ಜಗ್ಗೇಶ್‌ಗೆ ಹೊಡೆಯುವುದನ್ನು ನೋಡಿ ‘ನೀವು ನನ್ನ ಪ್ರೇಮಿಗೆ ಹೊಡೆಯುವುದನ್ನು ನಿಲ್ಲಿಸುವವರೆಗೂ ನಾನು ಹೀಗೆಯೇ ಮಾಡುತ್ತಿರುತ್ತೇನೆ,’ ಎಂದು ನಮಗೇ ಸವಾಲು ಹಾಕಿದಳು. ಕೊನೆಗೆ ನಾವೇ ಹೊಡೆಯುವುದನ್ನು ನಿಲ್ಲಿಸಬೇಕಾಯಿತು.
ಅಷ್ಟು ಹೊತ್ತಿಗೆ ಆ ಹುಡುಗಿಯ ತಂದೆ, ತಾಯಿ ಠಾಣೆಗೆ ಓಡೋಡಿ ಬಂದರು. ನಾವು ಆ ಹುಡುಗಿಯನ್ನು ಅವರ ಸುಪರ್ದಿಗೆ ಒಪ್ಪಿಸಿದೆವು. ಅವರು ಮಗಳನ್ನು ತಬ್ಬಿಕೊಂಡು ಬಿಕ್ಕಳಿಸಿದರು. ಒಲ್ಲದ ಮನಸ್ಸಿನಿಂದ ಹುಡುಗಿ ಪಾಲಕರ ಜತೆ ಮನೆಗೆ ಹೋದಳು. ಲಾಕಪ್‌ನ ಮೂಲೆಯಲ್ಲಿ, ಒಳ ಉಡುಪಿನಲ್ಲಿ ಕೂತಿದ್ದ ಜಗ್ಗೇಶ್ ಮೌನವಾಗಿ ರೋದಿಸುತ್ತಿದ್ದರು. ಅವರ ಮೈಕೈಯಿಂದ ರಕ್ತ ಜಿನುಗುತ್ತಿತ್ತು.
ಹುಡುಗಿ ಅಪ್ರಾಪ್ತ ವಯಸ್ಸಿನವಳಾದ ಕಾರಣ ಜಗ್ಗೇಶ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಯಿತು. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಠಾಣೆ ಎಎಸ್‌ಐಗೆ ಸೂಚಿಸಿ, ನಾವು ಮತ್ತೆ ಕೊತ್ವಾಲ್ ಬೇಟೆ ಕಾರ್ಯಾಚರಣೆಗಿಳಿದೆವು.
ಅಷ್ಟರಲ್ಲಿ, ಆಗ ಶ್ರೀರಾಂಪುರ ಠಾಣೆಯ ಎಸ್‌ಐ ಆಗಿದ್ದ ಎಂ.ಕೆ. ಗಣಪತಿ ಅವರು ಸ್ಟೇಷನ್‌ಗೆ ಬಂದಾಗ ಜಗ್ಗೇಶ್ ಸ್ಥಿತಿ ಕಂಡು ಬೇಸರಗೊಂಡರು. ದಕ್ಷ, ಪ್ರಾಮಾಣಿಕ ಮತ್ತು ಸಹಾನುಭೂತಿಯುಳ್ಳವರಾಗಿದ್ದ ಗಣಪತಿ ಅವರು ಯಾರಿಗೂ ಹೆಚ್ಚು ಹೊಡೆಯುತ್ತಿರಲಿಲ್ಲ. ನಮ್ಮ ವಶದಲ್ಲಿರುವ ಆರೋಪಿಗಳನ್ನು ಮಾನವೀಯತೆಯಿಂದ ನೋಡಿಕೊಳ್ಳಬೇಕು ಎಂದು ನಮಗೆ ಆಗಾಗ ಹೇಳುತ್ತಿದ್ದರು.
