ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚನ್ನಗಿರಿ: ನಮ್ಮ ಒಳಪಂಗಡಗಳ ಬೇಧ ಮರೆತು ನಾವು ಬ್ರಾಹ್ಮಣರು ಎಂದು ಧೈರ್ಯವಾಗಿ ಹೇಳಿಕೊಳ್ಳಬೇಕು. ನಾವು ಎಂದಿಗೂ ಅಭಿಮಾನ ಬಿಡಬಾರದು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಕರೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭೆಯವರು ಶ್ರೀರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾತಿ ಗಣತಿಗೆ ಬಂದಾಗ ಸಾಮಾನ್ಯವಾಗಿ ವಿಪ್ರ ಕುಟುಂಬಗಳು ಮಾಹಿತಿ ನೀಡುವ ಸಂದರ್ಭದಲ್ಲಿ ಒಳಪಂಗಡದ ಹೆಸರು ನೀಡುತ್ತಾರೆ. ಹೀಗಾಗಿ ನಮ್ಮವರ ಅಂಕಿಸಂಖ್ಯೆ ಮಾಹಿತಿ ಸರಿಯಾಗಿ ಸಿಕ್ಕುತ್ತಿಲ್ಲ. ಆದುದರಿಂದ ಬ್ರಾಹ್ಮಣ ಎಂದು ನಮೂದಿಸಿ ಬರೆಸಬೇಕು ಎಂದರು.
ನಮ್ಮ ವಿಪ್ರ ಸಮುದಾಯದ ಏಳಿಗೆಗೆ ಈಗಾಗಲೇ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಅದರಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಯಾವುದೇ ಅಡ್ಡಿಯಿಲ್ಲ. ಏನಾದರೂ ತೊಂದರೆಯಾದಲ್ಲಿ ನನಗೆ ಫೋನ್ ಮಾಡಿ ನಿಮಗೆ ಸೂಕ್ತ ಮಾರ್ಗದರ್ಶನ ನೀಡುತ್ತೇನೆ ಎಂದಿದ್ದಾರೆ.

ನಾನು ಆರ್’ಎಸ್’ಎಸ್ ಹಾಗೂ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು ಪ್ರಸ್ತುತ ಮಂಡಳಿಯ ಅಧ್ಯಕ್ಷ ಹೊಣೆ ವಹಿಸಿಕೊಂಡಿರುವೆ. ಈ ಮೊದಲು ಕೇವಲ ತಮ್ಮ ವಿಪ್ರ ಹಿತ ಚಿಂತನೆಗೆ ಅವಕಾಶವೇ ಸಿಕ್ಕಿರಲಿಲ್ಲ. ಹಳೇಬೀಡಿನಲ್ಲಿ ತಂದೆಯವರು ಶಾನುಭೋಗರಾಗಿದ್ದರು. ಅಲ್ಲಿಂದ ಐಟಿಐ ಓದಿಕೊಂಡು ಬೆಂಗಳೂರಿಗೆ ಬಂದು ಜೀವನ ಸಾಗಿಸಿದೆ. ನಂತರ ರಾಜಕೀಯ ಪ್ರವೇಶ ಪಡೆದೆ ಎಂದು ತಮ್ಮ ಸಾಮಾಜಿಕ, ರಾಜಕೀಯ ಪಯಣದ ಅನುಭವ ಹಂಚಿಕೊಂಡರು.
ಪ್ರಸ್ತುತ ಮಂಡಳಿಯ ಜವಾಬ್ದಾರಿಯಿಂದ ರಾಜ್ಯದಾದ್ಯಂತ ಪ್ರವಾಸ ಮಾಡಿದಾಗ ವಿಪ್ರರ ನೋವು ನಲಿವುಗಳು ಸಂವೇದನೆಗೆ ಸಿಕ್ಕವು. ನಿಜಕ್ಕೂ ಮೂರು ವರ್ಷಗಳ ಅವಧಿಯಲ್ಲಿ ಜನಪ್ರಿಯ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಮಂಡಳಿಯ ಯೋಜನೆಗಳನ್ನು ಸಾರ್ಥಕ ಜಾರಿಗೆ ತರುತ್ತೇನೆ. ಇದಕ್ಕೆ ರಾಜ್ಯದ ಎಲ್ಲ ವಿಪ್ರ ಸಂಘಟನೆಗಳ ಬೆಂಬಲ, ಸಹಕಾರ ನೀಡಬೇಕು ಎಂದು ಕೋರಿದರು.

