1988
ನನಗೆ ಅದು ಮೊದಲ ವಿಮಾನಯಾನ. ಚಿಕ್ಕ ಮಕ್ಕಳಂತೆ ಕಿಟಕಿ ಪಕ್ಕವೇ ಕೂತಿದ್ದೆ. ನಾವು ಹುಡುಕುತ್ತಿದ್ದ ಹಂತಕ ರಾಜನ್‌ನ ಭಾವ ವೇಣು ನನ್ನ ಪಕ್ಕ ಕೂತಿದ್ದ. ಆತನ ಪಕ್ಕ ಇನ್‌ಸ್ಪೆಕ್ಟರ್ ಸುರೇಂದ್ರ ನಾಯಕ್ ಕುಳಿತಿದ್ದರು. ನಾನು ಮೋಡಗಳ ರಾಶಿ ನೋಡುತ್ತ ಮೊದಲ ಹಾರಾಟದ ಖುಷಿಯಲ್ಲಿದ್ದೆ. ಅಷ್ಟರಲ್ಲಿ ಸುರೇಂದ್ರ ನಾಯಕ್ ‘ಅಶೋಕ್ ಮಜಾ ನೋಡು. ನಿನ್ನೆ ರಾತ್ರಿ ನೀನು ಆರೋಪಿಗಳ ಬಗ್ಗೆ ಬಾಯಿ ಬಿಡಿಸಲು ಈ ವೇಣುವನ್ನು ಲಾಕಪ್‌ನಲ್ಲಿ ‘ಏರೋಪ್ಲೇನ್’ ಏರಿಸಿದ್ದೆ. ಈವಾಗ ಅವನು ನಿಜವಾದ ಏರೋಪ್ಲೇನ್‌ನಲ್ಲಿ ಕೂತಿದ್ದಾನೆ.’ ಎಂದು ತಮಾಷೆ ಮಾಡಿದರು! ಪೊಲೀಸ್ ಏಟು ತಿಂದು ಸುಸ್ತಾಗಿ, ಜೋಲು ಮೋರೆ ಹಾಕಿಕೊಂಡು ಕೂತಿದ್ದ ವೇಣುವಿನ ಮುಖದಲ್ಲೂ ಈ ಮಾತು ಕೇಳಿ ನಗು ಅರಳಿತು. ‘ಹೌದು ಸಾರ್… ಲೈಫ್‌ನಲ್ಲಿ ಒಂದೇ ಒಂದು ಸಾರಿ ಏರೋಪ್ಲೇನ್‌ನಲ್ಲಿ ಕೂರಬೇಕು ಎಂದು ಕನಸು ಕಾಣುತ್ತಿದ್ದೆ. ಅದು ಇಂದು ನನಸಾಗಿದೆ. ತುಂಬಾ ಥ್ಯಾಂಕ್‌ಸ್ ಸರ್,’ ಎಂದ ವೇಣು!
ಪ್ರಯಾಣದ ಮಧ್ಯೆ ಇನ್‌ಸ್ಪೆಕ್ಟರ್ ನಾಯಕ್ ‘ಅಶೋಕ್ ವೆಪೆನ್ ಇಟ್ಟುಕೊಂಡಿದ್ದಿಯೇನೋ,’ ಎಂದು ಪ್ರಶ್ನಿಸಿದರು. ಎಸ್ ಸರ್ ಎಂದೆ ನಾನು. ನೀವು ನಂಬಲಿಕ್ಕಿಲ್ಲ. 13 ರೌಂಡ್‌ಸ್ ಲೋಡ್ ಆಗಿದ್ದ ಪಾಯಿಂಟ್ 9 ಎಂಎಂ ಪಿಸ್ತೂಲ್‌ಅನ್ನು ನಾನು ಟಿ ಶರ್ಟ್‌ನ ಅಡಿಯಲ್ಲಿ ಬೆಲ್‌ಟ್ಗೆ ಸಿಕ್ಕಿಸಿಕೊಂಡು ಕುಳಿತಿದ್ದೆ! ಈಗ ಸಣ್ಣ ಗುಂಡುಸೂಜಿಯನ್ನೂ ವಿಮಾನದೊಳಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಆದರೆ ಆ ದಿನಗಳಲ್ಲಿ ಬಿಗಿ ಭದ್ರತೆಯ ಕಟ್ಟಳೆಗಳಿರಲಿಲ್ಲ. ಪಿಸ್ತೂಲ್, ರಿವಾಲ್ವರ್ ತೆಗೆದುಕೊಂಡು ಹೋಗಬೇಕಾದಾಗ ನಿಗದಿತ ಫಾರ್ಮ್ ತುಂಬಿ ಅದನ್ನು ಸಿಬ್ಬಂದಿಗೆ ಒಪ್ಪಿಸಬೇಕು. ಇಳಿಯುವಾಗ ರಶೀದಿ ತೋರಿಸಿ ವಾಪಸ್ ಪಡೆಯಬೇಕು ಎಂಬ ನಿಯಮ ಇತ್ತಾದರೂ ಅದನ್ನು ಕಟ್ಟುನಿಟ್ಟಾಗಿ ಯಾರೂ ಪಾಲಿಸುತ್ತಿರಲಿಲ್ಲ. ಮುಂದೆ ಭಯೋತ್ಪಾದಕರು ವಿಮಾನಗಳನ್ನು ಹೈಜಾಕ್ ಮಾಡಲಾರಂಭಿಸಿದ ಬಳಿಕ ಭದ್ರತೆ ಬಿಗಿಯಾಗುತ್ತ ಹೋಯಿತು.
