ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಆಕಸ್ಮಿಕವಾಗಿ ನಿನ್ನೆ ಕೊಳವೆ ಬಾವಿಯಲ್ಲಿ #Borewell ಬಿದ್ದು ಜೀವನ್ಮರಣದ ಹೋರಾಟದಲ್ಲಿರುವ 2 ವರ್ಷದ ಸಾತ್ವಿಕ್ ಎಂಬ ಮಗುವನ್ನು ಹೊರತೆಗೆಯುವ ರಕ್ಷಣಾ ಕಾರ್ಯಾಚರಣೆ #RescueOperation ಕೊನೆಯ ಹಂತದಲ್ಲಿದ್ದು, ಸುರಕ್ಷಿತವಾಗಿ ಹೊರತೆಗೆಯುವ ಭರವಸೆ ವ್ಯಕ್ತವಾಗಿದೆ.
ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ನಿನ್ನೆ ಮಗು ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದು, ಎನ್’ಡಿಆರ್’ಎಫ್ #NDRF ಹಾಗೂ ಎಸ್’ಡಿಆರ್’ಎಫ್ #SDRF ತಂಡ ಮಗುವಿನ ರಕ್ಷಣೆಗಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ ಮಗು ಸಿಲುಕಿರುವ ಸ್ಥಳಕ್ಕೆ ಇನ್ನು ಕೇವಲ ಅರ್ಧದಿಂದ ಒಂದು ಅಡಿಗಳಷ್ಟು ಮಾತ್ರ ಬಾಕಿಯಿದ್ದು, ಜೀವಂತ ರಕ್ಷಣೆ ಮಾಡಲು ಎಲ್ಲ ಪ್ರಯತ್ನಗಳು ನಡೆದಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳಿಗೆ ಮಗುವಿನ ಅಳು ಕೇಳಿಸಿರುವುದು ಕೊಂಚ ಸಮಾಧಾನ ಮೂಡಿಸಿದೆ.
ಅಲ್ಲದೇ ಪ್ರಮುಖವಾಗಿ, ಮಗು ಕಾಲುಗಳನ್ನು ಅಲುಗಾಡಿಸುತ್ತಿರುವ ದೃಶ್ಯ ಬಾವಿಯೊಳಗೆ ಇಳಿಸಿರುವ ಕ್ಯಾಮೆರಾದಲ್ಲಿ ದಾಖಲಾಗಿರುವುದು ಮಗು ಸುರಕ್ಷಿತವಾಗಿದೆ ಎಂಬುದನ್ನು ಖಾತ್ರಿ ಪಡಿಸಿದೆ.
ನಿನ್ನೆಯಿಂದಲೂ ನಿರಂತರವಾಗಿ ಎನ್’ಡಿಆರ್’ಎಫ್ ಹಾಗೂ ಎಸ್’ಡಿಆರ್’ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಬೃಹತ್ ಗಾತ್ರದ ಬಂಡೆಗಳು ಅಡ್ಡ ಬಂದಿದ್ದು, ಕೊಂಚ ತೊಂದರೆಯಾಗಿತ್ತು.
ಸುತ್ತಮುತ್ತಲ ಸುಮಾರು 7-8 ಗ್ರಾಮದ ಜನರು ಸ್ಥಳದಲ್ಲಿ ಜಮಾಯಿಸಿದ್ದು, ಮಗು ಜೀವಂತ ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಲ್ಲದೇ, ಮಗು ಸುರಕ್ಷಿತವಾಗಿ ಬದುಕಿ ಬರಲಿ ಎಂದು ರಾಜ್ಯದಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ.



















