ಭದ್ರಾವತಿ: ಕೇಂದ್ರದ ಉಕ್ಕು ಪ್ರಾಧಿಕಾರದ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಲು ಬಂಡವಾಳ ತೊಡಗಿಸುವುದು, ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ 26 ದಿನಗಳ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಆಹೋರಾತ್ರಿ 12 ನೇ ದಿನದ ಅನಿರ್ಧಿಷ್ಟಾವಧಿ ಹೋರಾಟದ ಅಂಗವಾಗಿ ಕಾರ್ಖಾನೆಯ ಮುಂಭಾಗ ಟೈರು ಸುಟ್ಟು ಪ್ರತಿಭಟಿಸಿ ರಸ್ತೆ ತಡೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ರಾಜ್ಯ ಸರಕಾರ ಕೇವಲ ಒಂದು ರೂಪಾಯಿ ಮುಖಬೆಲೆಗೆ ಸಮಸ್ತ ಕಾರ್ಖಾನೆ ಮತ್ತು ಕಾರ್ಖಾನೆಯ ಆಸ್ತಿಯನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರ ಮಾಡಿದೆ. ಆದರೆ ಕೇಂದ್ರ ಸರಕಾರ ಸಾವಿರಾರು ಕೋಟಿ ರೂಗಳ ಆಸ್ತಿಯನ್ನು ತನ್ನದಾಗಿಸಿಕೊಂಡು ಕಾರ್ಖಾನೆ ಅಭಿವೃದ್ದಿ ಪಡಿಸದೆ, ಬಂಡವಾಳ ತೊಡಗಿಸದೆ ಮಲತಾಯಿ ಧೋರಣೆ ತಾಳಿದೆ. ಉದ್ಯೊÃಗ ಸೃಷ್ಟಿಮಾಡದೆ ಗುತ್ತಿಗೆ ಕಾರ್ಮಿಕರನ್ನು ಅವಲಂಭಿಸಿದೆ. 1 ಸಾವಿರಕ್ಕೂ ಹೆಚ್ಚಿರುವ ಗುತ್ತಿಗೆ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಸಂಚು ಹೂಡಿರುವ ಆಡಳಿತ ಮಂಡಳಿ ಕಾರ್ಮಿಕರನ್ನು ಗುಲಾಮರಂತೆ ಕಾಣುತ್ತಿದೆ. ಪ್ರಸ್ತುತ 13 ಕೆಲಸ ನೀಡುತ್ತೆವೆ ಎಂದು ನೀಡಿದ್ದ ಭರವಸೆಯು ಪೊಳ್ಳಾಗಿಸುತ್ತಿದೆ. ಅದ್ದರಿಂದ ಗುತ್ತಿಗೆ ಕಾರ್ಮಿಕರ ಮತ್ತು ಕಾರ್ಖಾನೆಯ ರಕ್ಷಣೆಗೆ ಸರಕಾರ ಮುಂದಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
2015 ಆಗಸ್ಟ್ 25 ರಂದು ಕೇಂದ್ರ ಸಚಿವರುಗಳಾದ ನರೇಂದ್ರ ಸಿಂಗ್ ಥೋಮರ್, ಅನಂತಕುಮಾರ್, ಬಿ.ಎಸ್.ಯಡಿಯೂರಪ್ಪ, ಆಯನೂರು ಮಂಜುನಾಥ್, ಬಿ.ವೈ.ರಾಘವೇಂದ್ರ ಮತ್ತಿತರರು ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆ ಉಳಿಸಲು ಮತ್ತು ಬೆಳಸಲು ಒಂದು ಸಾವಿರ ಕೋಟಿ ರೂ ಬಂಡವಾಳ ತೊಡಗಿಸುವುದಾಗಿ ಭರವಸೆ ನೀಡಿದ್ದರು. ನಂತರ ಮತ್ತೊಮ್ಮೆ 2018 ರ ಮಾರ್ಚ್ 16 ರಂದು ಕೇಂದ್ರ ಸಚಿವ ಚೌದರಿ ಬೀರೆಂದರ್ ಸಿಂಗ್, ಅನಂತಕುಮಾರ ಹೆಗಡೆ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ಭೇಟಿ ನೀಡಿ ಸರ್‌ಎಂ ವಿಶ್ವೇಶ್ವರಾಯ ಸ್ಥಾಪಿಸಿದ ಈ ಕಾರ್ಖಾನೆಗೆ ನೂರು ವರ್ಷ ತುಂಬಿದೆ. ಈ ಕಾರ್ಖಾನೆಯನ್ನು ಲಾಭ ನಷ್ಟಗಳಿಂದ ಕಾಣದೆ ಸಾಂಸ್ಕೃತಿಕವಾಗಿ ಉಳಿಸಿಕೊಳ್ಳುವ ಸರ್ವ ಪ್ರಯತ್ನಗಳು ಮಾಡುವುದಾಗಿ ಹೇಳಿ ಗುತ್ತಿಗೆ ಕಾರ್ಮಿಕರಿಗೆ ಬೀದಿ ಪಾಲು ಮಾಡುವುದಿಲ್ಲ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆಂದು ಆರೋಪಿಸಿದರು.