ಬೆಂಗಳೂರಿನ ಠಾಕೂರ್ ಕುಟುಂಬದ ಇಬ್ಬರು ಸದಸ್ಯರ ಹತ್ಯೆ ನಾಗರಿಕರಲ್ಲಿ ತಲ್ಲಣ ಮೂಡಿಸಿತ್ತು. ಆ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪಳನಿಯನ್ನು ವಿಚಾರಿಸಿದಾಗ ರಾಜನ್ ಎಂಬ ಕಲಾವಿದ ಸೈಟ್ ಖರೀದಿ ವಿಚಾರದಲ್ಲಿ ಇನ್ನೂ ಮೂವರನ್ನು ಕರೆದುಕೊಂಡು ಆ ಮನೆಗೆ ಹೋಗಿದ್ದ ಮಾಹಿತಿ ನೀಡಿದ್ದ. ಆದರೆ ಅವರ ಜಾಡು ಹಿಡಿದು ಬಂಧಿಸುವುದು ಸವಾಲಾಗಿತ್ತು. ರಾಜನ್‌ನ ಭಾವ ವೇಣು ಎಂಬಾತ ಬೆಂಗಳೂರಿನಲ್ಲೇ ಇದ್ದಾನೆ ಎಂಬ ಮಾಹಿತಿಯನ್ನು ಪಳನಿ ನೀಡಿದ. ನಾವು ಆತನನ್ನು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಎತ್ತಿಹಾಕಿಕೊಂಡು ಬಂದೆವು. ಆತ ಬಾಯಿ ಬಿಡದಿದ್ದಾಗ ‘ಏರೋಪ್ಲೇನ್’ ಏರಿಸಬೇಕಾಯಿತು. ಆಗ ಬಾಯಿಬಿಟ್ಟ ಆತ. ರಾಜನ್ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿತ್ತು ಎಂದ.
ಆ ಠಾಣೆಯ ‘ರೋಗ್‌ಸ್ ಗ್ಯಾಲರಿ’ಯಲ್ಲಿ ರಾಜನ್ ಸ್ಲೇಟು ಹಿಡಿದಿದ್ದ ಫೋಟೋ ಇತ್ತು. ಆ ಫೋಟ್ ತೆಗೆದುಕೊಂಡು 2 ಗಂಟೆ ಸುಮಾರಿಗೆ, ಹಂತಕರ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಕೆಲಸದ ಹುಡುಗಿ ಭಾಗ್ಯ ಮತ್ತು ಸಂಜಯ್ ಇದ್ದ ಆಸ್ಪತ್ರೆಗೆ ಹೋದೆವು. ಅವರಿಬ್ಬರು ಫೋಟೋದಲ್ಲಿದ್ದ ರಾಜನ್‌ನ ಗುರುತು ಹಿಡಿದರು. ಹೀಗೆ ನಾವು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ. ಕೊಲೆ ನಡೆದ ಏಳು ಗಂಟೆಯೊಳಗೆ ಈ ಕೃತ್ಯದ ಹಿಂದಿನ ಜಾಲ ಭೇದಿಸಿದ್ದೆವು. ಮರುದಿನ ಬೆಳಗ್ಗೆ 6 ಗಂಟೆಗೆ ಕ್ರೈಂ ಡಿಸಿಪಿ ಕಸ್ತೂರಿರಂಗನ್ ಅವರ ಕ್ವಾರ್ಟ್ರಸ್‌ಗೆ ಹೋಗಿ ತನಿಖೆಯ ಪ್ರಗತಿ ತಿಳಿಸಿದೆವು. ಅವರು ರಾಜ್ಯ ಕಂಡ ಶ್ರೇಷ್ಠ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ನಮ್ಮ ಬೆನ್ನು ತಟ್ಟಿದ ಅವರು ಏಳು ಗಂಟೆ ಸುಮಾರಿಗೆ ನಗರ ಪೊಲೀಸ್ ಆಯುಕ್ತ ಶ್ರೀಧರನ್ ಬಳಿ ಕರೆದುಕೊಂಡು ಹೋದರು.
