ಕಲ್ಪ ಮೀಡಿಯಾ ಹೌಸ್ | ಬೀದರ್ |
ಜೆಡಿಎಸ್ – ಬಿಜೆಪಿ ಒಂದಾಗಿರುವುದು ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿ ಬೇರೆ ಪಕ್ಷದವರು ಆಶ್ಚರ್ಯ ಪಡುವಂತಾಗಿದೆ. ಆ ರೀತಿಯ ಜನ ಬೆಂಬಲ ನಮ್ಮ ಮೈತ್ರಿಗೆ ಸಿಕ್ಕಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ #Bandeppa Khashempur ಹೇಳಿದರು.
ಬೀದರ್ ನಗರದಲ್ಲಿರುವ ಕೇಂದ್ರ ಸಚಿವ ಭಗವಂತ ಖೂಬಾರವರ ನಿವಾಸದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ – ಜೆಡಿಎಸ್ ಪಕ್ಷಗಳ ಮುಖಂಡರ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಪಕ್ಷಗಳ ನಾಯಕರನ್ನು ಒಂದುಕಡೆ ಸೇರಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದು ನಮಗೆ ದೊಡ್ಡ ಶಕ್ತಿಯೊಂದಿಗೆ ದೊಡ್ಡಮಟ್ಟದ ಸಂದೇಶವನ್ನು ನೀಡುತ್ತದೆ ಎಂದರು.
ನಾವು ಈ ಮೈತ್ರಿಯನ್ನು ವಿಧಾನಸಭಾ ಚುನಾವಣೆಯ ಮೊದಲೇ ಮಾಡಿಕೊಂಡಿದ್ದರೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನೇಕ ಜನ ನಾಯಕರು ಈಗಾಗಲೇ ಅನೇಕ ಭಾಷಣಗಳಲ್ಲಿ ಹೇಳಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಭಾಗದಲ್ಲಿ ನಾವು ಪಣ ತೋಡಬೇಕಾಗಿದೆ.
ನಮ್ಮ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರನ್ನು ಗೆಲ್ಲಿಸುವಂತ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ. ನಾವು ಈಗಾಗಲೇ ಮೂರನೇ ಬಾರಿಗೆ ಸಭೆ ಸೇರಿದ್ದೇವೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ನಡೆಸುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ತಿಳಿಸಿದರು.
ಬಿಜೆಪಿ ಜೊತೆಗಿನ ಮೈತ್ರಿ ನ್ಯಾಚುರಲ್ ಅಲೈಯನ್ಸ್ ಇದ್ದಂತಿದೆ:
ನಾನು ಬಿಜೆಪಿ ಜೊತೆಗಿನ ಮೈತ್ರಿ ಹಾಗೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಎರಡು ಸಂದರ್ಭಗಳಲ್ಲಿ ಕೂಡ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಮಗೆ ಬಿಜೆಪಿ ಜೊತೆಗಿನ ಮೈತ್ರಿಯ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ಪ್ರೋತ್ಸಾಹ, ಬೆಂಬಲ ಸಿಕ್ಕಿದೆ. ಬಿಜೆಪಿ ಜೊತೆಗಿನ ಮೈತ್ರಿ ನ್ಯಾಚುರಲ್ ಅಲೈಯನ್ಸ್ ಇದ್ದಂತಿದೆ. ಈ ಮೈತ್ರಿಗೆ ನಮ್ಮ ಪಕ್ಷದ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಾವು ನಮ್ಮ ಜೆಡಿಎಸ್ ಪಕ್ಷದಿಂದ ಬೂತ್ ಮಟ್ಟದಿಂದ ನಮ್ಮ ಮತಗಳನ್ನು ಬಿಜೆಪಿಗೆ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಬಂಡೆಪ್ಪ ಖಾಶೆಂಪುರ್ ಹೇಳಿದರು.
Also read: ಕನ್ನಡ ಪತ್ರಿಕೋದ್ಯಮದ ಅರ್ಧ ಶತಮಾನದ ಚರಿತ್ರೆಗೆ ಕೋಲಾರ ಪತ್ರಿಕೆ ಕನ್ನಡಿಯಾಗಿದೆ
ದೇವೇಗೌಡರ ಸೂಚನೆ ಪಾಲಿಸೋಣ:
ಮೋದಿಯವರ ನೇತೃತ್ವದಲ್ಲಿ ಮತ್ತೆ ಭಾರತ ಮುನ್ನಡೆಸಬೇಕಾಗಿದೆ. ಭಾರತ ಮತ್ತಷ್ಟು ಬಲಿಷ್ಟವಾಗಬೇಕಾಗಿದೆ. ವಿಶ್ವಕ್ಕೆ ಮಾದರಿಯಾಗಿ ಸಾಗಬೇಕಾಗಿದೆ. ಆ ನಿಟ್ಟಿನಲ್ಲಿ ಭಾರತಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ನಾವೆಲ್ಲರೂ ಮೋದಿಯವರಿಗೆ ಬೆಂಬಲ ಕೊಡಬೇಕು ಎಂದು ಈಗಾಗಲೇ ಹೆಚ್.ಡಿ ದೇವೇಗೌಡರು ಜೆಡಿಎಸ್ ಪಕ್ಷದ ಶಾಸಕರಿಗೆ, ಮಾಜಿ ಶಾಸಕರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಅದರಂತೆಯೇ ನಾವು ಬೀದರ್ ನಿಂದ ಚಾಮರಾಜನಗರದವರೆಗೂ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕಾಗಿದೆ. ಆ ನಿಟ್ಟಿನಲ್ಲಿ ನಾವು ಬೀದರ್ ನಲ್ಲಿ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಹಂತಹಂತವಾಗಿ ಸಭೆ ಸೇರಿ ನಮ್ಮ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾರವರನ್ನು ಗೆಲ್ಲಿಸಿಕೊಂಡು ಬರುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಪಕ್ಷ (ಪ್ರತಿಪಕ್ಷ) ನಾಯಕರಾದ ಆರ್ ಅಶೋಕ್, ಕೇಂದ್ರ ಸಚಿವರು, ಬೀದರ್ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಭಗವಂತ ಖೂಬಾ, ಜಿಲ್ಲೆಯ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿದ್ದು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ್ ಪಾಟೀಲ್, ಮಲ್ಲಿಕಾರ್ಜುನ ಖೂಬಾ, ಮಹೇಶ್ವರಿ ವಾಲಿ, ಸಜ್ಜದ್ ಸಾಹೇಬ್, ಎಂ.ಜಿ ಮೂಳೆರವರು ಸೇರಿದಂತೆ ಬೀದರ್ ಲೋಕಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post