ಭದ್ರಾವತಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಮತದಾರರನ್ನು ಮತಗಟ್ಟೆಯತ್ತ ತೆರಳಲು ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮುಂದಾಗಿ ತಾಲೂಕು ಕೇಂದ್ರಗಳಿಗೂ ತೆರಳಿ ಮತದಾನದ ಅರಿವು ಮೂಡಿಸಲು ಮುಂದಾಗಿದ್ದಾರೆ.
ನಗರದ ಜನ್ನಾಪುರ ವ್ಯಾಪ್ತಿಯಲ್ಲಿ ಮನೆ ಮನೆಗಳಿಗೆ ಹಾಗೂ ವಿವಿಧ ಅಂಗಡಿ ಮುಗ್ಗಟ್ಟುಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಮತ ನೀಡುವಂತೆ ಅರಿವು ಮೂಡಿಸಿದ್ದಾರೆ. ಯಾರಿಗಾದರೂ ಮತ ಹಾಕಿ, ಆದರೆ ಕಡ್ಡಾಯವಾಗಿ ಮತಹಾಕಿ ಎಂದು ಹೇಳುವ ಮೂಲಕ ಅಮೂಲ್ಯ ಮತದ ಮಹತ್ವವನ್ನು ಮತದಾರರಿಗೆ ಸಾರಿ ಹೇಳುತ್ತ, ಮನೆ ಮನೆಗೆ, ಅಂಗಡಿ ಮಳಿಗೆಗಳಿಗೆ, ಹೆಜ್ಜೆ ಹಾಕಿ ಪ್ರತಿ ಬೀದಿ, ಕೇರಿಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಸ್ಟ್ಯಾನ್ಲಿ ಕೂಡ ಅವರೊಂದಿಗೆ ಹೆಜ್ಜೆ ಹಾಕಿ, ಮತದಾನದ ಜಾಗೃತಿ ಮೂಡಿಸುತ್ತ, ಮನೆಗಳಿಗೆ ಚುನಾವಣಾ ಸ್ಟಿಕರ್ ಲೋಗೋ ಅಂಟಿಸುವಲ್ಲಿ ನಿರತರಾಗಿದ್ದರು.
ಮತಯಾಚನೆಗೂ ಮುನ್ನ ಮಲ್ಲೇಶ್ವರ ಸಮುದಾಯ ಭವನದ ಮುಂಭಾಗ, ಮತಯಾಚನೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗು ಮಹಿಳಾ ಒಕ್ಕೂಟದ ಸದಸ್ಯರು ಮತ್ತು ಸ್ವಯಂ ಸೇವಕರಾಗಿ ಆಗಮಿಸಿದ್ದ ಸಾರ್ವಜನಿಕನ್ನುದ್ದೇಶಿಸಿ ಮಾತನಾಡಿ, ಹಲವು ವಿಶೇಷತೆಗಳಲ್ಲಿ ಮುಂದಾಗಿರುವ ಶಿವಮೊಗ್ಗ ಜಿಲ್ಲೆ, ಮತದಾನದಲ್ಲಿ ಹಿಂದುಳಿದಿದ್ದು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಅತೀ ಹೆಚ್ಚಿನ ಮತದಾನ ಮಾಡುವ ಮೂಲಕ ಜಿಲ್ಲೆಯನ್ನು ನಂ.1 ಸ್ಥಾನಕ್ಕೆ ಏರಿಸಬೇಕಿದೆ.
ಹೆಚ್ಚು ಮತದಾನವಾದರೆ ಇತರೆ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಜನರು ನಮ್ಮನ್ನು ನೋಡುವ ದೃಷ್ಟಿ ಕೋನಗಳು ಬದಲಾಗುತ್ತವೆ. ಅದರಿಂದ ಜಿಲ್ಲೆಯ ಗೌರವ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಮತದಾನವಾಗುವಂತಹ ಕಾರ್ಯವಾಗಬೇಕು. ಅಲ್ಲದೆ ನಾವು ಮತದಾರರನ್ನು ಮನವೊಲಿಸಬೇಕು. ಯಾವುದೇ ಆಮಿಷಗಳಿಗೆ ಮತದಾರ ಒಳಗಾಗದಂತೆ ಮತದಾನ ಮಾಡುವ ವ್ಯವಸ್ಥೆ ನಮ್ಮಿಂದಾಗಬೇಕು. ಪ್ರತಿ ಮನೆಗೆ ತೆರಳುವ ನಾವು ಪ್ರಶ್ನೆ ಮಾಡುವ ಜನರಿಗೆ ಸಮಾದಾನದಿಂದ ಉತ್ತರಿಸುವ ಮೂಲಕ ಮತದಾರರಿಗೆ ತಿಳುವಳಿಕೆ ನೀಡಬೇಕು ಎಂದರು.
ಉಪವಿಭಾಗಾಧಿಕಾರಿ ಪ್ರಕಾಶ್, ಪ್ರತಿಜ್ಞಾ ವಿಧಿ ಬೋಧಿಸಿದರು. ತಹಶೀಲ್ದಾರ್ ಸೋಮಶೇಖರ್, ಪೌರಾಯುಕ್ತ ಮನೋಹರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ, ಕಂದಾಯಾಧಿಕಾರಿ ಪ್ರಶಾಂತ್, ವಾರ್ತಾಇಲಾಖೆ ಜಗದೀಶ್, ನಂದಕುಮಾರ್, ವೇಣುಗೋಪಾಲ್ ಸೇರಿದಂತೆ ಹಲವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post