1985
ಏನಪ್ಪಾ ಅಶೋಕಾ… ಆ ಹುಡುಗನಿಗೆ ನೀವೆಲ್ಲ ಸೇರಿ ಈ ರೀತಿ ಹೊಡೆಯೋದಾ? ಅವನ ಮುಖಾಮೂತಿಯನ್ನೆಲ್ಲಾ ಚಚ್ಚಿ ಹಾಕಿಬಿಟ್ಟಿದ್ದೀರಾ… ಪಾಪ ಅವನೀಗ ಎಲ್ಲಿಂದ ಉರಿರಾಡಬೇಕು. ಎಲ್ಲಿಂದ ಮಾತಾಡಬೇಕು ಅನ್ನೋದು ಗೊತ್ತಾಗದೆ ವಿಲವಿಲ ಒದ್ದಾಡುತ್ತಿದಾನೆ…
ಬೆಂಗಳೂರಿನ ಶ್ರೀರಾಂಪುರ ಠಾಣೆಯ ಎಸ್‌ಐ ಆಗಿದ್ದ ಎಂ.ಕೆ. ಗಣಪತಿ ಅವರು ನನ್ನನ್ನು ಮೆತ್ತಗಿನ ದನಿಯಲ್ಲಿ ಗದರಿದರು. ಅಂದು ನಮ್ಮಿಂದ ಹಿಗ್ಗಾಮುಗ್ಗಾ ಏಟು ತಿಂದು ಲಾಕಪ್‌ನಲ್ಲಿ ಕೂತಿದ್ದವರು ಯಾರು ಗೊತ್ತೆ? ಕನ್ನಡ ಚಿತ್ರರಂಗದ ಈಗಿನ ಖ್ಯಾತ ನಟ, ನವರಸ ನಾಯಕ ಜಗ್ಗೇಶ್!
ಅಂದು ಅವರು ನಮ್ಮ ಕೈಯಲ್ಲಿ ಸಿಕ್ಕಿ ಹಾಕಿಕೊಂಡು ಗೂಸಾ ತಿಂದಿದ್ದು ಸಿನಿಮೀಯ ಪ್ರೇಮ ಪ್ರಕರಣದಿಂದಾಗಿ, ಸತ್ಯ ಹೇಳಬೇಕೆಂದರೆ ಅಂದು ನಾವು ಭೂಗತ ದೊರೆ ಕೊತ್ವಾಲ್ ರಾಮಚಂದ್ರನ ಮೇಲಿನ ಸಿಟ್ಟನ್ನು ಜಗ್ಗೇಶ್ ಮೇಲೆ ತೀಸಿರಿಕೊಂಡಿದ್ದೆವು. ‘ಅತ್ತೆಯ ಮೇಲಿನ ಸಿಟ್ಟು ಕೊತ್ತಿಯ (ಬೆಕ್ಕಿನ ಮೇಲೆ) ಮೇಲೆ’ ಅನ್ನೋದು ಇದಕ್ಕೇ ಇರಬೇಕು! ಕೊತ್ವಾಲ್ ರಾಮಚಂದ್ರನ ಆಟಾಟೋಪ ಆ ದಿನಗಳಲ್ಲಿ ಮಿತಿ ಮೀರಿತ್ತು. ಅಟ್ ಎನಿ ಕಾಸ್‌ಟ್ ಸೆರೆ ಹಿಡಿಯಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಟ್ರಾಫಿಕ್ ಡಿಸಿಪಿಯಾಗಿದ್ದ ಅಜಯ್‌ಕುಮಾರ್ ಸಿಂಗ್ ನೇತೃತ್ವದ ತಂಡದಲ್ಲಿ ಸಂಗ್ರಾಮ್ ಸಿಂಗ್, ನಾನು ಮತ್ತು ನಾಗೇಂದ್ರಕುಮಾರ್ ಇದ್ದೆವು. ನಾವು ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಕೊತ್ವಾಲ್‌ನನ್ನು ಹುಡುಕಿ ಹುಡುಕಿ ಹತಾಶರಾಗಿದ್ದೆವು.
ಅದೇ ಹೊತ್ತಿಗೆ, ಒಂದು ದಿನ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಂಗ್ರಾಮ್ ಸಿಂಗ್‌ಗೆ ಫೋನ್ ಕರೆ ಬಂತು. ಆ ಕರೆ ಕೇಳಿದ ತಕ್ಷಣ ಅವರು ವಿಚಲಿತರಾದರು. ಒಂದು ಕ್ಷಣವನ್ನೂ ತಡ ಮಾಡದೆ ನಮ್ಮನ್ನು ಕರೆದುಕೊಂಡು ಎಂ.ಜಿ. ರಸ್ತೆಯ ಅಜಂತಾ ಹೋಟೆಲ್‌ನ ರೂಮ್‌ವೊಂದಕ್ಕೆ ನುಗ್ಗಿದರು. ಅಲ್ಲಿ ನಡು ವಯಸ್ಸಿನ ದಂಪತಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಇನ್ನೇನು ಕುಡಿಯುವದರಲಕ್ಲಿದ್ದರು. ನಾವು ಅದನ್ನು ಕಸಿದುಕೊಂಡೆವು.
