ಭದ್ರಾವತಿ: 2020 ಕ್ಕೆ 18 ವರ್ಷ ತುಂಬಿದ ಕ್ಷೇತ್ರದ ಎಲ್ಲಾ ಯುವ ಮತದಾರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಗುರಿಯನ್ನು ತಾಲೂಕು ಆಡಳಿತ ಹೊಂದಿರುವುದಾಗಿ ತಹಶೀಲ್ದಾರ್ ಸೋಮಶೇಖರ್ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ಸೆ,1 ರಿಂದ ಸೆ.30 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜರುಗಲಿದ್ದು ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿರುವ ಒಟ್ಟು 253 ಬಿಎಲ್‌ಓ ಗಳು ಪ್ರತಿ ಮನೆ ಬಾಗಿಲಿಗೆ ತೆರಳಿ ಬಿಟ್ಟು ಹೋಗಿರುವ ಮತದಾರರ ಹೆಸರು, ಸೇರ್ಪಡೆ, ವರ್ಗಾವಣೆ, ಇಲ್ಲವೆ ಆಗಿರುವ ಕೆಲ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಲಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ನವೆಂಬರ್ ತಿಂಗಳಿನಲ್ಲಿ ಬರುವ ದಿನಾಂಕ 2, 3, 9, 10 ಶನಿವಾರ ಹಾಗೂ ಭಾನುವಾರದಂದು ವಿಶೇಷ ದಿನಗಳನ್ನಾಗಿ ಪರಿಗಣಿಸಿ ಎಲ್ಲಾ ಬಿಎಲ್‌ಓ ಗಳು ಆಯಾ ಗ್ರಾಮ, ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮತದಾರರ ಕೇಂದ್ರಗಳಲ್ಲಿ ಉಳಿದು ಮತದಾರರ ಪಟ್ಟಿಯಲ್ಲಿರುವ ಗೊಂದಲಗಳನ್ನು ಸರಿಪಡಿಸಲಿದ್ದಾರೆ. ಗುರುತಿನ ಚೀಟಿಯಲ್ಲಿರುವ ತಪ್ಪುಗಳು ಹಾಗು ಆಕ್ಷೇಪಣೆಗಳೇನಾದರೂ ಇದ್ದರೆ ಅರ್ಜಿದಾರರು ಆನ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 95 ಆನ್’ಲೈನ್ ಸೆಂಟರ್‌ಗಳನ್ನು ತೆರೆಯಲಾಗಿದೆ ಎಂದರು.
ಪ್ರಸ್ತುತ 2,7362 ಲಕ್ಷ ಮತದಾರರಿದ್ದು 101483 ಪುರುಷ 105879 ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ 4403 ಯುವ ಮತದಾರರರನ್ನು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಶೇಖಡವಾರು ಮತದಾನದಲ್ಲಿ ಉತ್ತಮ ಫಲಿತಾಂಶ ಪಡೆಯಲು ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯವಾಗಿದ್ದು ಈ ಬಾರಿ ನಡೆಯುವ ಮುಂದಿನ ಚುನಾವಣೆಗಳಲ್ಲಿ ಶೇಖಡವಾರು ಮತದಾನದ ಫಲಿತಾಂಶದಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಉಪತಹಶೀಲ್ದಾರ್ ಮಂಜಾನಾಯ್ಕ್, ನಗರಸಭೆ ಆಯುಕ್ತ ಮನೋಹರ್, ಇದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post