ಭದ್ರಾವತಿ: ಸಮಾಜಕ್ಕೆ ಒಳಿತು ಮಾಡುವ ಕಾರ್ಯಗಳಿಗೆ ವಿಘ್ನಗಳು ಎದುರಾಗುತ್ತವೆ. ಆದನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ಅಪ್ಪರ್ ಹುತ್ತಾದ ಕೆಂಪೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಒಕ್ಕಲಿಗ ಮಹಿಳಾ ವೇದಿಕೆಯ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಪದಾಧಿಕಾರಿಗಳು ಕೇವಲ ಕುರ್ಚಿಗೆ ಅಂಟಿಕೊಳ್ಳದೆ ಕಾಲ-ಕಾಲಕ್ಕೆ ಸಮಾಜ ಮುಖಿಗಳಾಗಿ ಅಭಿವೃದ್ದಿ ಕಾರ್ಯಗಳನ್ನು ಎಸಗಿ ಸಮಾಜಕ್ಕೆ ಒಳಿತು ಬಯಸಬೇಕು. ಸಂಘಗಳ ಒಳ್ಳೆಯ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ತಮ್ಮ ಅವಧಿ ಮುಗಿದ ನಂತರ ಇತರರಿಗೆ ಉತ್ತಮ ಸಾಧನೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಕಿವಿ ಮಾತು ಹೇಳಿದರು.
ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಮಾತನಾಡಿ ನಾವು ಒಕ್ಕಲಿಗರು ಎಂಬುದಕ್ಕೆ ಹೆಮ್ಮೆ ಪಡಬೇಕೆ ವಿನಃ ಅದು ಪ್ರತಿಷ್ಟ್ಟೆ ಅಥವ ಅಹಂಕಾರದ ಮನೋಭಾವದಿಂದ ಕಾಣಬಾರದು. ಮಹಿಳಾ ಸಂಘಗಳು ಗುಂಪುಗಳಾಗದೆ ಒಗ್ಗಟ್ಟು ಪ್ರದರ್ಶಿಸುವಂತಾಗಬೇಕು. ಸಮಾಜಕ್ಕೆ ಸಂಘಟನೆಗಳು ಅವಶ್ಯಕ. ಆದರೆ ಭಿನ್ನಾಭಿಪ್ರಾಯಗಳು ಬರಬಾರದು ಎಂದರು.
ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷೆ ಬೆಂಗಳೂರಿನ ಭಾರತಿ ಶಂಕರ್ ಮಾತನಾಡಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಕೇವಲ ಒಕ್ಕಲಿಗರ ಜನಾಂಗಕ್ಕೆ ಮಾತ್ರ ಸೀಮಿತವಾಗದೆ ಸಮಾಜದ ಸರ್ವಜನಾಂಗದವರ ಹಿತ ಕಾಪಾಡುವಲ್ಲಿ ಸದಾ ಭದ್ದವಾಗಿದೆ. ಮಠವು ಧಾರ್ಮಿಕ ಕಾರ್ಯಗಳ ಜೊತೆ ಮಾನವೀಯ ಕಾರ್ಯಗಳಿಗೆ ಸದಾ ಸ್ಪಂದಿಸುವುದರ ಜೊತೆಗೆ ಇತ್ತೀಚೆಗೆ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪ ಜಲಪ್ರಳಯದಿಂದ ತೊಂದರೆಗೊಳಗಾದವರಿಗೆ ಸಹಾಯ ಹಸ್ತ ಚಾಚಿರುವುದು ಸಾಕ್ಷಿಯಾಗಿದೆ ಎಂದರು.
ಬೆಂಗಳೂರಿನ ಕೆಂಪೇಗೌಡ ವೈಧ್ಯಕೀಯ ಮಹಾ ವಿದ್ಯಾಲಯದ ಅಧ್ಯಕ್ಷ ಡಿ.ವಿ.ರಮೇಶ್ ಒಕ್ಕಲಿಗರ ಮಹಿಳಾ ವೇದಿಕಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷೆ ಅನ್ನಪೂರ್ಣ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೋಹಿತಾ ನಂಜಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಕೆ.ಎನ್.ಭೈರಪ್ಪಗೌಡ, ಎಚ್.ಬಿ.ರವಿಕುಮಾರ್, ಎಂ.ಎಸ್.ಸುಧಾಮಣಿ, ತಾಪಂ ಅಧ್ಯಕ್ಷೆ ಯಶೋಧಮ್ಮ ಮುಖಂಡರಾದ ಭಾರತಿ ರಾಮಕೃಷ್ಣ, ಮಾಲಾ ರಾಮಪ್ಪ, ಸಂಘದ ಗೌರವ ಅಧ್ಯಕ್ಷೆ ಶಾರದಾ ಅಪ್ಪಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಕುಂತಲ, ಲಲಿತ ಪ್ರಾರ್ಥಿಸಿ, ರಾಧ ಸ್ವಾಗತಿಸಿದರು. ಸುನೀತ ಅಥಿತಿಗಳ ಪರಿಚಯಿಸಿದರು. ವೇಣು ಕುಮಾರಿ ವಂದಿಸಿದರೆ, ಮಣಿ ನಿರೂಪಿಸಿದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post