ತತಕ್ಷಣ ಗಣಪತಿ ಅವರನ್ನು ಸಂಪರ್ಕಿಸಬೇಕೆಂದು ನನಗೆ ವೈರ್‌ಲೆಸ್ ಮೆಸೆಜ್ ಬಂತು. ನಾನು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದಾಗ ಅವರು, ಆ ಹುಡುಗನಿಗೆ ನೀವೆಲ್ಲ ಸೇರಿ ಅಷ್ಟೊಂದು ಹೊಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ನನಗೂ ಅವರ ಮಾತು ಹೌದೆನಿಸಿ, ಪಶ್ಚಾತ್ತಾಪವಾಯಿತು.
ಕುತೂಹಲದ ಸಂಗತಿ ಎಂದರೆ, ಈ ಘಟನೆಯ ನಂತರ ಜಗ್ಗೇಶ್ ಮತ್ತು ಆ ಬಾಲಕಿ ಪ್ರೇಮ ಮತ್ತಷ್ಟು ತೀವ್ರವಾಯಿತು. ಜಗ್ಗೇಶ್ ಹಳ್ಳಿಯಿಂದ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದ ಹುಡುಗ, ಸಿನಿಮಾ ನಟ ಆಗಬೇಕೆಂದು ಅವಕಾಶಕ್ಕಾಗಿ ಗಾಂಧಿನಗರದಲ್ಲಿ ಸೈಕಲ್ ಹೊಡೆಯುತ್ತಿದ್ದವರು. ಈ ಹುಡುಗನ ಸಹವಾಸ ಬಿಡುವಂತೆ ಹುಡುಗಿಗೆ ಮನೆಯಲ್ಲಿ ಪರಿಪರಿಯಾಗಿ ಬುದ್ಧಿ ಹೇಳಿದರು. ಮೈಂಡ್ ವಾಶ್ ಮಾಡಲು ನಾನಾ ತಂತ್ರಗಳನ್ನು ಹೆಣೆದರು. ಆದರೂ ಆ ಹುಡುಗಿ ಜಗ್ಗೇಶ್ ಕಡೆಗಿನ ಪ್ರೀತಿಯಿಂದ ವಿಮುಖಳಾಗಲಿಲ್ಲ. ಸುಮಾರು ಎರಡು ವರ್ಷ ಅವರ ಪ್ರೀತಿ ಗುಪ್ತಗಾಮಿನಿಯಾಗಿಯೇ ಮುಂದುವರಿಯಿತು. ಹುಡುಗಿ ಆತನನ್ನು ಮರೆತಿದ್ದಾಳೆ ಎಂದು ಮನೆಯವರು ಭಾವಿಸಿದ್ದರು. ಆದರೆ ಅದೊಂದು ದಿನ ಆಕೆ ಇದ್ದಕ್ಕಿದ್ದಂತೆ ಜಗ್ಗೇಶ್ ಜತೆ ಪರಾರಿಯಾದಳು!
ತಮ್ಮ ಪ್ರೀತಿ ಉಳಿಸಿಕೊಡುವಂತೆ ಜಗ್ಗೇಶ್ ಸುಪ್ರೀಂಕೋರ್ಟ್‌ನ ಮೆಟ್ಟಿಲು ಹತ್ತಿದರು. ಅಲ್ಲಿ ಸ್ವಾರಸ್ಯಕರವಾದ ವಾದ-ವಿವಾದ ನಡೆದವು. ಹುಡುಗಿಗೆ 18 ವರ್ಷ ತುಂಬಲು ಎರಡು ಮೂರು ತಿಂಗಳು ಬಾಕಿ ಇತ್ತು. ಹುಡುಗಿಯನ್ನು ಹುಡುಗ ಅಪಹರಿಸಿದ್ದಾನೆ ಎಂದು ಪೋಷಕರ ವಕೀಲರು ವಾದಿಸಿದರು.
