ಭದ್ರಾವತಿ: ನಗರದ ಪ್ರತಿಷ್ಟಿತ ವಿಐಎಸ್‍ಎಲ್ ಕಾರ್ಖಾನೆಯ ಖಾಸಗೀಕರಣ ಅಥವಾ ಮಾರಾಟ ಮಾಡಲು ಸಂಪೂರ್ಣ ವಿರೋಧ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಅವರು ಶನಿವಾರ ಗೃಹ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಕೇಂದ್ರ ಮಂತ್ರಿ ನರೇಂದರ ಸಿಂಗ್ ಥೋಮರ್ ರಾಜ್ಯ ಸರಕಾರ ಅದಿರು ಗಣಿ ನೀಡಿದ್ದಲ್ಲಿ ಕೇಂದ್ರದಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆವಿಗೂ ಅನುದಾನ ನೀಡಿರುವುದಿಲ್ಲ. ಸಚಿವ ಅನಂತಕುಮಾರ್ ಹೆಗಡೆ ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು ಕೂಡ ಕೇವಲ ಭರವಸೆ ಮಾತುಗಳನ್ನಾಡಿ ಹೋಗಿರುತ್ತಾರೆ. ಆದರೆ ಎಲ್ಲವು ಸುಳ್ಳು ಭರವಸೆಗಳಾಗಿ ಉಳಿದಿವೆ. ಜಿಲ್ಲೆಯ ಸಂಸದ ಬಿ.ವೈ. ರಾಘವೇಂದ್ರ ಮತಗಳಿಕೆಗಾಗಿ ಕಾರ್ಮಿಕರ ಮನವೊಲಿಸಿ ಮತಗಳನ್ನು ಪಡೆದು ಗೆದ್ದ ನಂತರ ಕಾರ್ಖಾನೆಯ ಕುರಿತು ಕಿಂಚತ್ತು ಯೋಚಿಸದೆ ಮಾತು ಮರೆತಂತೆ ಕಾಣುತ್ತಿದೆ. ಕಾರ್ಮಿಕರ ಮತಕ್ಕಾಗಿ ಕೇವಲ ಸುಳ್ಳು ಭರವಸೆ ನೀಡಿ ಜನತೆಗೆ ಮೋಸ ಮಾಡಿದ್ದಾರೆ ಎಂದ ಶಾಸಕರು ಕಾರ್ಖಾನೆಯ ಖಾಸಗೀಕರಣಕ್ಕೆ ತಮ್ಮ ವಿರೋಧ ಎಂದರು.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅವಧಿಯಲ್ಲಿ ತಮ್ಮ ಹೋರಾಟದ ಫಲವಾಗಿ 35 ಸಾವಿರ ಕೋಟಿ ರೂ. ಬೆಲೆ ಬಾಳುವ ಸುಮಾರು 150 ಎಕರೆ ಅದಿರುಗಣಿಯನ್ನು ಮಂಜೂರು ಮಾಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡದಿರುವುದು ದುರಂತ. ಜನಪ್ರತಿನಿಧಿಗಳು ನೀಡಿದ ಮಾತಿನ ಭರವಸೆಯಂತೆ ಕಾರ್ಖಾನೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುವುದಾಗಿ ಹೇಳಿದರು.
ನಗರ ಕೊಳಚೆ ಪ್ರದೇಶಗಳ ನಾಗರೀಕರಿಗೆ ನಗರಸಭೆವತಿಯಿಂದ ಖಾತೆ ನೀಡಿ ಮನೆ ಮಾಲಿಕತ್ವ ನೀಡಲಾಗಿದೆ. ಜೂ: 16 ರಂದು ಭಾನುವಾರ ಸಂಜೆ ಸುರಗೀತೋಪು ಪ್ರದೇಶದ ನಾಗರೀಕರಿಗೆ ಹಕ್ಕುಪತ್ರ ನೀಡಲು ಮುಂದಾಗಿರುವುದಾಗಿ ತಿಳಿಸಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದಿಂದ ವಿವೇಚನ ಕೋಟದಡಿ ಕ್ಷೇತ್ರಕ್ಕೆ 150 ಕೋಟಿ ರೂ ಬಿಡುಗಡೆ ಮಾಡಲಾಗಿ ನಾನಾ ಸಮಾಜಗಳ ದೇವಾಲಯ ಹಾಗು ಸಂಘ ಸಂಸ್ಥೆಗಳಿಗೆ ನೀಡಲಾಗುವುದು ಎಂದು ತಿಳಿಸಿ ನಗರದ ಕಾಲಭೈರವೇಶ್ವರ ಟ್ರಸ್ಟ್ ಸಮಿತಿಗೆ ಚೆಕ್ ವಿತರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ ಮುಖಂಡ ಬಿ.ಟಿ. ನಾಗರಾಜ್ ಮತ್ತಿತರರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post