ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಪ್ರವಾಸಕ್ಕಾಗಿ, ಭಾರತೀಯ ರೈಲ್ವೆ ವಿಶೇಷ ಭಾರತ್ ಗೌರವ್ ಯಾತ್ರಾ ರೈಲುವನ್ನು ಪ್ರಾರಂಭಿಸಲಿದೆ. ಇದು ನಾಲ್ಕು ಜ್ಯೋರ್ತಿ’ಲಿಂಗ ಹಾಗೂ ಏಕತಾ ಪ್ರತಿಮೆಯನ್ನು ಒಳಗೊಂಡ ಒಂಬತ್ತು ದಿನಗಳ ಪ್ರವಾಸವಾಗಿದೆ.
ಈ ರೈಲು ಯಾತ್ರೆಯಲ್ಲಿ ದೇಶದ ಅತ್ಯಂತ ಪವಿತ್ರ ದೇವಾಲಯಗಳು ಮತ್ತು ದೇಶದ ಅತಿ ಎತ್ತರದ ಆಧುನಿಕ ಸ್ಮಾರಕಗಳನ್ನು ನೋಡುವ ಅವಕಾಶ ದೊರೆಯುತ್ತದೆ.
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಈ ಪ್ರವಾಸದ ನಿರ್ವಹಣೆಯನ್ನು ವಹಿಸಿಕೊಂಡಿದೆ. ಈ ಯಾತ್ರೆಯು ಅಕ್ಟೋಬರ್ 25ರಂದು ಅಮೃತಸರದಿಂದ ಪ್ರಾರಂಭವಾಗಲಿದೆ.
ಪ್ರಯಾಣಿಕರು ಜಲಂಧರರ್, ಲೂಧಿಯಾನ, ಚಂಡೀಗಢ, ಅಂಬಾಲ, ಕುರುಕ್ಷೇತ್ರ, ಪಾಣಿಪತ್, ಸೋನಿಪತ್, ದೆಹಲಿ ಕ್ಯಾಂಟ್ ಮತ್ತು ರೇವಾರಿ ನಿಲ್ದಾಣಗಳಲ್ಲಿ ರೈಲು ಹತ್ತಬಹುದು.

ಈ ವಿಶೇಷ ರೈಲಿನಲ್ಲಿ 762 ಪ್ರಯಾಣಿಕರು ಪ್ರಯಾಣಿಸಬಹುದು. ಎಕಾನಮಿ, ಸ್ಟಾಂಡರ್ಡ್ ಮತ್ತು ಕಂಫರ್ಟ್ ಎಂಬ ಮೂರು ವಿಭಾಗಗಳಲ್ಲಿ ಟಿಕೆಟ್’ಗಳು ಲಭ್ಯವಿದ್ದು, ಪ್ರತಿ ವ್ಯಕ್ತಿಗೆ 19,555 ರಿಂದ 39,410 ವರೆಗೆ ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ರೈಲಿನಲ್ಲಿ ಸಸ್ಯಾಹಾರಿ ಊಟ, ವಸತಿ, ಸ್ಥಳೀಯ ಪ್ರಯಾಣ, ದೃಶ್ಯವೀಕ್ಷಣೆ, ಪ್ರಯಾಣ ವಿಮೆ ಮತ್ತು ಭದ್ರತೆ ಸೇರಿವೆ.
ಎಕಾನಮಿ ದರ್ಜೆಯ ಪ್ರಯಾಣಿಕರಿಗೆ ಎಸಿ ರಹಿತ ಹೋಟೆಲ್’ಗಳಲ್ಲಿ ವಸತಿ ಒದಗಿಸಲಾಗುತ್ತದೆ. ದೇವಾಲಯಗಳಿಗೆ ತೆರಳಲು ಆಟೋ-ರಿಕ್ಷಾಗಳನ್ನು ಬಳಸಬೇಕಾಗಬಹುದು. ಆದರೆ, ಈ ಪ್ಯಾಕೇಜ್’ನಲ್ಲಿ ಸ್ಮಾರಕಗಳ ಪ್ರವೇಶ ಶುಲ್ಕ, ವೈಯಕ್ತಿಕ ಖರ್ಚುಗಳು ಮತ್ತು ಟಿಪ್ಸ್’ಗಳನ್ನು ಸೇರಿಸಲಾಗಿಲ್ಲ.
ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಲಾಖೆ ಈ ಪ್ರವಾಸವನ್ನು ಪರಿಚಯಿಸಿದೆ. ಜ್ಯೋತಿರ್ಲಿಂಗಗಳ ಪ್ರಾಚೀನ ವಾಸ್ತುಶಿಲ್ಪ ಮತ್ತು ಏಕತಾ ಪ್ರತಿಮೆಯ ಆಧುನಿಕ ಶೈಲಿಯು ಧಾರ್ಮಿಕ ಭಾವನೆ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ. ಇದು ಸ್ಥಳೀಯ ಪ್ರವಾಸಿಗರ ಗಮನ ಸೆಳೆಯುವ ಹೊಸ ಪ್ರವೃತ್ತಿಯಾಗಿದೆ.

ಭಾರತದಲ್ಲಿ ಯಾತ್ರಾ ಪ್ರವಾಸೋದ್ಯಮಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಪಂಜಾಬ್, ಹರಿಯಾಣ ಮತ್ತು ದೆಹಲಿ ರಾಜ್ಯಗಳ ಭಕ್ತರಲ್ಲಿ ಈ ಪ್ಯಾಕೇಜ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ. ಒಂದೇ ಪ್ರಯಾಣದಲ್ಲಿ ನಾಲ್ಕು ಪವಿತ್ರ ದೇವಾಲಯಗಳು ಮತ್ತು ಒಂದು ರಾಷ್ಟ್ರೀಯ ಹೆಗ್ಗುರುತನ್ನು ಸಂದರ್ಶಿಸುವ ಅವಕಾಶ ಈ ರೈಲು ಯಾತ್ರೆಯ ಮುಖ್ಯ ಆಕರ್ಷಣೆಯಾಗಿದೆ.
ಬುಕಿಂಗ್’ಗಾಗಿ ಐಆರ್’ಟಿಸಿ ಅಧಿಕೃತ ವೆಬ್’ಸೈಟ್ ಅಥವಾ ಚಂಡೀಗಢ ಮತ್ತು ದೆಹಲಿಯಲ್ಲಿರುವ ಪ್ರಾದೇಶಿಕ ಕಚೇರಿಗಳನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post