ಇವರ ಪ್ರೇಮ ಪುರಾಣ ಕೇಳಿ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಏನನ್ನಿಸಿತೋ ಏನೋ, ಹುಡುಗ, ಹುಡುಗಿಯನ್ನು ಖಾಸಗಿಯಾಗಿ ಮಾತಾಡಿಸಿ ಅವರ ಪ್ರೀತಿಯ ತೀವ್ರತೆ ಅರ್ಥಮಾಡಿಕೊಂಡರು. ‘ಈ ಹುಡುಗ, ಹುಡುಗಿಯನ್ನು ಅವರ ಪಾಡಿಗೆ ಬಿಡಿ. ಅವರು ಮದುವೆ ಮಾಡಿಕೊಂಡು ಹಾಯಾಗಿರಲಿ ಬಿಡಿ’ ಎಂದು ಬಿಟ್ಟರು! ಅಂದರೆ ಹುಡುಗಿಗೆ 18 ವರ್ಷ ತುಂಬುವ ಮೊದಲೇ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿಬಿಟ್ಟಿತು. ಈ ಪ್ರಕರಣ ಸುಪ್ರೀಂಕೋರ್ಟ್ ಪಾಲಿಗೆ ಐತಿಹಾಸಿಕ ಎಂದು ಆಗ ವ್ಯಾಖ್ಯಾನಿಸಲಾಗಿತ್ತು.
ಮುಂದೆ 2006ರಲ್ಲಿ ನಾನು ಹಲಸೂರು ಗೇಟ್ ಸಬ್ ಡಿವಿಷನ್‌ನಲ್ಲಿ ಎಸಿಪಿಯಾಗಿದ್ದಾಗ, ರವೀಂದ್ರ ಕಲಾ ಕ್ಷೇತ್ರದಲ್ಲಿ ಸನ್ಮಾನ ಏರ್ಪಡಿಸಿದ್ದರು. ಡ್ಯೂಟಿಯಲ್ಲಿದ್ದರಿಂದ ಸಮವಸ್ತ್ರದಲ್ಲೇ ವೇದಿಕೆ ಏರಿ ಕುಳಿತೆ. ಪಕ್ಕ ತಿರುಗಿ ನೋಡಿದರೆ ಜಗ್ಗೇಶ್! ನನ್ನ ಜತೆ ಅವರಿಗೂ ಸನ್ಮಾನವಿತ್ತು. ಅಷ್ಟು ಹೊತ್ತಿಗಾಗಲೇ ಅವರು ಜನಪ್ರಿಯ ನಟರಾಗಿ ಬೆಳೆದು ಬಿಟ್ಟಿದ್ದರು. ಹುಡುಗಿಯ ಮನೆಯವರು ಹಳೆಯ ಕಹಿ ಘಟನೆಗಳನ್ನು ಮರೆತು ಜಗ್ಗೇಶ್ ಜತೆ ಮಧುರ ಬಾಂಧವ್ಯ ಹೊಂದಿದ್ದರು. ಹಿಂದೆ ನಾನು ಜಗ್ಗೇಶ್‌ಗೆ ಆ ಪರಿ ಹೊಡಿದದ್ದು ನೆನಪಾಗಿ ಇರಸುಮುರಸು ಉಂಟಾಯಿತು.
ಜಗ್ಗೇಶ್ ಎದ್ದು ನಿಂತು ಮೈಕ್ ಹಿಡಿದು ಮಾತನಾಡಲು ಮುಂದಾಗಿ, ನನ್ನ ಕಡೆ ತಿರುಗಿದರು. ನನ್ನ ಬಗ್ಗೆ ಏನು ಹೇಳುತ್ತಾರೋ ಎಂಬ ದಿಗಿಲು ನನಗೆ, ಆವತ್ತು ನಾವು ಅವರನ್ನು ಲಾಕಪ್‌ಗೆ ತಳ್ಳಿದ ಘಟನೆಯನ್ನೇ ಜಗ್ಗೇಶ್ ನೆನಪಿಸಿಕೊಳ್ಳ ತೊಡಗಿದರು. ಆದರೆ ಆ ನೋವಿನ ಘಟನೆಯನ್ನು ಅವರು ತಮಾಷೆ ಧಾಟಿಯಲ್ಲಿ ಹೇಳಿ ನೂರಾರು ಪ್ರೇಕ್ಷಕರನ್ನು ನಕ್ಕು ನಲಿಸಿದ್ದನ್ನು ಕಂಡು, ನಾನವರ ಪ್ರತಿಭೆಗೆ ಬೆರಗಾಗಿ ಹೋದೆ.
