ನವದೆಹಲಿ: ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಸುಮಾರು 300ಕ್ಕೂ ಅಧಿಕ ಉಗ್ರರು ಸಕ್ರಿಯರಾಗಿದ್ದು, ಇವರಿಗೆಲ್ಲಾ ಹಲವು ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
ಈ ಕುರಿತಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹನ್ಸರಾಜ್ ಆಹಿರ್ ಇಂದು ಲೋಕಸಭೆಗೆ ಮಾಹಿತಿ ನೀಡಿದ್ದು, ನಮ್ಮ ಸರ್ಕಾರ ಭಯೋತ್ಪಾದನೆಯನ್ನು ಹತ್ತಿಕ್ಕಲು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ, ಪ್ರಮುಖವಾಗಿ ಉಗ್ರರ ವಿರುದ್ಧ ಎಂತಹುದ್ದೇ ಕಾರ್ಯಾಚರಣೆ ನಡೆಸಲು ಪೂರ್ಣ ಸ್ವಾತಂತ್ರವನ್ನು ಭದ್ರತಾ ಪಡೆಗಳಿಗೆ ನೀಡಲಾಗಿದೆ ಎಂದರು.
ಸಚಿವರು ಕಲಾಪಕ್ಕೆ ನೀಡಿರುವ ಮಾಹಿತಿಯಂತೆ, 2014ರಿಂದ 2018ರವರೆಗೂ ಜಮ್ಮು ಕಾಶ್ಮೀರ ಹಾಗೂ ಗಡಿ ಭಾಗದಲ್ಲಿ 1213 ಉಗ್ರ ಚಟುವಟಿಕೆಗಳು ನಡೆದಿವೆ. ಇದರಿಂದ 183 ನಾಗರಿಕರು ಸಾವನ್ನಪ್ಪಿದ್ದು, 738 ಉಗ್ರರನ್ನು ದಮನ ಮಾಡಲಾಗಿದೆ ಎಂದರು.
ನಿರಂತರವಾಗಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸುವ ಜೊತೆಯಲ್ಲಿ ಉನ್ನತೀಕರಿಸಲಾಗುತ್ತಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಹತ್ತಿಕ್ಕಲು ಗ್ರಿಡ್ ಕಾರ್ಯಾಚರಣೆಯನ್ನು ಪ್ರಬಲಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, ಭದ್ರತಾ ಸಂಸ್ಥೆಗಳನ್ನು ಬಲಗೊಳಿಸಲಾಗಿದೆ ಎಂದರು.
ಇನ್ನು, ಎಲ್’ಒಸಿ ಬಳಿ ಪಾಕ್ ಸೇನೆಯಿಂದ 2018ರಲ್ಲಿ 1454, 2017ರಲ್ಲಿ 860, 2016ರಲ್ಲಿ 228 ಅಪ್ರಚೋದಿತ ದಾಳಿ ನಡೆದಿದ್ದು, ಅಂತಾರಾಷ್ಟಿಯ ಗಡಿ ಬಳಿ 2018ರಲ್ಲಿ 508 ದಾಳಿಗಳು, 2017ರಲ್ಲಿ 111 ಹಾಗೂ 2016ರಲ್ಲಿ 221 ಅಪ್ರಚೋದಿತ ದಾಳಿಗಳು ನಡೆದಿವೆ.
Discussion about this post