ಕಲ್ಪ ಮೀಡಿಯಾ ಹೌಸ್ | ಬೀದರ್ |
ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡ್ಬೇಕು, ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡ್ಬೇಕು ಎಂದು ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ #Nikhil Kumaraswamy ಆಗ್ರಹಿಸಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಿಂದ ಬೆಳೆಗಳನ್ನು ಕಳೆದುಕೊಂಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ರೈತರಿಗಾಗಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡ್ಬೇಕು. ಇದು ನಮ್ಮ ಒತ್ತಾಯ ಮತ್ತು ಆಗ್ರಹವಾಗಿದೆ ಎಂದರು.
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕುಮಾರಸ್ವಾಮಿರವರು ಅಧಿಕಾರದಲ್ಲಿದ್ದಾಗಲೆಲ್ಲಾ ರೈತರ ಸಾಲಮನ್ನಾ ಮಾಡಿದ್ದಾರೆ. ರೈತರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವುದರಿಂದ ಈಗಿನ ರಾಜ್ಯ ಸರ್ಕಾರ ಕೂಡಲೇ ರೈತರ ಸಾಲಮನ್ನಾ ಮಾಡ್ಬೇಕು.
ಬೀದರ್ ಜಿಲ್ಲೆಯಲ್ಲಿ 79 ರಿಂದ 80 ಸಾವಿರ ಹೆಕ್ಟೇರ್ ಕೃಷಿ ಪ್ರದೇಶ ಹಾನಿಯಾಗಿದೆ. ಬೀದರ್, ಕಲಬುರಗಿ ಜಿಲ್ಲೆಯಲ್ಲಿ ತೊಗರಿ, ಸೋಯಾ, ಉದ್ದು, ಹೆಸರು, ಹತ್ತಿ ಕೂಡ ಬೆಳೆಯುತ್ತಾರೆ. ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಸಾಕಷ್ಟು ಹಳ್ಳಿಗಳಿಗೆ ನಾನು ಭೇಟಿ ನೀಡಿದ್ದೇನೆ. ಬೀದರ್ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಹೆಚ್ಚುವರಿ ಮಳೆಯಾಗಿದೆ. ಆ ಮಳೆಯಿಂದ ಜಿಲ್ಲೆಯ ಎಲ್ಲೆಡೆ ಸಾಕಷ್ಟು ಹಾನಿ ಸಂಭವಿಸಿದೆ. ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆ ರೈತರ ಪರ ನಿಲ್ಲುವುದು ನಮ್ಮ ಪಕ್ಷದ ಗುರಿಯಾಗಿದೆ.
ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ನಾವು ಸಾಕಷ್ಟು ರೈತ ಪರ ಕೆಲಸ ಮಾಡಿದ್ದೇವೆ. ಬೀದರ್ ಜಿಲ್ಲೆಯಲ್ಲಿ ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಇದ್ದಾರೆ. ರೈತರಿಗೆ ದೊಡ್ಡಮಟ್ಟದ ನಷ್ಟ ಸಂಭವಿಸಿದೆ. ಕಳೆದ ವರ್ಷದ ಬೆಳೆ ವಿಮಾ ಪರಿಹಾರವೇ ಇನ್ನೂ ಸಂಪೂರ್ಣವಾಗಿ ಸಿಕ್ಕಿಲ್ಲ ಎಂದು ರೈತರು ಹೇಳಿದ್ದಾರೆ ಎಂದರು.
ರೈತರ ಜೀವನಕ್ಕೆ ರಾಜ್ಯ ಸರ್ಕಾರ ಯಾವ ಗ್ಯಾರಂಟಿ ನೀಡಿದೆ:
ರಾಜ್ಯ ಸರ್ಕಾರ ಗ್ಯಾರಂಟಿ ಹೆಸರು ಹೇಳುತ್ತೆ. ರೈತರ ಜೀವನಕ್ಕೆ ರಾಜ್ಯ ಸರ್ಕಾರ ಯಾವ ಗ್ಯಾರಂಟಿ ನೀಡಿದೆ. ರೈತರ ವಿಷಯದಲ್ಲಿ ಕೃಷಿ ಸಚಿವರು ಏನ್ ಮಾಡ್ತಿದ್ದಾರೆ ಎಂಬುದೇ ತಿಳಿಯದಂತಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಎಕರೆಗೆ 25 ಸಾವಿರ ರೂ. ಪರಿಹಾರ ಒದಗಿಸಿಕೊಡುವ ಕೆಲಸ ಮಾಡ್ಬೇಕು. ರೈತರಿಗೆ ಕೇಂದ್ರ ಸರ್ಕಾರದಿಂದ ಯಾವ ರೀತಿಯ ಸಹಾಯ ಸಹಕಾರ ಬೇಕು ಆ ರೀತಿ ಸಹಾಯ ಸಹಕಾರ ಮಾಡಿಸಲು ನಾನು ಪ್ರಯತ್ನ ಮಾಡ್ತೇನೆ.
ರೈತರಿಗೆ ಸೂಕ್ತ ಪರಿಹಾರ ಕೊಡ್ಲಿಲ್ಲ ಅಂದ್ರೇ ಜೆಡಿಎಸ್ ಪಕ್ಷದಿಂದ ಬೃಹತ್ ಹೋರಾಟವನ್ನು ಕೈಗೆತ್ತಿಕೊಳ್ತಿವಿ. ಒಂದು ವಾರದ ಒಳಗೆ ಸರ್ಕಾರ ಪರಿಹಾರ ಒದಗಿಸಿಕೊಡಬೇಕು. ನಮ್ಮ ಜೆಡಿಎಲ್ಪಿ ನಾಯಕರಿಗೆ ಇದರ ಕುರಿತು ವರದಿ ನೀಡ್ತಿವಿ. ಅದನ್ನು ಸರ್ಕಾರದ ಗಮನಕ್ಕೆ ತರ್ತೇವೆ. ರೈತರಿಗೆ ಪರಿಹಾರ ಒದಗಿಸಲು ಆಗದಿದ್ದರೇ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿರವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಬಸವರಾಜ್ ಪಾಟೀಲ್ ಹಾರೂರಗೇರಿ, ದೇವೇಂದ್ರ ಸೋನಿ, ಅಶೋಕ್ ಕೊಡಗೆ, ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ತರುಣ್ ನಾಗಮಾರಪಳ್ಳಿ, ಅಭಿ ಕಾಳೆ, ಸುದರ್ಶನ್ ಸುಂದರರಾಜ್, ಶಿವಪುತ್ರ ಮಾಳಗೆ ಸೇರಿದಂತೆ ಅನೇಕರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post