ಭದ್ರಾವತಿ: ಇಲ್ಲಿನ ಹೊಸಮನೆ ಭಾಗದಲ್ಲಿ ನಿನ್ನೆ ಸಂಜೆಯಿಂದ ಹಲವರಿಗೆ ತಿವಿದು ಗಾಯಗೊಳಿಸಿದ್ದ ಬಾಣಂತಿ ಹಸುವನ್ನು ಇಂದು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು.
ಹಸುವೊಂದು ಸುಮಾರು 10 ದಿನಗಳ ಹಿಂದೆ ಕರು ಹಾಕಿದ್ದು, ಇದು ನಾಲ್ಕೈದು ದಿನಗಳಿಂದ ರಸ್ತೆಯಲ್ಲೇ ತನ್ನ ಕರುವಿನೊಂದಿಗೆ ಅಲೆದಾಡುತ್ತಲೇ ಇತ್ತು. ನಿನ್ನೆ ಸಂಜೆ ಚನ್ನಗಿರಿ ರಸ್ತೆಯಲ್ಲಿ ಓರ್ವ ವೃದ್ದೆಗೆ ತಿವಿದಿತ್ತು. ತಿವಿತದ ಹೊಡೆತಕ್ಕೆ ವೃದ್ದೆ ಮೋರಿಯಲ್ಲಿ ಬಿದ್ದಿದ್ದು, ಆಕೆಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಇಂದು ಮುಂಜಾನೆಯಿಂದ ಹೊಸಮನೆ ಎಡಭಾಗದಲ್ಲಿ ತಿರುಗಾಡುತ್ತಿದ್ದ ಹಸು, ನಾಲ್ಕೈದು ಜನಕ್ಕೆ ತಿವಿದಿದ್ದು, ಇದರಲ್ಲಿ ಮೂರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹತ್ತಿರ ಯಾರನ್ನೂ ಬಿಟ್ಟುಕೊಳ್ಳದ ಹಸು, ಸನಿಹ ಹೋದವರ ಮೇಲೆಲ್ಲಾ ದಾಳಿ ಮಾಡುತ್ತಿತ್ತು. ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿಗಳು, ಪಶುವೈದ್ಯರು ಹಾಗೂ ಹೋಮ್‌ಗಾರ್ಡ್‌ಗಳು ಕಾರ್ಯಾಚರಣೆ ನಡೆಸಿ, ಅರೆವಳಿಕೆ ನೀಡಿ, ಹಸುವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಮಾತನಾಡಿರುವ ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಸಿ.ಡಿ. ನಾಗೇಂದ್ರ ಕುಮಾರ್, ಸದ್ಯ ಹಸುವಿನ ವಾರಸುದಾರರ ಯಾರು ಎಂದು ತಿಳಿಯದೇ ಇರುವ ಹಿನ್ನೆಲೆಯಲ್ಲಿ ಪಂಪ್‌ಹೌಸ್‌ನಲ್ಲಿರಿಸುತ್ತೇವೆ. ಹಸುವಿಗೆ ಅಗತ್ಯವಿರುವ ಚಿಕಿತ್ಸೆ ನೀಡುತ್ತೇವೆ. ಸದ್ಯ ಹಸುವಿಗೆ ರೇಬೀಸ್ ಇದೆ ಎಂದು ಸಂಶಯವಿದ್ದು, ಪರೀಕ್ಷೆ ಮಾಡಬೇಕು ಎಂದರು.
ಹಿರಿಯ ಪಶುವೈದ್ಯ ಡಾ.ಸುದರ್ಶನ್ ಮಾತನಾಡಿ, ಹಸುವಿಗೆ ರೇಬೀಸ್ ಇದೆ ಎಂಬ ಸಂಶಯವಿದೆ. ಆದರೆ, ಲೈವ್ ಅನಿಮಲ್‌ನಲ್ಲಿ ರೇಬೀಸ್ ದೃಢವಾಗುವುದಿಲ್ಲ. ಹಸುವಿನ ಪರಿಸ್ಥಿತಿ ನೋಡಿದರೆ ಅನಾರೋಗ್ಯ ಗಂಭೀರವಾದರೆ ಅದು ಹೆಚ್ಚು ದಿನ ಬದುಕುವುದಿಲ್ಲ ಎನಿಸುತ್ತದೆ. ನಾವು ಚಿಕಿತ್ಸೆ ನೀಡುತ್ತೇವೆ. ಆದರೆ, ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದರು.
ನಗರಸಭೆ ಅಧಿಕಾರಿಗಳು, ಪಶುವೈದ್ಯರು, ಸಿಬ್ಬಂದಿಗಳು, ಹೋಮ್‌ಗಾರ್ಡ್‌ಗಳು ಕಾರ್ಯಾಚರಣೆಯಲ್ಲಿದ್ದರು.
Discussion about this post