ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎಷ್ಟು ಕೆಲಸದ ಒತ್ತಡ ಎಂದರೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದೇ ಎಷ್ಟೋ ಬಾರಿ ಕಷ್ಟಸಾಧ್ಯವಾಗಿರುತ್ತದೆ. ಆದರೆ, ಇದಕ್ಕೆ ತದ್ವಿರುದ್ದವಾಗಿ ಇಲ್ಲೊಬ್ಬ ಪೊಲೀಸ್ ಮುಖ್ಯಪೇದೆ ಕರ್ತವ್ಯದ ಒತ್ತಡವನ್ನೂ ಸಹ ನಿಭಾಯಿಸಿಕೊಂಡು, ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಅವರೇ, ಭದ್ರಾವತಿ ಸಂಚಾರಿ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಯುತ ಹಾಲೇಶಪ್ಪ.
ಕಳೆದ ಸುಮಾರು ಒಂದು ದಶಕದಿಂದಲೂ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲೇಶಪ್ಪ, ಕರ್ತವ್ಯ ನಿರ್ವಹಿಸುವುದರಲ್ಲಿ ಎಷ್ಟು ನಿಷ್ಠರೋ ಅಷ್ಟೇ ಪರಿಸರ ಹಾಗೂ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಎಲೆಮರೆಯ ಸಾಧಕ.
ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಹಾಲೇಶಪ್ಪ ಸದ್ಯ ಭದ್ರಾವತಿ ಸಂಚಾರಿ ಠಾಣೆಯಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪರಿಸರ ಉಳಿವಿನ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು ಸುಮಾರು 3 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು, ಪೋಷಣೆ ಮಾಡುತ್ತಾ ಹಸಿರು ಸೇನಾನಿ ಎನಿಸಿಕೊಂಡಿದ್ದಾರೆ.
ಇದರೊಂದಿಗೆ ರಕ್ತದಾನದ ಮಹತ್ವವನ್ನು ನಿರಂತರವಾಗಿ ಸಾರುತ್ತಿರುವ ಹಾಲೇಶಪ್ಪ ಸ್ವತಃ 40ಕ್ಕೂ ಅಧಿಕ ಬಾರಿ ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಿದ್ದಾರೆ.
ತಮ್ಮ ಸ್ನೇಹಿತರು, ಆತ್ಮೀಯರು, ಇಲಾಖೆಯವರು ಹೀಗೇ ಯಾರೇ ಪರಿಚಯಸ್ತರಿದ್ದರೂ ಅವರ ವಿಶೇಷ ದಿನಗಳಲ್ಲಿ ಅವರಿಂದ ರಕ್ತದಾನ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ.

ಹಾಲೇಶಪ್ಪ ಅವರು ಈವರೆಗೂ ಸಲ್ಲಿಸಿರು ರಕ್ತದಾನ, ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿ ಉಳಿಸುವ ಕಾನೂನು ಹೋರಾಟಗಳಲ್ಲಿ ಸಲ್ಲಿಸಿರುವ ನಿರಂತರ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಪಂಡಿತ್ ಪುಟ್ಟರಾಜ ಗವಾಯಿ ಸಂಗೀತ ಅಕಾಡೆಮಿ ವತಿಯಿಂದ ನೀಡುವ ಪ್ರತಿಷ್ಠಿತ ಪಂಡಿತ್ ಪುಟ್ಟರಾಜ ಗವಾಯಿ ಸಮ್ಮಾನ್ 2024ರ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸೆ.22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಹಾಲೇಶಪ್ಪ, ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ 06 ಜನರಿಗೆ ಪ್ರಶಸ್ತಿ ನೀಡಲಿದ್ದು ಅದರಲ್ಲಿ ನಾನು ಕೂಡ ಒಬ್ಬ ಎಂಬುದು ಖುಷಿಯ ವಿಚಾರ. ಸಾಧಕರ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳು ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ ಎಂದರು.

ಹಾಲೇಶಪ್ಪ ಅವರ ಸಾಮಾಜಿಕ ಸೇವೆಗಳು ಹೀಗೆ ಮುಂದುವರೆಯಲಿ, ಇನ್ನೂ ಹೆಚ್ಚಿನ ಪ್ರಶಸ್ತಿ, ಸಮ್ಮಾನಗಳು ಅವರನ್ನು ಅರಸಿಬರಲಿ ಎಂದು ಕಲ್ಪ ಮೀಡಿಯಾ ಹೌಸ್ ಹಾರೈಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post