ದಾವಣಗೆರೆ ಜಿಲ್ಲಾ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷ ಶ್ರೀ ಬಿ.ಟಿ. ಅಚ್ಯುತ ಅವರು ಮಾತನಾಡಿ, ಸಂಘಟನೆಯ ಕಲಾವಂತಿಕೆಯನ್ನು ಚನ್ನಗಿರಿ ವಿಪ್ರ ಸಮಾಜದಿಂದ ಕಲಿಯಬೇಕಿದೆ. ಕೇವಲ ಬೆರಳೆಣಿಕೆಯ ವಿಪ್ರ ಕುಟುಂಬಗಳಿದ್ದರೂ ಯಾರೂ ಗೈರು ಹಾಜರಾಗದೇ ಸಭೆ, ಸಮ್ಮೇಳನಕ್ಕೆ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಪಿ. ರಂಗನಾಥ ರಾಯರು ಮಂಡಳಿ ವತಿಯಿಂದ ಏನೇ ಕಾರ್ಯಗಳು ಆಗಬೇಕು ಎಂದು ತಾಲೂಕಿನ ವಿಪ್ರ ಸಮುದಾಯ ತಮ್ಮನ್ನು ಸಂಪರ್ಕಿಸಿದಲ್ಲಿ ಮಂಡಳಿಯೊಂದಿಗೆ ವ್ಯವಹರಿಸಿ ಸೂಕ್ತ ಕ್ತಮಕೈಗೊಳ್ಳಲು ತಾವು ಸದಾ ಸಿದ್ಧವಿರುವುದಾಗಿ ಭರವಸೆ ನೀಡಿದರು.
ನಂತರ ತಾಲೂಕು ಸಭಾವತಿಯಿಂದ ಸಚ್ಚಿದಾನಂದಮೂರ್ತಿಯವರಿಗೆ ರಂಗನಾಥರಾಯರು ಶಾಲು ಹೊದಿಸಿ, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಅವರು ಫಲಪುಷ್ಪ ನೀಡಿ ಅಭಿನಂದಿಸಿದರು.
ಶ್ರೀ ರಾಘವೇಂದ್ರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಅಧ್ಯಕ್ಷ ಶ್ರೀಕೃಷ್ಣ ಉಪಾಧ್ಯ ಶಾಲು, ಫಲಪುಷ್ಪ ನೀಡಿ ಮಂಡಳಿ ಅಧ್ಯಕ್ಷರಿಗೆ ಅಭಿನಂದಿಸಿದರು. ಬಿ.ಟಿ. ಅಚ್ಯುತ ಮತ್ತು ದಿನೇಶ್ ಜೋಷಿ ಅವರನ್ನೂ ಕೂಡ ಆತ್ಮೀಯವಾಗಿ ಸತ್ಕರಿಸಲಾಯಿತು.

ವಿಪ್ರ ಹಿತ ಚಿಂತನೆ ಕುರಿತು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಹಿರಿಯ ಸಲಹಾ ಸಂಪಾದಕ ಡಾ. ಎನ್ ಸುಧೀಂದ್ರ, ಲೇಖಕ ಶ್ರೀಗುರುರಾಜ್ ಮತ್ತು ಶ್ರೀಮತಿ ಉಮಾ ಫಣಿರಾಜ್ ತಮ್ಮ ಅನಿಕೆಗಳನ್ನು ಹಂಚಿಕೊಂಡರು. ಶ್ರೀರಾಘವೇಂದ್ರ ಸೇವಾ ಸಮಿತಿ ಟ್ರಸ್ಟಿನ ಶ್ರೀ ಸಿ.ವಿ. ಸುಮತೀಂದ್ರ ಅವರು ಚನ್ನಗಿರಿಯ ವಿಪ್ರ ಕುಟುಂಬಗಳ ಚಿತ್ರಣ ನೀಡಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಹವ್ಯಕ ಸಮಾಜದ ಮಾಜಿ ಕಾರ್ಯದರ್ಶಿ ಶ್ರೀ ಕೆ.ಜಿ. ಮಂಜುನಾಥ ಶರ್ಮ ಅವರು ವಿಪ್ರ ಹಿತಚಿಂತನೆಗಳ ಬಗ್ಗೆ ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದರು.
ಮಂಡಳಿಯ ಅಧ್ಯಕ್ಷರಿಗೆ ಬ್ರಾಹ್ಮಣ ಮಹಾಸಭಾದ ವತಿಯಿಂದ ಸಾರ್ವಜನಿಕ ಸ್ವಾಗತ ಕೋರಲಾಯಿತು. ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಶ್ರೀಚಿದಂಬರ ದೀಕ್ಷಿತ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಅರ್ಚನೆ ಮಂಗಳಾರತಿ ಸೇವೆಯಲ್ಲಿ ಅಧ್ಯಕ್ಷರು ಭಕ್ತಿಯಿಂದ ಪಾಲ್ಗೊಂಡಿದ್ದರು. ಶ್ರೀಮತಿ ಲಕ್ಷ್ಮೀ ಶ್ರೀಧರ್ ಅವರು ಪ್ರಾರ್ಥಿಸಿ, ತಾಲೂಕು ಸಭಾದ ಉಪಾಧ್ಯಕ್ಷ ಹಾಗೂ ಹಿರಿಯ ಸಂಶೋಧಕ ಶ್ರೀ ಸಂತೇಬೆನ್ನೂರು ಸುಮತೀಂದ್ರ ನಾಡಿಗ್ ಸ್ವಾಗತ ಬಯಸಿದರು. ಸಭಾದ ನಿರ್ದೇಶಕಿ ಶ್ರೀಮತಿ ಉಮಾ ಫಣಿರಾಜ್ ಆಭಾರ ಮನ್ನಣೆ ಮಾಡಿ, ಶ್ರೀ ಅರುಣ್ ಕಾರ್ಯಕ್ರಮ ನಿರೂಪಿಸಿದರು.
(ವರದಿ: ಡಾ.ಸುಧೀಂದ್ರ)
Get in Touch With Us info@kalpa.news Whatsapp: 9481252093





Discussion about this post