ಭದ್ರಾವತಿ: ಹಳೇನಗರದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಮುನ್ನಾ ದಿನವಾದ ಶುಕ್ರವಾರ ಶ್ರೀನರಸಿಂಹ ಸ್ವಾಮಿ ಜಯಂತಿ ಆಚರಿಸಲಾಯಿತು.
ಯಾಗ ಶಾಲೆಯಲ್ಲಿ ಬೆಳಿಗ್ಗೆ ಹೋಮ ನಡೆಸಲಾಯಿತು. ದೇವಾಲಯದ ಧ್ವಜ ಸ್ಥಂಭದ ಬಳಿ ಗರುಡ ಪೂಜೆ ನೆರವೇರಿತು. ಸುದರ್ಶನ ಚಕ್ರವನ್ನು ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಸುತ್ತ ಮತ್ತು ರಥ ಬೀದಿಯಲ್ಲಿ ಬಲಿಉತ್ಸವ ನಡೆಸಿ ಅಷ್ಠ ದಿಕ್ಕುಗಳಲ್ಲಿ ಚರುವನ್ನು ಬಲಿ ಹರಣ ಮಾಡಲಾಯಿತು. ನಂತರ ಗರುಡ ವಾಹನರೂಢಾನಾಗಿರುವ ಭೂದೇವಿ ಶ್ರೀದೇವಿ ಸಹಿತನಾದ ಶ್ರೀನಿವಾಸ ದೇವರ ಅಡ್ಡೆ ಉತ್ಸವವನ್ನು ಮಂಗಳವಾದ್ಯದೊಂದಿಗೆ ರಾಜಬೀದಿಯಲ್ಲ್ಲಿ ಉತ್ಸವ ನಡೆಸಲಾಯಿತು.
ಮೂಲ ದೇವರಿಗೆ ವಿವಿಧ ಹಣ್ಣುಗಳನ್ನೊಳಗೊಂಡ ಪಂಚಾಮೃತ ಅಭಿಷೇಕವನ್ನು ಮಾಡಲಾಯಿತು. ನಂತರ ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಆಭರಗಳನ್ನು ಧಾರಣೆ ಮಾಡಿ ವಿವಿಧ ಸುಗಂಧ ಭರಿತ ಪುಷ್ಪಗಳಿಂದ ಅಲಂಕರಿಸಿ ಅಷ್ಠಾವಧಾನ ಸೇವೆ ಸಲ್ಲಿಸಿ ಮಹಾ ಮಂಗಳಾರತಿ, ಭಕ್ತಾದಿಗಳಿಗೆ ವಸಂತ ಸೇವೆಯ ಅಂಗವಾಗಿ ಪಾನಕ ಕೋಸಂಬರಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post