ಇತ್ತೀಚಿಗೆ ಭೇಟಿ ನೀಡಿದ್ದ ಸಂಸದ ಬಿ.ವೈ. ರಾಘವೇಂದ್ರ ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ ಕನಿಷ್ಠ 13 ದಿನವಾದರೂ ಕೆಲಸ ನೀಡಬೇಕೆಂದು ಹೇಳಿದ್ದರೂ ಸಹ ಕಾರ್ಖಾನೆ ಆಡಳಿತ ಮಂಡಳಿ ಅದನ್ನು ಈವರೆಗೂ ಈಡೇರಿಸಿಲ್ಲ. ಗುತ್ತಿಗೆ ಕಾರ್ಮಿಕರನ್ನು ಗುಲಾಮಗಿರಿಯಿಂದ ನಡೆಸಿಕೊಳ್ಳುತ್ತಿದೆ. ಕೂಡಲೇ ಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ಪೂರ್ಣ ಪ್ರಮಾಣದ ಕೆಲಸ ನೀಡುವಂತಾಗಬೇಕು. ಕಾರ್ಮಿಕರಿಗೆ ಭದ್ರತೆ ಒದಗಿಸಬೇಕೆಂದು ಫೆ: 18 ರಿಂದ ನಿರಂತರವಾಗಿ ಆಹೋರಾತ್ರಿ ಸರಣಿ ಧರಣಿ ಮುಷ್ಕರ ನಡೆಸಲಾಗಿದೆ. ಸಂಬಂಧಪಟ್ಟ ಅಧಿಕಾರಿ ವರ್ಗ ಸೂಕ್ತ ಭರವಸೆ ನೀಡದಿರುವುದರಿಂದ ಉದ್ರಿಕ್ತರಾದ ಗುತ್ತಿಗೆ ಕಾರ್ಮಿಕರು ಆಡಳಿತ ಮಂಡಳಿ ವಿರುದ್ದ ಘೋಷಣೆಗಳನ್ನು ಕೂಗಿ ಕಾರ್ಖಾನೆಯ ಮುಖ್ಯದ್ವಾರದ ಮುಂಭಾಗ ಟೈರು ಸುಟ್ಟು ಪ್ರತಿಭಟನೆ ನಡೆಸಿ, ರಸ್ತೆ ತಡೆ ಮಾಡಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸಿದರು. ಅಲ್ಲದೆ ಗುತ್ತಿಗೆ ಕಾರ್ಮಿಕರು ಯಾರು ಕೆಲಸಕ್ಕೆ ಹಾಜರಾಗದೆ ಗೈರಾಗಿ ಆಡಳಿತ ವರ್ಗಕ್ಕೆ ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್ ವಹಿಸಿದ್ದರು. ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ನಗರಸಭಾ ಸದಸ್ಯರಾದ ಆರ್.ಕರುಣಾಮೂರ್ತಿ, ಎಂ.ಎಸ್.ಸುಧಾಮಣಿ, ಮಾಜಿಪಂ ಸದಸ್ಯ ಎಸ್.ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳಾದ ಅಂತೋಣಿರಾಜ್, ರಾಕೇಶ್, ಮಂಜುನಾಥ, ಅಂಥೋಣಿದಾಸ್, ವೆಂಕಟೇಶ್, ಶ್ರೀನಿವಾಸ್, ಪ್ರದೀಪ್‌ಕುಮಾರ್, ಮಹಾದೇವ್, ವಿನಯ್ ಕುಮಾರ್, ಶೇಷಣ್ಣಗೌಡ, ವಿಶ್ವನಾಥ್, ಅರುಣ್ ಸೇರಿದಂತೆ ಹಲವರು ಹಾಜರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post