‘ಅವತ್ತು ಅಶೋಕ್‌ಕುಮಾರ್ ಅವರು ನನ್ನನ್ನು ಚೆಡ್ಡಿಯಲ್ಲಿ ನಿಲ್ಲಿಸಿ ಹೊಡೆದರು. ಎಷ್ಟು ಬೈಗುಳ ಚಾಲ್ತಿಯಲ್ಲಿದೆಯೋ ಅಷ್ಟೂ ಬೈಗುಳವನ್ನು ನನ್ನ ಮೇಲೆ ಪ್ರಯೋಗಿಸಿದರು,’ ಎಂದು ಹೇಳುತ್ತ, ನಾನು ಬೈದ, ಹೊಡೆದ ರೀತಿ, ತಾವು ಲಾಕಪ್‌ನಲ್ಲಿ ಮುದುರಿಕೊಂಡು ಕೂತ ಬಗೆಯನ್ನು ಮಿಮಿಕ್ರಿ ಮಾಡಿ ತೋರಿಸಿದರು. ‘ಸಿನಿಮಾವೊಂದರಲ್ಲಿ ನನಗೆ ಪೊಲೀಸ್ ಅಧಿಕಾರಿಯ ಪಾತ್ರ ಸಿಕ್ಕಿತ್ತು. ನಾನು ಆರೋಪಿಯೊಬ್ಬನನ್ನು ಠಾಣೆಗೆ ಎಳೆದು ತಂದು ನಾಲ್ಕು ಬಾರಿಸಿ ಲಾಕಪ್‌ಗೆ ತಳ್ಳುವ ಸನ್ನಿವೇಶ ಅದಾಗಿತ್ತು. ನಾನು ಖಾಕಿ ಧರಿಸುತ್ತಲೇ, ಅಶೋಕ್‌ಕುಮಾರ್ ನನಗೆ ಹೊಡೆದ, ಬೈದ ಮಾದರಿಯಲ್ಲೇ ಅಭಿನಯಿಸಿದೆ. ಆ ಸೀನ್ ಸೂಪರ್ ಹಿಟ್,’ ಎಂದು ತಮಾಷೆ ಮಾಡಿದರು.
ನಾನಾ ರೀತಿಯ ಕಷ್ಟ-ನಷ್ಟಗಳನ್ನು ಎದುರಿಸಿ ತಾವು ಪ್ರೇಮ ಯುದ್ಧದಲ್ಲಿ ಗೆಲುವು ಸಾಧಿಸಿದ್ದನ್ನು ಭಾವುಕರಾಗಿ ಹೇಳಿದರು. ಅವರ ಮಾತು ಕೇಳಿ ನನ್ನ ಕಣ್ಣಲ್ಲಿ ನೀರು ಜಿನುಗಿತು. ನಾನು ಎದ್ದು ಅವರನ್ನು ತಬ್ಬಿಕೊಂಡೆ. ಆ ಬಳಿಕ ಜಗ್ಗೇಶ್ ವೇದಿಕೆಯಲ್ಲಿ ನನ್ನ ಜತೆ ನಗುನಗುತ್ತ ಆತ್ಮೀಯತೆಯಿಂದ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಅವರ ಅಮರ ಮಧುರ ಪ್ರೇಮ ಪ್ರಸಂಗ ಮರೆಯಲಾಗದು.
ಭೂಗತ ದೊರೆ ಕೊತ್ವಾಲ ರಾಮಚಂದ್ರನನ್ನು ಹಿಡಿಯಲು ಹೊರಟಿದ್ದ ನಾವು. ಆ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಜಗ್ಗೇಶ್ ಅವರನ್ನು ಹಿಡಿದು ಲಾಕಪ್‌ಗೆ ತಳ್ಳಬೇಕಾಯಿತು. ಏಕೆಂದರೆ, 16 ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆಂಬ ದೂರು ಅವರ ವಿರುದ್ಧ ದಾಖಲಾಗಿತ್ತು.
Discussion about this post