ್ಷದಿಂದಲೂ ಸಹಾ ಈದ್ ಮಿಲಾದ್ ಹಾಗೂ ಗಣೇಶ ಹಬ್ಬಗಳು ಒಂದೇ ಬಾರಿ ಬರುತ್ತಿದ್ದು ಇದು ಸಾಮರಸ್ಯವನ್ನು ತೋರಲು ಒಂದು ಸುವರ್ಣಾವಕಾಶವಿರುತ್ತದೆ. ನಾವೆಲ್ಲರೂ ಸೇರಿ ಹಬ್ಬವನ್ನು ವಿಜ್ಞವಿಲ್ಲದ ರೀತಿ ವಿಜೃಂಭಣೆಯಿಂದ ಆಚರಿಸೋಣ ಎಂದು ಸಲಹೆ ನೀಡಿದರು.ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಎಚ್ಚರಿಕೆ
ಹಬ್ಬಗಳ ಆಚರಣೆಯ ವೇಳೆ, ಕಿಡಿಗೇಡಿಗಳು ಶಾಂತಿಕದಡಲು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಚಾರವನ್ನು ಹರಿಬಿಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸತ್ಯಾಸತ್ಯತೆಯನ್ನು ಅರಿಯದೇ ನೀವು ಯಾವುದೇ ವಿಚಾರವನ್ನು ಶೇರ್ ಮಾಡಬೇಡಿ. ಯಾವುದೇ ಮೆಸೇಜ್, ಪೋಸ್ಟ್ ಹಾಗೂ ಇಮೇಜ್ ಗಳಲ್ಲಿ ಪ್ರಚೋದನಾಕಾರಿಯಾದ ವಿಚಾರ ಇರುವುದು ಕಂಡು ಬಂದಲ್ಲಿ, ಈ ರೀತಿ ಕಿಡಿಗೇಡಿತನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಫ್ಲೆಕ್ಸ್ ಹಾಗೂ ಬ್ಯಾನರ್ಸ್ ಮತ್ತು ಪೋಸ್ಟರ್’ಗಳನ್ನು ಅಳವಡಿಸುವ ಮುಂಚಿತವಾಗಿ ವ್ಯಾಪ್ತಿಯ ಪೊಲೀಸ್ ಠಾಣೆಯ ಅನುಮತಿ ಪಡೆದು ಪ್ರಿಂಟ್ ಮಾಡಿ ಅಳವಡಿಸಲು ಪ್ರಿಂಟರ್ಸ್ ಅವರಿಗೆ ಸೂಚನೆ ನೀಡಿದ್ದು, ಎಲ್ಲರೂ ಸೇರಿ ಸಹಕರಿಸಬೇಕು ಎಂದರು.
ಈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಇಲಾಖೆಗಳು ಹಾಗೂ ಜನ ಪ್ರತಿನಿಧಿಗಳು ಸೇರಿ ಸಹಕಾರ ನೀಡುತ್ತಿದ್ದು, ಹಬ್ಬಗಳನ್ನು ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಆಚರಿಸೋಣ ಎಂದರು.
ಭದ್ರಾವತಿ ಡಿವೈಎಸ್’ಪಿ ನಾಗರಾಜ್, ಅಂಜುಮಾನ್ ಕಮಿಟಿ ಅಧ್ಯಕ್ಷ ಅಯೂಬ್ ಖಾನ್, ತಹಶೀಲ್ದಾರ್ ಪರಸಪ್ಪ ಕುರುಬರ್, ಪೌರಾಯುಕ್ತ ಕೆ.ಎನ್. ಹೇಮಂತ್, ಮೆಸ್ಕಾಂ ಎಇಕ ವಿನಾಯಕ್, ಫೈರ್ ಆಫೀಸರ್ ಹುಲಿಗಪ್ಪ, ಭದ್ರಾವತಿ ನಗರಸಭೆ ಉಪಾಧ್ಯಕ್ಷ ಮಣಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post