ಮಧ್ಯಾಹ್ನ 2.30ರ ಏರ್ ಇಂಡಿಯಾ ವಿಮಾನದಲ್ಲಿ ವೇಣುವನ್ನು ಕರೆದುಕೊಂಡು ಇನ್‌ಸ್ಪೆಕ್ಟರ್ ನಾಯಕ್ ಮತ್ತು ನಾನು ತ್ರಿವೆಂಡ್ರಂಗೆ ಹೋಗುವ ನಿರ್ಧಾರ ಕೈಗೊಳ್ಳಲಾಯಿತು. ನಮ್ಮ ಲೆಕ್ಕಾಚಾರದ ಪ್ರಕಾರ ಹಂತಕರಿದ್ದ ರೈಲು ಮಧ್ಯಾಹ್ನ 3.30ಕ್ಕೆ ತ್ರಿವೆಂಡ್ರಂ ತಲುಪುತ್ತಿತ್ತು. ವಿಮಾನ 3.15ಕ್ಕೆ ಲ್ಯಾಂಡ್ ಆಗುತ್ತಿತ್ತು. ಆದರೆ ಬೆಂಗಳೂರಿನಿಂದ ವಿಮಾನ ಹೊರಡುವಾಗ ತುಸು ವಿಳಂಬವಾದ್ದರಿಂದ ಅಲ್ಲಿ 3.30ಕ್ಕೆ ತಲುಪಿತು. ಲಗೇಜ್ ಎತ್ತಿಕೊಂಡು ಓಡುತ್ತ ಟ್ಯಾಕ್ಸಿ ಹಿಡಿದು ರೈಲು ನಿಲ್ದಾಣ ತಲುಪಿದೆವು. ಆದರೆ ಅಷ್ಟರಲ್ಲಾಗಲೇ 3.50 ಆಗಿಬಿಟ್ಟಿತ್ತು. ಹೈಲೆಂಡ್ ಎಕ್‌ಸ್ಪ್ರೆಸ್‌ನಿಂದ ಬಹುತೇಕ ಪ್ರಯಾಣಿಕರು ಇಳಿದು ಹೋಗಿದ್ದರು. ಹಾಗೆಯೇ ಆರೋಪಿಗಳೂ ಜಾಗ ಖಾಲಿ ಮಾಡಿದ್ದರು. ನಮಗೆ ನಿರಾಸೆಯಾಯಿತು.
ಸುತ್ತುಮುತ್ತಲಿನ ಲಾಡ್‌ಜ್ಗಳಲ್ಲಿ ತಲಾಷ್ ಮಾಡಿದರೂ ಪ್ರಯೋಜನವಾಗಲಿಲ್ಲ. ಡಿಸಿಪಿ ಕಸ್ತೂರಿರಂಗನ್ ಅವರಿಗೆ ಎಸ್‌ಟಿಡಿ ಮೂಲಕ ಸಂಪರ್ಕಿಸಿ. ಮಲಯಾಳ ಬರುವ ಸಿಬ್ಬಂದಿ, ಒಂದಿಷ್ಟು ಹಣ ಮತ್ತು ಮನೆಯಿಂದ ನಮ್ಮ ಬಟ್ಟೆಬರೆ ಕಳಿಸಿಕೊಡುವಂತೆ ವಿನಂತಿಸಿದೆವು. ಮಾರನೇ ದಿನ ಮಲಯಾಳ ಬರುವ ಎಎಸ್‌ಐ ಕವಿರಾಜನ್, ಮುಖ್ಯ ಪೇದೆಗಳಾದ ಟಿ.ಜಿ. ವರ್ಗಿಸ್, ಚಾಮಯ್ಯ, ರೇಣುಕ ಮತ್ತು ನಾಗೇಶ್ ಜತೆಗೆ ಪಳಿನಿ ನಮ್ಮ ಜತೆ ಸೇರಿಕೊಂಡರು. ಅಲ್ಲಿಂದ ಮುಮದೆ 25 ದಿನಗಳ ಕಾಲ ನಾವು ಕೇರಳದ ಎಲ್ಲೆಂದರಲ್ಲಿ ಹಂತಕರಿಗಾಗಿ ಬೇಟೆಯಾಡಬೇಕಾಯಿತು.
(ಮುಂದುವರೆಯುವುದು)
Discussion about this post