ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ದೇಶದಲ್ಲಿರುವ ಹಿಂದೂಗಳ ಧಾರ್ಮಿಕ ಶ್ರದ್ದಾ ಕೇಂದ್ರಗಳು,ಮಠ- ಮಂದಿರ, ದೇವಸ್ಥಾನಗಳ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳಿಂದ ಅಪಮಾನ ಮಾಡುವುದು, ಅವುಗಳ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವುದನ್ನು ಸಹಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಹಾ. ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ಬಳಗದಿಂದ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ಇಂದು ಹಮ್ಮಿ ಕೊಳ್ಳಲಾಗಿದ್ದ ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಕ್ಷಾಂತರ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಧರ್ಮದರ್ಶಿಗಳಾದ ಡಿ. ವಿರೇಂದ್ರ ಹೆಗ್ಗಡೆಯವರ ಹೆಸರಿಗೆ ಮಸಿ ಬಳಿಯುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ನ್ಯಾಯವಾದಿ ಕೆ.ಎನ್. ಶ್ರೀ ಹರ್ಷ ಮಾತನಾಡಿ, ದೇಶದಲ್ಲಿನ ಅಸಂಖ್ಯಾತ ಭಕ್ತರು ಭೇಟಿ ನೀಡುವ ಸ್ಥಳಗಳನ್ನು ಆಯ್ಕೆ ಮಾಡಿ ಅದರ ವಿರುದ್ಧ ವ್ಯವಸ್ಥಿತ ಸುಳ್ಳು ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಸಮಾಜ ಸರಿಯಾದ ರೀತಿಯಲ್ಲಿ ಉತ್ತರಿಸಿ ಶಾಸ್ತಿ ಮಾಡಬೇಕು. ಇಲ್ಲದಿದ್ದರೆ ಅವರುಗಳು ಜನರ ನಂಬಿಕೆ ಬಗ್ಗೆ ಅನುಮಾನ ಉಂಟು ಮಾಡುತ್ತಾರೆ ಎಂದು ಎಚ್ಚರಿಸಿದರು.
ಎ.ಟಿ. ರವಿ ಮಾತನಾಡಿ, ಹಿಂದೂ ಧರ್ಮದ ನಂಬಿಕೆಗಳಿಗೆ ಧಕ್ಕೆಯನ್ನು ಉಂಟು ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದರು.
ಬಿಜೆಪಿ ನಗರ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಧಾರ್ಮಿಕ ಕೇಂದ್ರಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾಡುತ್ತಿರುವ ವಿನಾಕಾರಣ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದು, ಇವರ ಕಾರ್ಯ ಯಶಸ್ವಿಯಾಗುವುದಿಲ್ಲ ಎಂದರು.
ಬಿ.ಎಸ್. ಮಹೇಶ್ ಕುಮಾರ್, ಆರ್. ಕರುಣಾಮೂರ್ತಿ, ಡಿ.ಟಿ. ಶ್ರೀಧರ್, ಸ್ವಪ್ನಕುಮಾರ್ ತೇಲ್ಕರ್ ಸೇರಿದಂತೆ ಇನ್ನಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಮೇಶ್, ಯೋಗೀಶ್ ಗುಜ್ಜಾರ್, ಕೆ.ಎಚ್. ತೀರ್ಥಯ್ಯ, ಪಿ.ಸಿ. ಜೈನ್, ಸಂಪತ್‌ರಾಜ್ ಬಾಂಟಿಯಾ, ದಿಲೀಪ್ ಕುಮಾರ್ ಜೈನ್, ಯೋಗೀಶ್, ಲತಾ, ಆಶಾ, ಕವಿತಾ, ಅನ್ನಪೂರ್ಣ, ಸುಲೋಚನಾ, ಆರತಿ, ಜಯಲಕ್ಷ್ಮಿ, ಪ್ರೇಮ ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post