ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧಿತರಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17ರವರೆಗೂ ಇಡಿ ಕಸ್ಟಡಿಗೆ ವಹಿಸಿ, ನ್ಯಾಯಾಲಯ ಆದೇಶಿಸಿದೆ.
ಈ ಕುರಿತಂತೆ ಇಂದು ಸಂಜೆ ಆದೇಶ ನೀಡಿರುವ ದೆಹಲಿ ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶರಾದ ಅಜಯ್ ಕುಮಾರ್ ಕುಹರ್, ಡಿಕೆಶಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಡಿಕೆಶಿ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಡಿಕೆ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಆದರೆ, ಮತ್ತೆ ಕಸ್ಟಡಿಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ಇನ್ನು ನಾಲ್ಕು ದಿನ ಇಡಿ ವಶದಲ್ಲೇ ಇರಬೇಕಿದೆ.
ಡಿಕೆಶಿ ಬಳಿ ಎಷ್ಟು ಬ್ಯಾಂಕ್ ಖಾತೆಯಿದೆ ನೋಡಿ:
ಇನ್ನು, ಪ್ರಕರಣ ಕುರಿತಂತೆ ಡಿಕೆಶಿಗೆ ಜಾಮೀನು ನೀಡದಂತೆ ವಾದ ಮಂಡಿಸಿದ ಇಡಿ ಪರ ವಕೀಲರು ಶಿವಕುಮಾರ್’ಗೆ ಸಂಬಂಧಿಸಿದ ಸುಮಾರು 317 ಬ್ಯಾಂಕ್ ಖಾತೆಗಳಿಂದ ವ್ಯವಹಾರ ನಡೆದಿದೆ. ಹೀಗಾಗಿ, ಈ ಬಗ್ಗೆ ತನಿಖೆ ನಡೆಯಬೇಕಿದೆ. ಇಡಿ ಸಂಗ್ರಹಿಸಿರುವ ದಾಖಲೆಗಳಿಗೆ ಶಿವಕುಮಾರ್ ಉತ್ತರ ನೀಡಬೇಕಾಗಿದೆ. ಡಿಕೆಶಿ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವುದು ಇಡಿ ಗಮನಕ್ಕೆ ಬಂದಿದೆ. ಅಲ್ಲದೇ ಡಿಕೆಶಿಗೆ ಮಾತ್ರವೇ ತಿಳಿದಿರುವ ಸಂಗತಿಯನ್ನು ಇಡಿಗೆ ನೀಡುತ್ತಿಲ್ಲ. ಹೀಗಾಗಿ ಇನ್ನೂ ಐದು ದಿನಗಳ ಕಾಲ ವಿಚಾರಣೆ ನಡೆಸಲು ಡಿಕೆಶಿಯನ್ನು ಇಡಿ ಕಸ್ಟಡಿಗೆ ಒಪ್ಪಿಸಬೇಕೆಂದು ವಾದ ಮಂಡಿಸಿದ್ದಾರೆ.
Discussion about this post