ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪದೋನ್ನತಿ ನೀಡಿ ಹಾಸನ ನಗಾರಾಭಿವೃದ್ಧಿ ಯೋಜನೆಯ ಯುವಜನ ನಿರ್ದೇಶರಾಗಿ ವರ್ಗಾವಣೆಗೊಂಡಿದ್ದ ನಗರಸಭೆಯ ಆಯುಕ್ತ ಮನೋಹರ್ ಅವರ ವರ್ಗಾವಣೆ ಆದೇಶ ಇಂದು ರದ್ದುಗೊಂಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಬಿಜೆಪಿ ಮುಖಂಡ ಮತ್ತು ರಾಜ್ಯ ಒಳಚರಂಡಿ ಮತ್ತು ನೀರು ಸರಬರಾಜು ನಿಗಮದ ನಿರ್ದೇಶಕ ಮಂಗೋಟೆ ರುದ್ರೇಶ್, ಮನೋಹರ್ ಅವರ ವರ್ಗಾವಣೆ ಬಗ್ಗೆ ನಾಗರೀಕರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವರ್ಗಾವಣೆ ರದ್ಧುಪಡಿಸಿ ಮುಂದಿನ ಒಂದು ವರ್ಷದವರೆಗೆ ಅವರನ್ನು ಭದ್ರಾವತಿಯಲ್ಲೇ ಆಯುಕ್ತರಾಗಿ ಮುಂದುವರೆಯುವಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆಯುಕ್ತ ಮನೋಹರ್ ಅವರು ಎರಡು ವರ್ಷ ಇಲ್ಲಿ ಸೇವೆ ಸಲ್ಲಿಸಿದ್ದು ಸಹಜವಾಗಿ ಬಡ್ತಿ ಮೇರೆಗೆ ಅವರ ವರ್ಗಾವಣೆ ಆಗಿತ್ತು. ಆದರೆ ನಾಗರೀಕರು ಆಯುಕ್ತರ ಸೇವೆಯನ್ನು ಇನ್ನೂ ಹೆಚ್ಚಿನ ಅವಧಿಗೆ ಬಯಸಿದ್ದರಿಂದ ನಾನು ಈ ವಿಷಯವನ್ನು ಜಿಲ್ಲಾ ಸಂಸದ ಬಿ.ವೈ. ರಾಘವೇಂದ್ರ ಅವರ ಗಮನಕ್ಕೆ ತಂದ ಮೇರೆಗೆ, ಸಂಸದರು ಆಯುಕ್ತರ ವರ್ಗಾವಣೆ ರದ್ಧುಪಡಿಸುವಂತೆ ಹಾಗೂ ಅವರನ್ನು ಭದ್ರಾವತಿಯಲ್ಲಿಯೇ ಒಂದು ವರ್ಷ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಪರಿಣಾಮವಾಗಿ ಆಯುಕ್ತರ ವರ್ಗಾವಣೆ ರದ್ಧಾಗಿದೆ.
ಅಧಿಕೃತವಾಗಿ ಶನಿವಾರ ವರ್ಗಾವಣೆ ರದ್ಧು ಆದೇಶ ಆಯುಕ್ತರ ಕೈಸೇರಲಿದೆ. ಎಲ್ಲರ ಅಪೇಕ್ಷೆಯಂತೆ ಆಯುಕ್ತರ ವರ್ಗಾವಣೆ ರದ್ಧು ಪಡಿಸುವಲ್ಲಿ ಸ್ಪಂದಿಸಿದ ಸಂಸದ ಬಿ.ವೈ. ರಾಘವೇಂದ್ರವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು, ಮನೋಹರ್ ಅವರಿಗೆ ವರ್ಗಾವಣೆಯಾಗಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಹರಿದಾಡಿದ ನಂತರ ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರು ಆಯುಕ್ತರನ್ನು ಭೇಟಿಯಾಗಿ ಭದ್ರಾವತಿ ಬಿಟ್ಟು ತೆರಳದಂತೆ ಮನವಿ ಮಾಡಿದ್ದರು.
ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಮನೋಹರ್ ಅವರನ್ನು ಕನಿಷ್ಠ ಇನ್ನೊಂದು ವರ್ಷವಾದರೂ ಸಹ ಇಲ್ಲಿಯೇ ಸೇವೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post