ಆ ದಂಪತಿ ಶ್ರೀರಾಂಪುರದಲ್ಲಿ ಪ್ರತಿಷ್ಠಿತ ಶಾಲೆಯೊಂದನ್ನು ನಡೆಸುತ್ತಿದ್ದರು. ಆ ಶ್ರೀಮಂತ ಕುಟುಂಬದ 16 ವರ್ಷದ ಹೈಸ್ಕೂಲ್ ಹುಡುಗಿಯನ್ನು ಯುವಕನೊಬ್ಬ ಪಟಾಯಿಸಿಕೊಂಡು ಹೋಗಿದ್ದ. ಆ ಯುವ ಪ್ರೇಮಿಯೇ ಜಗ್ಗೇಶ್! ಈ ಘಟನೆಯಿಂದ ಆ ದಂಪತಿ ಕಂಗಾಲಾಗಿದ್ದರು. ಮರ್ಯಾದೆಯಿಂದ ನೊಂದು ಆತ್ಮಹತ್ಯೆಗೆ ನಿರ್ಧರಿಸಿ ಫೋನ್ ಮಾಡಿ ಕೊನೆಯ ಮಾತನ್ನಾಡಲು ಬಯಸಿದ್ದರು.
ನಾವು ಅವರಿಗೆ ಸಮಾಧಾನ ಮಾಡಿದೆವು. ಯಾವ ಕಾರಣಕ್ಕೂ ದುಡುಕಿನ ಕೃತ್ಯಕ್ಕೆ ಕೈಹಾಕದಂತೆ ತಾಕೀತು ಮಾಡಿದೆವು. 24 ಗಂಟೆಯೊಳಗೆ ನಿಮ್ಮ ಮಗಳನ್ನು ಹುಡುಕಿ ತಂದೊಪ್ಪಿಸುತ್ತೇವೆ ಎಂದು ಮಾತು ಕೊಟ್ಟೆವು. ಹೀಗೆ, ಕೊತ್ವಾಲ್ ಬೇಟೆಗೆಂದು ಹೊರಟಿದ್ದ ನಮ್ಮ ತಂಡ ಜಗ್ಗೇಶ್ ತಲಾಶ್‌ಗಿಳಿಯಿತು. ಸಂಗ್ರಾಮ್ ಸಿಂಗ್ ಶ್ರೀರಾಂಪುರ ಠಾಣೆಯಲಿ ಹಲವು ವರ್ಷ ಲಾ ಆ್ಯಂಡ್ ಆರ್ಡರ್ ಎಸ್‌ಐ ಆಗಿ ಕೆಲಸ ಮಾಡಿದ್ದರಿಂದ, ಅಲ್ಲಿಯ ಗಲ್ಲಿಗಲ್ಲಿಯ ಪರಿಚಯ ಅವರಿಗಿತ್ತು. ಅವರು ಸೀದಾ ಶ್ರೀರಾಂಪುರಕ್ಕೆ ಹೋದವರೇ ನಾಲ್ಕಾರು ಹುಡುಗರನ್ನು ಎಳೆದು ತಂದು ಬೆಂಡೆತ್ತಿ, ಜಗ್ಗೇಶ್ ಅವಿತುಕೊಂಡಿದ್ದು ಯಶವಂತಪುರದಲ್ಲಿ ಎನ್ನುವುದನ್ನು ಪತ್ತೆ ಹಚ್ಚಿದರು. ನಮ್ಮನ್ನು ಕರೆದುಕೊಂಡು ಅಲ್ಲಿಗೆ ಹೋದರು. ಸ್ನೇಹಿತರೊಬ್ಬರ ಮನೆಯ ಮಹಡಿಯಲ್ಲಿ ಜಗ್ಗೇಶ್, ಹುಡುಗಿಯ ಜೊತೆ ಆಸರೆ ಪಡೆದಿದ್ದರು.
ನಾವು ಅವರಿಬ್ಬರನ್ನೂ ಮಧ್ಯಾಹ್ನ 3:30ರ ಸುಮಾರಿಗೆ ಶ್ರೀರಾಂಪುರ ಠಾಣೆಗೆ ಕರೆ ತಂದೆವು. ಕೊತ್ವಾಲ್ ಕೈಗೆ ಸಿಗದ ಕಾರಣ ನಮಗೆ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚತೊಡಗಿತ್ತು. ಇದರ ಮಧ್ಯೆ ಈ ಹುಡುಗನ ಲವ್ ಖಯಾಲಿಯಿಂದಾಗಿ ನಮ್ಮ ಕಾರ್ಯಾಚರಣೆಗೆ ಆಡಚಣೆಯಾಗಿದ್ದರಿಂದ ಕಿಡಿಕಿಡಿಯಾಗಿದ್ದೆವು. ಜಗ್ಗೇಶ್‌ರ ಬಟ್ಟೆ ಬಿಚ್ಚಿಸಿ ಬರಿ ಮೈಯಲ್ಲಿ ನಿಲ್ಲಿಸಿ ಲಾಠಿ ರುಚಿ ತೋರಿಸಲಾರಂಭಿಸಿದೆವು. ನಾವು ಅವರಿಗೆ ಒಂದೊಂದು ಏಟು ಕೊಡುತ್ತಿದ್ದಾಗಲೂ ಆ ಹುಡುಗಿ ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳತೊಡಗಿದಳು. ‘ನೀನು ತಲೆಯನ್ನು ಗೋಡೆಗೆ ಎಷ್ಟು ಬೇಕಾದರೂ ಚಚ್ಚಿಕೋ ನಾವೂ ನೋಡಿ ಬಿಡುತ್ತೇವೆ’ ಎಂದು ಗದರಿ, ಹೊಡೆಯುವುದನ್ನು ಮುಂದುವರೆಸಿದೆವು. ಆ ಹುಡುಗಿ ಅಳುತ್ತ ಇನ್ನೂ ಜೋರಾಗಿ ತಲೆ ಚಚ್ಚಿಕೊಳ್ಳತೊಡಗಿದಳು!
(ಆಗ ಆಕೆ ಹೇಳಿದ್ದೇನು ಗೊತ್ತಾ? ನಾಳೆ ಓದಿ)
Discussion about this post